ADVERTISEMENT

ರೋಹನ್, ಮೇದಿನಿಗೆ ಕಿರೀಟ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST

ಹುಬ್ಬಳ್ಳಿ: ಬೆಂಗಳೂರಿನ ಹೊರೈಜನ್ ಕ್ಲಬ್‌ನ ರೋಹನ್ ಜಮದಗ್ನಿ ಹಾಗೂ ಮೇದಿನಿ ಭಟ್ ಗುರುವಾರ ನಗರದ ಡಾ.ಕೆ.ಎಸ್. ಶರ್ಮಾ ಸಭಾಗೃಹದಲ್ಲಿ ಆರಂಭವಾದ ಸಂಜಯ್ ಪೈ ಸ್ಮಾರಕ ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಕೆಡೆಟ್ ವಿಭಾಗದಲ್ಲಿ ಕ್ರಮವಾಗಿ ಬಾಲಕ-ಬಾಲಕಿಯರ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಹುಬ್ಬಳ್ಳಿ ಟೇಬಲ್ ಟೆನಿಸ್ ಸಂಸ್ಥೆ ಹಾಗೂ ಮಹಾರಾಷ್ಟ್ರ ಮಂಡಲ ಜೊತೆಯಾಗಿ ಸಂಘಟಿಸಿದ ಟೂರ್ನಿಯ ಬಾಲಕರ ವಿಭಾಗದ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಆಟಗಾರ ರೋಹನ್ 14-12, 11-7, 11-6ರಿಂದ ತಮ್ಮದೇ ಕ್ಲಬ್‌ನ ನಾಲ್ಕನೇ ಶ್ರೇಯಾಂಕದ ಆಟಗಾರ ಜಿ. ಸುದೀಪ್ ವಿರುದ್ಧ ಸುಲಭವಾಗಿ ಜಯ ಸಾಧಿಸಿದರು.

ಬೆಂಗಳೂರಿನ ಶ್ರೀ ಕುಮಾರನ್ಸ್ ಶಾಲೆಯ ಆರನೇ ತರಗತಿ ವಿದ್ಯಾರ್ಥಿಯಾಗಿರುವ ರೋಹನ್ ಪಾಲಿಗೆ ಪ್ರಸಕ್ತ ವರ್ಷದ ನಾಲ್ಕನೇ ಕೆಡೆಟ್ ಪ್ರಶಸ್ತಿ ಇದು. ಸೆಮಿ ಫೈನಲ್ ಪಂದ್ಯಗಳಲ್ಲಿ ರೋಹನ್ 11-5, 11-6, 11-9ರಿಂದ ಸಿಸಿಎ ಕ್ಲಬ್‌ನ ಮೂರನೇ ಶ್ರೇಯಾಂಕದ ಆಟಗಾರ ವಿಷ್ಣು ಪ್ರಣವ್ ಅವರನ್ನು; ಸುದೀಪ್ 11-6, 12-10, 4-11, 11-6ರಿಂದ ಜೆಟಿಟಿಎಯ ನೀರಜ್ ರಾಜ್ ಎಸ್. ಅವರನ್ನು ಪರಾಭವಗೊಳಿಸಿದರು.

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಮೇದಿನಿ 11-9, 11-9, 12-10ರಿಂದ ಜಿಇಎಂಎಸ್‌ನ ವಿ. ಖುಷಿ ವಿರುದ್ಧ ಗೆಲುವಿನ ಸಂಭ್ರಮ ಆಚರಿಸಿಕೊಂಡರು.

ಹಲವು ಬಾರಿ ನಡೆದ ಸುದೀರ್ಘ ರ‌್ಯಾಲಿಗಳಲ್ಲಿ ಖುಷಿ ತಿರುಗೇಟು ನೀಡುವ ಯತ್ನ ನಡೆಸಿದರಾದರೂ ಫಲಪ್ರದವಾಗಲಿಲ್ಲ. ಕೊನೆಯ ಗೇಮ್‌ನಲ್ಲಿ ಒಂದು ಹಂತದಲ್ಲಿ 2-7ರಿಂದ ಹಿಂದಿದ್ದ ಖುಷಿ, ಕೊನೆಗೆ ಆ ಆಟದಲ್ಲಿ 10-10ರ ಸಮಬಲಕ್ಕೆ ತಂದಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಮಾಡಿದ ಪ್ರಮಾದಗಳು ಪಂದ್ಯವನ್ನು ಕೈಜಾರುವಂತೆ ಮಾಡಿದವು.

ಸೆಮಿಫೈನಲ್ ಪಂದ್ಯಗಳಲ್ಲಿ ಮೇದಿನಿ 11-7, 11-7, 8-11, 11-5ರಿಂದ ಮಹಾರಾಷ್ಟ್ರ ಮಂಡಲದ ಗಾಯತ್ರಿ ಟಂಕಸಾಲಿ ವಿರುದ್ಧವೂ; ಖುಷಿ 11-8, 12-10, 11-4ರಿಂದ ಒಎಂಟಿಟಿಯ ಸೋನಾಲಿ ಸಿಂಹ ಮೇಲೂ ಜಯ ಸಾಧಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.