ADVERTISEMENT

ರೋಚಕ ಪಂದ್ಯದ ನಿರೀಕ್ಷೆಯಲ್ಲಿ...!

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 18:35 IST
Last Updated 26 ಫೆಬ್ರುವರಿ 2011, 18:35 IST

ರೋಚಕ ಎನಿಸುವ ಪಂದ್ಯ ಮುಂದಿದೆ. ಆದ್ದರಿಂದ ನಾವೂ ಕಾತರದಿಂದ ಕಾಯ್ದಿದ್ದೇವೆ. ಭಾನುವಾರದ ಪಂದ್ಯಕ್ಕಾಗಿ ತಕ್ಕ ತಯಾರಿ ಮಾಡಿಕೊಂಡು ಸಜ್ಜಾಗಿದ್ದೇವೆ. ಈ ಪಂದ್ಯವು ಕೋಲ್ಕತ್ತದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಅಲ್ಲಿನ ಸಿದ್ಧತೆಯ ಕೊರತೆಯಿಂದಾಗಿ ಇಲ್ಲಿಗೆ ಸ್ಥಳಾಂತರಗೊಂಡಿತು. ಈಡನ್‌ನಲ್ಲಿ ನಡೆದಿದ್ದರೆ ನಮಗೆ ಹೆಚ್ಚು ಸಂತೋಷವಾಗುತಿತ್ತು. ಆ ವಿಷಯದ ಬಗ್ಗೆ ಮತ್ತೆ ಚರ್ಚೆ ಮಾಡುವ ಅಗತ್ಯವಿಲ್ಲ. ನಿಗದಿ ಆಗಿರುವಂತೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾವು ಆತಿಥೇಯರ ವಿರುದ್ಧ ಹೋರಾಡಬೇಕು. ವಿಶ್ವಕಪ್‌ನ ಈ ಪಂದ್ಯವನ್ನು ತನ್ನ ನಾಡಿನಲ್ಲಿ ಆಡುತ್ತಿರುವ ಭಾರತವು ಸಹಜವಾಗಿ ಬಲಾಢ್ಯವಾಗಿ ಕಾಣಿಸುತ್ತದೆ. ಭಾರತದ ತಂಡವನ್ನು ಭಾರತದಲ್ಲಿಯೇ ಎದುರಿಸುವುದು ಅದ್ಭುತ ಅನುಭವ. ಭಾನುವಾರದ ಹಣಾಹಣಿಯಲ್ಲಿ ಇಂಗ್ಲೆಂಡ್ ಗೆಲ್ಲುವ ನೆಚ್ಚಿನ ತಂಡವೆಂದು ಯಾರೂ ಪರಿಗಣಿಸಿಲ್ಲ. ಈ ಅಂಶವನ್ನು ನಾವೂ ಮಾಧ್ಯಮಗಳಿಂದ ಅರಿತಿದ್ದೇವೆ. ದೋನಿ ನೇತೃತ್ವದ ತಂಡವು ಬಲಾಢ್ಯವಾಗಿದೆ, ಆದ್ದರಿಂದ ಜಯಿಸುತ್ತದೆ ಎನ್ನುವ ಅಭಿಪ್ರಾಯ ಬಲಗೊಂಡಿದೆ. ಇಂಥ ವಾತಾವರಣ ಇದ್ದರೂ ನಮ್ಮ ತಂಡದ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವನ್ನು ಆಡಿದಲ್ಲಿ ಈ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಬಹುದು. ನಿರೀಕ್ಷೆಯ ಭಾರದಿಂದ ಭಾರತವು ಒತ್ತಡದಲ್ಲಿದೆ.

ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉದ್ದೇಶಿಸಿದಂತೆ ತಾಲೀಮು ನಡೆಸಲು ಸಾಧ್ಯವಾಗಲಿಲ್ಲ. ಆದರೂ ಆತಂಕಗೊಂಡಿಲ್ಲ. ಶನಿವಾರ ಸಾಕಷ್ಟು ಹೊತ್ತು ಅಭ್ಯಾಸ ಮಾಡುವುದಕ್ಕೆ ಅವಕಾಶ ಸಿಕ್ಕಿತು.

ಉಪಖಂಡದಲ್ಲಿ ಕಳೆದ ಎರಡು ವಾರದಿಂದ ಇದ್ದೇವೆ. ಆದ್ದರಿಂದ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವೇನಲ್ಲ. ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡು ಆಡಲು ನಮ್ಮ ಆಟಗಾರರು ಸಮರ್ಥರಾಗಿದ್ದಾರೆ. ಪಂದ್ಯದ ದಿನ ಮಳೆ ಕಾಡುವುದೆನ್ನುವ ಭಯವಂತೂ ಇದೆ. ಆದರೂ ಈ ವಿಷಯವಾಗಿ ನಿಖರವಾಗಿ ಭವಿಷ್ಯ ನುಡಿಯಲು ಆಗದು. ಶುಕ್ರವಾರದ ಮಳೆಯಿಂದಾಗಿ ಕ್ರೀಡಾಂಗಣದಲ್ಲಿ ಸಾಕಷ್ಟು ನೀರು ನಿಂತಿತ್ತು. ಮತ್ತೆ ಮಳೆ ಬಂದರೆ ಅಂಗಳ ಹಾಗೂ ಹೊರ ಆವರಣವು ಅಪಾಯಕಾರಿ ಆಗುತ್ತದೆಂದು ಹೇಳಬಹುದು. ಮತ್ತೆ ವರಣನ ಆರ್ಭಟ ನಡೆಯದಿರಲೆಂದು ಆಶಿಸುವುದು ಮಾತ್ರ ನಮಗೆ ಉಳಿದಿರುವ ದಾರಿ.

ಹಾಲೆಂಡ್ ತಂಡದ ವಿರುದ್ಧದ ಫಲಿತಾಂಶ ತುಂಬಾ ಸಂತೋಷ ಪಡುವಂಥದಲ್ಲ. ಆದರೂ ಇಂಥದೊಂದು ಪಂದ್ಯ ದೊಡ್ಡ ಸವಾಲಿನ ಹೋರಾಟಕ್ಕೆ ಮುನ್ನ ಮುಗಿದು ಹೋಗಿದ್ದು ಒಳಿತು.
 -ಗೇಮ್‌ಪ್ಲಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.