ADVERTISEMENT

ರೋಚಕ ಜಯ ತಂದಿತ್ತ ದೋನಿ

ಕ್ರಿಕೆಟ್: ಲಂಕಾ ತಂಡವನ್ನು ಮಣಿಸಿ ಕಿರೀಟ ಮುಡಿಗೇರಿಸಿದ ಭಾರತ

​ಪ್ರಜಾವಾಣಿ ವಾರ್ತೆ
Published 12 ಜುಲೈ 2013, 19:59 IST
Last Updated 12 ಜುಲೈ 2013, 19:59 IST

ಪೋರ್ಟ್ ಆಫ್ ಸ್ಪೇನ್ (ಪಿಟಿಐ): ಒತ್ತಡದ ಸಂದರ್ಭದಲ್ಲಿ ಬ್ಯಾಟಿಂಗ್ ಮಾಡುವುದು ಹೇಗೆ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟ ನಾಯಕ ಮಹೇಂದ್ರ ಸಿಂಗ್ ದೋನಿ ಭಾರತದ ರೋಚಕ ಗೆಲುವಿಗೆ ಕಾರಣರಾದರು.

`ಮಹಿ' ಬ್ಯಾಟಿಂಗ್ ಬಲದಿಂದ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಒಂದು ವಿಕೆಟ್‌ನ ಗೆಲುವು ಪಡೆದ ಭಾರತ ಮತ್ತೊಂದು ಟ್ರೋಫಿಯನ್ನು ಎತ್ತಿಹಿಡಿಯಿತು. ಲಂಡನ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆದ್ದು ಬೀಗಿದ್ದ ಮಹಿ ಬಳಗ ಇದೀಗ ವಿಂಡೀಸ್ ನೆಲದಲ್ಲೂ ಕಪ್ ಎತ್ತಿಹಿಡಿದಿದೆ. ಈ ಮೂಲಕ ಎರಡು ಟ್ರೋಫಿಗಳೊಂದಿಗೆ ತವರಿಗೆ ಬಂದಿಳಿಯಲಿದೆ.

ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಲಂಕಾ ನೀಡಿದ್ದ 202 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಅಂತಿಮ ಓವರ್‌ನಲ್ಲಿ 15 ರನ್‌ಗಳ ಅಗತ್ಯವಿತ್ತು. ಕೈಯಲ್ಲಿದ್ದದ್ದು ಕೇವಲ ಒಂದು ವಿಕೆಟ್. ಲಂಕಾ ಆಟಗಾರರು ಹೆಚ್ಚು ಕಡಿಮೆ ಗೆಲುವಿನ ಸಂಭ್ರಮ ಆಚರಿಸತೊಡಗಿದ್ದರು.

ಆದರೆ ಶಾಮಿಂದ ಎರಂಗಾ ಎಸೆದ ಅಂತಿಮ ಓವರ್‌ನಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿದ ದೋನಿ (ಅಜೇಯ 45, 52 ಎಸೆತ, 5 ಬೌಂ, 2 ಸಿಕ್ಸರ್) ಗೆಲುವಿನ ರೂವಾರಿ ಎನಿಸಿದರು. ಇನ್ನೂ ಎರಡು ಎಸೆತಗಳು ಇರುವಂತೆಯೇ ಭಾರತ ಜಯ ಸಾಧಿಸಿತು.

ಸಾಧಾರಣ ಗುರಿ ಬೆನ್ನಟ್ಟಿದ ಭಾರತ 32ನೇ ಓವರ್‌ನಲ್ಲಿ ಮೂರು ವಿಕೆಟ್‌ಗೆ 139 ರನ್ ಗಳಿಸಿ ನಿರಾಯಾಸ ಗೆಲುವಿನ ಸೂಚನೆ ನೀಡಿತ್ತು. ಆದರೆ ರಂಗನಾ ಹೆರಾತ್ (20ಕ್ಕೆ 4) ಕೈಚಳಕ ತೋರಿ ಲಂಕಾ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. ಭಾರತದ ಒಂದೊಂದು ವಿಕೆಟ್ ಬೀಳುತ್ತಿದ್ದಂತೆ ಪಂದ್ಯದ ರೋಚಕತೆಯೂ ಹೆಚ್ಚಿತು.

ಶಿಖರ್ ಧವನ್ (16) ಮತ್ತು ವಿರಾಟ್ ಕೊಹ್ಲಿ (2) ಅವರು ಬೇಗನೇ ಔಟಾದರು. ಆದರೆ ರೋಹಿತ್ ಶರ್ಮ (58, 89 ಎಸೆತ, 5 ಬೌಂ, 1 ಸಿಕ್ಸರ್), ದಿನೇಶ್ ಕಾರ್ತಿಕ್ (23) ಮತ್ತು ಸುರೇಶ್ ರೈನಾ (32, 27 ಎಸೆತ) ತಂಡಕ್ಕೆ ಆಸರೆಯಾದರು.

