ADVERTISEMENT

ರೈನಾ-ಜಡೇಜ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 19:59 IST
Last Updated 6 ಜುಲೈ 2013, 19:59 IST
ಸುರೇಶ್ ರೈನಾ (ಎಡಬದಿ) ಹಾಗೂ ರವೀಂದ್ರ ಜಡೇಜ 	-ಸಂಗ್ರಹ ಚಿತ್ರ
ಸುರೇಶ್ ರೈನಾ (ಎಡಬದಿ) ಹಾಗೂ ರವೀಂದ್ರ ಜಡೇಜ -ಸಂಗ್ರಹ ಚಿತ್ರ   

ಪೋರ್ಟ್ ಆಫ್ ಸ್ಪೇನ್ (ಪಿಟಿಐ): ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ವೆಸ್ಟ್ ಇಂಡೀಸ್ ಎದುರಿನ ಪಂದ್ಯದ ವೇಳೆ ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜ ನಡುವೆ ಮಾತಿನ ಚಕಮಕಿ ನಡೆದ ಘಟನೆ ಜರುಗಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ 31ನೇ ಓವರ್ ಬೌಲ್ ಮಾಡಿದ ಜಡೇಜ ಅವರ ಐದನೇ ಎಸೆತದಲ್ಲಿ ರೈನಾ ವಿಂಡೀಸ್ ಬ್ಯಾಟ್ಸ್‌ಮನ್ ಸುನಿಲ್ ನಾರಾಯಣ್ ಬಾರಿಸಿದ ಚೆಂಡನ್ನು ಕೈಚೆಲ್ಲಿದ್ದರು. ಇದರಿಂದ ಬೇಸರಗೊಂಡ ಜಡೇಜ ಸೂಚ್ಯವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದರು.

ಬಳಿಕ 34ನೇ ಓವರ್ ಬೌಲಿಂಗ್ ಮಾಡಿದ ಜಡೇಜ ಐದನೇ ಎಸೆತದಲ್ಲಿ ನಾರಾಯಣ್ ಅವರನ್ನು ಔಟ್ ಮಾಡಿದರು. ಇದನ್ನು ಇಶಾಂತ್ ಶರ್ಮ ಕ್ಯಾಚ್ ಪಡೆದಿದ್ದರು. ಈ ವೇಳೆ ಸೌರಾಷ್ಟ್ರದ ಆಲ್‌ರೌಂಡರ್ ರೈನಾ ನಿಂತಿದ್ದ ಸ್ಥಳಕ್ಕೆ ಬಂದು ಏನನ್ನೋ ಹೇಳಿದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಉತ್ತರ ಪ್ರದೇಶದ ರೈನಾ ಕೂಡಾ ಮಾತಿಗೆ ಮಾತು ಬೆಳೆಸಿದರು. ಅದ್ದರಿಂದ ಪರಿಸ್ಥಿತಿ ತಾರಕಕ್ಕೇರಿತು.

ಒಂದೇ ತಂಡದ ಇಬ್ಬರು ಆಟಗಾರರ ನಡುವೆ ಮಾತಿನ ಚಕಮಕಿ ನಡೆದಾಗ ನಾಯಕ ವಿರಾಟ್ ಕೊಹ್ಲಿ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ರೈನಾಗೂ ಸಮಾಧಾನದಿಂದ ಇರುವಂತೆ ಹೇಳಿದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆಡಳಿತ ಮಂಡಳಿ ಇಬ್ಬರೂ ಆಟಗಾರರಿಗೆ ಎಚ್ಚರಿಕೆ ನೀಡಿದೆ. ಆದರೆ ಪಂದ್ಯದ ಕೊನೆಯಲ್ಲಿ ಈ ಆಟಗಾರರು ಪರಸ್ಪರ ಹೆಗಲ ಮೇಲೆ ಕೈ ಹಾಕಿ ಏನೂ ನಡೆದೇ ಇಲ್ಲ ಎಂಬಂತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.