ADVERTISEMENT

ಲಂಡನ್ ಒಲಿಂಪಿಕ್ಸ್: ಉದ್ಘಾಟನಾ ಸಮಾರಂಭ ಮೊಟಕು

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 19:30 IST
Last Updated 18 ಜುಲೈ 2012, 19:30 IST
ಲಂಡನ್ ಒಲಿಂಪಿಕ್ಸ್: ಉದ್ಘಾಟನಾ ಸಮಾರಂಭ ಮೊಟಕು
ಲಂಡನ್ ಒಲಿಂಪಿಕ್ಸ್: ಉದ್ಘಾಟನಾ ಸಮಾರಂಭ ಮೊಟಕು   

ಲಂಡನ್ (ಎಎಫ್‌ಪಿ): ಸಂಚಾರ ವ್ಯವಸ್ಥೆ ಹಾಗೂ ವಾಹನ ದಟ್ಟಣೆ ಬಗ್ಗೆ ಕ್ರೀಡಾಪಟುಗಳು ದೂರಿದ ಬೆನ್ನಲ್ಲಿಯೇ ಲಂಡನ್ ಒಲಿಂಪಿಕ್ ಕ್ರೀಡಾಕೂಟದ ಸಂಘಟಕರು ತಡಬಡಾಯಿಸಿ ಎಚ್ಚೆತ್ತುಕೊಂಡಿದ್ದಾರೆ.

ಉದ್ಘಾಟನಾ ಸಮಾರಂಭದ ದಿನ ತಡರಾತ್ರಿ ಹೊತ್ತಿನಲ್ಲಿ ವಾಹನ ದಟ್ಟಣೆ ಹೆಚ್ಚಿ ಕ್ರೀಡಾಪಟುಗಳು ಕ್ರೀಡಾ ಗ್ರಾಮ ಸೇರುವಲ್ಲಿ ವಿಳಂಬ ಆಗಬಾರದು ಹಾಗೂ ಸ್ಥಳೀಯರು ಸಾರ್ವಜನಿಕ ಸಾರಿಗೆಯಲ್ಲಿ ಹಿಂದಿರುಗಲು ಅವಕಾಶ ಆಗಬೇಕು ಎನ್ನುವ ಕಾರಣಕ್ಕಾಗಿ ಸಮಾರಂಭವನ್ನೇ ಮೊಟಕುಗೊಳಿಸಲು ನಿರ್ಧರಿಸಿದ್ದಾರೆ.

ಜುಲೈ 27ರಂದು ನಡೆಯುವ ಸಮಾರಂಭದಲ್ಲಿನ ಕೆಲವು ಕಾರ್ಯಕ್ರಮಗಳನ್ನು ತೆಗೆದು ಹಾಕಲು ತುರ್ತಾಗಿ ತೀರ್ಮಾನ ಕೈಗೊಳ್ಳಲಾಗಿದೆ. `ಸ್ಥಳೀಯ ಸಮಯ 12.30ಕ್ಕೆ ಕಾರ್ಯಕ್ರಮ ಕೊನೆಗೊಳ್ಳಬೇಕು. ಅದಕ್ಕಾಗಿ ತಕ್ಕ ಕ್ರಮ ಕೈಗೊಳ್ಳಲಾಗಿದೆ. ಇದೇ ಕಾರಣಕ್ಕಾಗಿ ಕೆಲವು ಪ್ರದರ್ಶನಗಳನ್ನು ಕೈಬಿಡಲಾಗುತ್ತಿದೆ. ಸೈಕಲ್ ಸಾಹಸ ಆಕರ್ಷಕವಾದದ್ದು. ಆದರೂ ಅದನ್ನು ಕಾರ್ಯಕ್ರಮ ಪಟ್ಟಿಯಿಂದ ತೆಗೆಯಲಾಗಿದೆ~ ಎಂದು ಲಂಡನ್ ಒಲಿಂಪಿಕ್ ಸಂಘಟನಾ ಸಮಿತಿ (ಎಲ್‌ಒಸಿಒಜಿ) ವಕ್ತಾರರು ತಿಳಿಸಿದ್ದಾರೆ.

ADVERTISEMENT

ಕಾರ್ಯಕ್ರಮ ನಡೆಯುವ ಕ್ರೀಡಾಂಗಣವನ್ನು ಈಗಾಗಲೇ ಇಂಗ್ಲೆಂಡ್‌ನ ಗ್ರಾಮೀಣ ಪ್ರದೇಶದ ವಾತಾವರಣ ಇರುವ ರೀತಿಯಲ್ಲಿ ರೂಪಿಸಲಾಗಿದೆ. ಆಕಳು ಹಾಗೂ ಆಡುಗಳ ದಂಡು ಕೂಡ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳಲಿವೆ. ಅಷ್ಟೇ ಅಲ್ಲ ಇಂಗ್ಲೆಂಡ್‌ನ ವಿಶಿಷ್ಟ ಮಳೆಗಾಲದ ವಾತಾವರಣವನ್ನು ಕೃತಕವಾಗಿ ಸೃಷ್ಟಿಸಲಾಗುತ್ತಿದೆ ಎಂದು ಅವರು ಹೇಳಿದರು.

ಎಂಟು ಆಸ್ಕರ್ ಗೆದ್ದ `ಸ್ಲಮ್‌ಡಾಗ್ ಮಿಲಿಯನೇರ್~ ಸಿನಿಮಾದ ಕಲಾ ನಿರ್ದೇಶಕ ಡ್ಯಾನಿ ಬೊಯ್ಲ ಅವರ ಕಲ್ಪನೆಯಂತೆ ಎಲ್ಲವೂ ಸಜ್ಜಾಗಿದೆ. `ನಮ್ಮ ದೇಶದ ಚಿತ್ರವನ್ನು ಕಣ್ಣೆದುರು ತಂದು ನಿಲ್ಲಿಸುತ್ತದೆ~ ಎನ್ನುವುದು ಬೊಯ್ಲ ವಿಶ್ವಾಸದ ನುಡಿ.

ಆದರೆ ಇಲ್ಲಿನ ಮಾಧ್ಯಮಗಳು ಕ್ರೀಡಾಂಗಣದಲ್ಲಿ ಸಜ್ಜಾಗಿರುವ ಸೆಟ್ ಬಗ್ಗೆ ಟೀಕೆ ಮಾಡಿದ್ದಾರೆ. ಇದರಲ್ಲಿ ಹೊಸತೇನು ಇಲ್ಲವೆಂದು ವಿಶ್ಲೇಷಣಾ ವರದಿಗಳೂ ಪ್ರಕಟವಾಗಿದೆ. ಟೆಲಿವಿಷನ್ ಕಾರ್ಯಕ್ರಮವಾದ `ಟೆಲೆಟುಬೀಸ್~ ಸೆಟ್ ರೀತಿಯಲ್ಲಿಯೇ ಇದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಈ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳದ ಸಂಘಟಕರು ನೋಡುಗರು ಖಂಡಿತ ಇಷ್ಟಪಡುತ್ತಾರೆಂದು ವಿಶ್ವಾಸದಿಂದ ನುಡಿದಿದ್ದಾರೆ.

ವಿಶ್ವದಾದ್ಯಂತ ನೂರು ಕೋಟಿ ಜನರು ಈ ಕ್ರಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲಿದ್ದಾರೆ. ಕ್ರೀಡಾಂಗಣದಲ್ಲಿ 62,000 ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಇದೆ. ಉದ್ಘಾಟನೆ ಹಾಗೂ ಮುಕ್ತಾಯ ಸಮಾರಂಭಕ್ಕಾಗಿಯೇ 810 ಲಕ್ಷ ಪೌಂಡ್ ವೆಚ್ಚ ಮಾಡಲಾಗುತ್ತಿದೆ ಎಂದು ಎಲ್‌ಒಸಿಒಜಿ ವಕ್ತಾರರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.