ಭಾರತ 35ನೇ ಓವರ್‌ನಲ್ಲಿ 145 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದ ಸಂದರ್ಭ ದೋನಿ ಕ್ರೀಸ್‌ಗೆ ಆಗಮಿಸಿದರು. ಆ ಬಳಿಕ ತಂಡ ಅಲ್ಪ ಅಂತರದಲ್ಲಿ ರವೀಂದ್ರ ಜಡೇಜ, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್ ಮತ್ತು ಆರ್. ವಿನಯ್ ಕುಮಾರ್ ವಿಕೆಟ್‌ಗಳನ್ನು ಕಳೆದುಕೊಂಡಿತು.

ಒಂಬತ್ತನೇ ವಿಕೆಟ್ ರೂಪದಲ್ಲಿ ವಿನಯ್ ಔಟಾದಾಗ ಗೆಲುವಿಗೆ 20 ರನ್‌ಗಳು ಬೇಕಿದ್ದವು. ಆದರೂ ದೋನಿ ಆತ್ಮವಿಶ್ವಾಸ ಕೈಬಿಡಲಿಲ್ಲ. ಕೊನೆಯ ಬ್ಯಾಟ್ಸ್‌ಮನ್ ಇಶಾಂತ್ ಶರ್ಮ ಅವರನ್ನು ಕೂಡಿಕೊಂಡು ತಂಡವನ್ನು ಗೆಲುವಿನ ಗಡಿ ದಾಟಿಸಿಯೇ ಬಿಟ್ಟರು. ಇಶಾಂತ್ ಎರಡು ಸಲ ರನೌಟ್‌ನಿಂದ ಪಾರಾಗಿದ್ದರು.

ದೋನಿ ಉದ್ದೇಶಪೂರ್ವಕಾಗಿ ಪಂದ್ಯವನ್ನು ಕೊನೆಯ ಓವರ್‌ಗೆ ಕೊಂಡೊಯ್ದಂತೆ ಕಂಡಿದ್ದು ನಿಜ. ಏಕೆಂದರೆ ಭಾರತದ ಗೆಲುವಿಗೆ ಕೊನೆಯ ನಾಲ್ಕು ಓವರ್‌ಗಳಲ್ಲಿ ಬೇಕಿದ್ದದ್ದು 21 ರನ್ ಮಾತ್ರ. ಆದರೆ ಮೂರು ಓವರ್‌ಗಳಲ್ಲಿ ಕೇವಲ ಆರು ರನ್ ಮಾತ್ರ ಪೇರಿಸಿತು. ಇದರಿಂದ ಅಂತಿಮ ಓವರ್‌ನಲ್ಲಿ ಗೆಲುವಿಗೆ 15 ರನ್‌ಗಳ ಅಗತ್ಯವಿತ್ತು.

ಮಧ್ಯರಾತ್ರಿಯವರೆಗೆ ಟಿವಿ ಮುಂದೆ ಕುಳಿತು ಆಟ ನೋಡಿದ್ದ ಭಾರತದ ಅಭಿಮಾನಿಗಳು ತಂಡದ ಗೆಲುವಿನ ಆಸೆ ಕೈಬಿಟ್ಟಿದ್ದರು. ಪೆವಿಲಿಯನ್‌ನಲ್ಲಿದ್ದ ಭಾರತ ತಂಡದ ಆಟಗಾರರ ಮುಖದಲ್ಲೂ ಆತಂಕ ಮನೆಮಾಡಿತ್ತು. ದೋನಿ ಮಾತ್ರ ತಾಳ್ಮೆ ಕಳೆದುಕೊಳ್ಳಲಿಲ್ಲ. ಎಂದಿನಂತೆ ಶಾಂತವಾಗಿಯೇ ಇದ್ದರು.

ಅಂತಿಮ ಓವರ್‌ಗೆ ಮುನ್ನ ತಮ್ಮ ಬ್ಯಾಟ್ ಬದಲಿಸಿದ ದೋನಿ ಸಜ್ಜಾಗಿ ನಿಂತರು. ಎರಂಗಾ ಅವರ ಓವರ್‌ನ ಮೊದಲ ಎಸೆತದಲ್ಲಿ ರನ್ ಬರಲಿಲ್ಲ. ಎರಡನೇ ಎಸೆತವನ್ನು ಬೌಲರ್ ತಲೆಮೇಲಿಂದ ಸಿಕ್ಸರ್ ಅಟ್ಟಿದರು. ಮೂರನೇ ಎಸೆತದಲ್ಲಿ ಬೌಂಡರಿ. ನಾಲ್ಕನೇ ಎಸೆತದಲ್ಲಿ ಮತ್ತೊಂದು ಸಿಕ್ಸರ್. ಲಂಕಾ ತಂಡದ ಕೈಗೆ ಬಂದಿದ್ದ ಗೆಲುವಿನ ತುತ್ತು ಬಾಯಿಗೆ ಬರಲಿಲ್ಲ. 

