ADVERTISEMENT

ಲಂಡನ್ ಒಲಿಂಪಿಕ್ಸ್ ತರಬೇತಿಗೆ 6 ಕೋಟಿ ರೂ.

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 18:40 IST
Last Updated 13 ಸೆಪ್ಟೆಂಬರ್ 2011, 18:40 IST

ನವದೆಹಲಿ (ಪಿಟಿಐ/ಐಎಎನ್‌ಎಸ್): ಲಂಡನ್‌ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟಕ್ಕೆ ಸಜ್ಜುಗೊಳ್ಳಲು ಕೇಂದ್ರ ಕ್ರೀಡಾ ಇಲಾಖೆ `ಆಪರೇಷನ್ ಎಕ್ಸಲೆನ್ಸ್ 2012~ ಮೂಲಕ 6.85 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ಇದರಲ್ಲಿ ಅಗ್ರ ಪಾಲು ಸಿಕ್ಕಿದ್ದು ಖ್ಯಾತ ಶೂಟರ್ ರೋಂಜನ್ ಸೋಧಿಗೆ. ಅದು ಒಟ್ಟು 97.37 ಲಕ್ಷ ರೂ. 22 ಅಥ್ಲೀಟ್‌ಗಳಿಗೆ ನೀಡಲಾಗಿರುವ ಪಟ್ಟಿಯನ್ನು ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕನ್ ಮಂಗಳವಾರ ಬಿಡುಗಡೆ ಮಾಡಿದರು.

ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿಯ ನಿಧಿಯ ಅಡಿಯಲ್ಲಿ ಈ ಹಣ ನೀಡಲಾಗಿದ್ದು, ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಪದಕ ಗೆಲ್ಲಬೇಕು ಎನ್ನುವ ಮಹತ್ವದ ಆಸೆ ಹೊಂದಿದ್ದೇವೆ ಎಂದು ಹೇಳಿದರು. ಸದ್ಯಕ್ಕೆ ತರಬೇತಿ ಪಡೆಯುತ್ತಿರುವ ಕೋಚ್ ಅಥವಾ ಬೇರೆ ಯಾವುದೇ ಕೋಚ್ (ಸ್ವದೇಶಿ ಅಥವಾ ವಿದೇಶಿ) ಬಳಿಯು ತರಬೇತಿ ಪಡೆದು ಉತ್ತಮವಾಗಿ ಸಜ್ಜುಗೊಳ್ಳಬೇಕು. ವೈಜ್ಞಾನಿಕವಾಗಿ ಕೌಶಲ ಹಾಗೂ ಮಾನಸಿಕ ನಿಯಂತ್ರಣ ಸಾಧಿಸಬೇಕು ಎಂದು ಅಥ್ಲೀಟ್‌ಗಳಿಗೆ ತಿಳಿಸಿದ್ದಾರೆ.

ಮಾಜಿ ವಿಶ್ವ ಶೂಟಿಂಗ್ ಚಾಂಪಿಯನ್ ಮನವ್‌ಜಿತ್ ಸಿಂಗ್ ಸಂಧು ಅವರಿಗೂ 91.95 ಲಕ್ಷ ರೂ. ಕೊಡಲಾಗಿದೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ ಕೃಷ್ಣ ಪೂನಿಯಾ (24.20ಲಕ್ಷ ರೂ.), ಕರ್ನಾಟಕದ ವಿಕಾಸ್ ಗೌಡ (24.51 ಲಕ್ಷ ರೂ.) ನೀಡಲಾಗಿದೆ. ಟೆನಿಸ್ ಆಟಗಾರರಿಗೆ ತಲಾ 36.96 ಲಕ್ಷ ರೂ. ಯಂತೆ ಆರು ಆಟಗಾರರಿಗೆ ಹಣ ನೀಡಲಾಗಿದೆ.

ಒಲಿಂಪಿಕ್‌ಗೆ ಸಜ್ಜುಗೊಳ್ಳಲು ನೀಡಲಾಗಿರುವ ಹಣದ ವಿವಿರ: (ಲಕ್ಷಗಳಲ್ಲಿ)
ರೋಂಜನ್ ಸೋಧಿ (ಶೂಟಿಂಗ್: 97.37), ಮನವ್‌ಜಿತ್ ಸಿಂಗ್ ಸಂಧು (ಶೂಟಿಂಗ್: 91.95), ಮನ್‌ಶೇರ್ ಸಿಂಗ್ (ಶೂಟಿಂಗ್: 47.25), ಕೃಷ್ಣ ಪೂನಿಯಾ (ಡಿಸ್ಕಸ್ ಥ್ರೋ: 24.20), ವಿಕಾಸ್ ಗೌಡ (ಡಿಸ್ಕಸ್ ಥ್ರೋ: 24.51), ಓಂ ಪ್ರಕಾಶ್ ಖರಾನ (ಶಾಟ್ ಪಟ್: 48.10), ಸೋಮದೇವ್ ದೇವವರ್ಮನ್, ಸಾನಿಯಾ ಮಿರ್ಜಾ, ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ರೋಹನ್ ಬೋಪಣ್ಣ, ಯೂಕಿ ಬಾಂಬ್ರಿ ಮತ್ತು ಸನಮ್ ಸಿಂಗ್ (ಎಲ್ಲರೂ ಟೆನಿಸ್: ತಲಾ 36.96), ಆಶೀಶ್ ಕುಮಾರ್, ರಾಕೇಶ್ ಪಾತ್ರಾ, ಅಲೋಕ್ ರಂಜನ್ ಹಾಗೂ ಇಕ್ರಾರ್ ಹಸನ್ (ಎಲ್ಲರೂ ಜಿಮ್ನಾಷ್ಟಿಕ್ ಪುರುಷರ ವಿಭಾಗ: ಒಟ್ಟು 56.83), ದೀಪಾ ಕರ್ಮಕರ್, ಬಿ.ಆರುಣಾ. ರುಚಾ ದೇವಿಕರ್, ರೋಮಾ ಜಾಗಲೇಕರ್ ಹಾಗೂ ಮೀನಾಕ್ಷಿ (ಎಲ್ಲರೂ ಜಿಮ್ನಾಷ್ಟಿಕ್, ಮಹಿಳೆಯರ ವಿಭಾಗ: 33.08).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.