ಸಹ ಆಟಗಾರರು ಅಂಗಳಕ್ಕೆ ಧಾವಿಸಿ ದೋನಿ ಜೊತೆ ಸಂಭ್ರಮಿಸಿದರೆ, ಏಂಜೆಲೊ ಮ್ಯಾಥ್ಯೂಸ್ ಬಳಗದವರು ದಿಕ್ಕೇ ತೋಚದಂತೆ ಅಂಗಳದಲ್ಲಿ ನಿಂತುಬಿಟ್ಟರು. ಏಕದಿನ ಕ್ರಿಕೆಟ್‌ನಲ್ಲಿ ತಾನೊಬ್ಬ `ಪಂದ್ಯ ಗೆಲ್ಲಿಸಿಕೊಡಬಲ್ಲ' ಆಟಗಾರ ಎಂಬುದನ್ನು ದೋನಿ ಮತ್ತೊಮ್ಮೆ ತೋರಿಸಿಕೊಟ್ಟರು.


ಸ್ಕೋರು ವಿವರ

ಶ್ರೀಲಂಕಾ: 48.5 ಓವರ್‌ಗಳಲ್ಲಿ 201
ಉಪುಲ್ ತರಂಗ ಸಿ ದೋನಿ ಬಿ ಭುವನೇಶ್ವರ್ ಕುಮಾರ್  11
ಮಾಹೇಲ ಜಯವರ್ಧನೆ ಸಿ ಅಶ್ವಿನ್ ಬಿ ಭುವನೇಶ್ವರ್ ಕುಮಾರ್  22

ಕುಮಾರ ಸಂಗಕ್ಕಾರ ಸಿ ವಿನಯ್ ಬಿ ಆರ್. ಅಶ್ವಿನ್  71
ಲಾಹಿರು ತಿರಿಮನ್ನೆ ಸಿ ಭುವನೇಶ್ವರ್ ಬಿ ಇಶಾಂತ್ ಶರ್ಮ  46
ಏಂಜೆಲೊ ಮ್ಯಾಥ್ಯೂಸ್ ಸಿ ವಿನಯ್ ಬಿ ಇಶಾಂತ್ ಶರ್ಮ  10
ಕುಸಾಲ್ ಪೆರೇರಾ ಸ್ಟಂಪ್ ದೋನಿ ಬಿ ಆರ್. ಅಶ್ವಿನ್  02
ದಿನೇಶ್ ಚಂಡಿಮಾಲ್ ಸಿ ಅಶ್ವಿನ್ ಬಿ ರವೀಂದ್ರ ಜಡೇಜ  05
ರಂಗನಾ ಹೆರಾತ್ ಸ್ಟಂಪ್ ದೋನಿ ಬಿ ರವೀಂದ್ರ ಜಡೇಜ  05
ಶಾಮಿಂದ ಎರಂಗಾ ಔಟಾಗದೆ  05

ಲಸಿತ್ ಮಾಲಿಂಗ ಸಿ ಭುವನೇಶ್ವರ್ ಬಿ ರವೀಂದ್ರ ಜಡೇಜ  00
ಸುರಂಗಾ ಲಕ್ಮಲ್ ಸ್ಟಂಪ್ ದೋನಿ ಬಿ ರವೀಂದ್ರ ಜಡೇಜ  01
ಇತರೆ: (ಬೈ-4, ಲೆಗ್‌ಬೈ-6, ವೈಡ್-13)  23

ವಿಕೆಟ್ ಪತನ: 1-27 (ತರಂಗ; 6.6), 2-49 (ಜಯವರ್ಧನೆ; 13.1), 3-171 (ತಿರಿಮನ್ನೆ; 37.5), 4-174 (ಸಂಗಕ್ಕಾರ; 39.1), 5-176 (ಪೆರೇರಾ; 39.5), 6-183 (ಚಂಡಿಮಾಲ್; 42.2), 7-193 (ಮ್ಯಾಥ್ಯೂಸ್; 45.2), 8-196 (ಹೆರಾತ್; 46.1), 9-196 (ಮಾಲಿಂಗ; 46.3), 10-201 (ಲಕ್ಮಲ್; 48.5)

ಬೌಲಿಂಗ್: ಭುವನೇಶ್ವರ್ ಕುಮಾರ್ 8-4-34-2, ಆರ್. ವಿನಯ್ ಕುಮಾರ್ 6-1-15-0, ಇಶಾಂತ್ ಶರ್ಮ 8-1-45-2, ವಿರಾಟ್ ಕೊಹ್ಲಿ 3-0-17-0, ಸುರೇಶ್ ರೈನಾ 6-0-25-0, ಆರ್. ಅಶ್ವಿನ್ 10-0-42-2, ರವೀಂದ್ರ ಜಡೇಜ 7.5-1-23-4

ಭಾರತ: 49.4 ಓವರ್‌ಗಳಲ್ಲಿ 9 ವಿಕೆಟ್‌ಗೆ 203
ರೋಹಿತ್ ಶರ್ಮ ಬಿ ರಂಗನಾ ಹೆರಾತ್  58
ಶಿಖರ್ ಧವನ್ ಸಿ ಸಂಗಕ್ಕಾರ ಬಿ ಸಿ ಸಂಗಕ್ಕಾರ ಬಿ ಶಾಮಿಂದ ಎರಂಗಾ  16
ವಿರಾಟ್ ಕೊಹ್ಲಿ ಸಿ ಸಂಗಕ್ಕಾರ ಬಿ ಶಾಮಿಂದ ಎರಂಗಾ  02
ದಿನೇಶ್ ಕಾರ್ತಿಕ್ ಸಿ ಜಯವರ್ಧನೆ ಬಿ ರಂಗನಾ ಹೆರಾತ್  23
ಸುರೇಶ್ ರೈನಾ ಸಿ ಸಂಗಕ್ಕಾರ ಬಿ ಸುರಂಗ ಲಕ್ಮಲ್  32
ಮಹೇಂದ್ರ ಸಿಂಗ್ ದೋನಿ ಔಟಾಗದೆ  45
ರವೀಂದ್ರ ಜಡೇಜ ಎಲ್‌ಬಿಡಬ್ಲ್ಯು ಬಿ ರಂಗನಾ ಹೆರಾತ್  05
ಆರ್. ಅಶ್ವಿನ್ ಎಲ್‌ಬಿಡಬ್ಲ್ಯು ಬಿ ರಂಗನಾ ಹೆರಾತ್  00
ಭುವನೇಶ್ವರ್ ಕುಮಾರ್ ಎಲ್‌ಬಿಡಬ್ಲ್ಯು ಬಿ ಲಸಿತ್ ಮಾಲಿಂಗ  00
ಆರ್. ವಿನಯ್ ಕುಮಾರ್ ಸಿ ಸೇನನಾಯಕೆ (ಬದಲಿ) ಬಿ ಏಂಜೆಲೊ ಮ್ಯಾಥ್ಯೂಸ್  05
ಇಶಾಂತ್ ಶರ್ಮ ಔಟಾಗದೆ  02

ಇತರೆ: (ಬೈ-2, ಲೆಗ್‌ಬೈ-2, ವೈಡ್-11)  15
ವಿಕೆಟ್ ಪತನ: 1-23 (ಧವನ್; 8.4), 2-27 (ಕೊಹ್ಲಿ; 10.4), 3-77 (ಕಾರ್ತಿಕ್; 22.6), 4-139 (ರೋಹಿತ್; 31.1), 5-145 (ರೈನಾ; 34.1), 6-152 (ಜಡೇಜ; 37.1), 7-152 (ಅಶ್ವಿನ್; 37.2), 8-167 (ಭುವನೇಶ್ವರ್; 41.5), 9-182 (ವಿನಯ್; 46.2)

ಬೌಲಿಂಗ್: ಶಾಮಿಂದ ಎರಂಗಾ 9.4-2-50-2, ಸುರಂಗ ಲಕ್ಮಲ್ 10-1-33-1, ಏಂಜೆಲೊ ಮ್ಯಾಥ್ಯೂಸ್ 10-1-38-1, ಲಸಿತ್ ಮಾಲಿಂಗ 10-1-58-1, ರಂಗನಾ ಹೆರಾತ್ 10-2-20-4

ಫಲಿತಾಂಶ: ಭಾರತಕ್ಕೆ ಒಂದು ವಿಕೆಟ್ ಜಯ
ಪಂದ್ಯಶ್ರೇಷ್ಠ: ಮಹೇಂದ್ರ ಸಿಂಗ್ ದೋನಿ, ಸರಣಿಶ್ರೇಷ್ಠ: ಭುವನೇಶ್ವರ್ ಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT