ವಿಶಾಖಪಟ್ಟಣ: ‘ಐಪಿಎಲ್ ಬಳಿಕ ಲೀಗ್‌ಗಳ ಪರ್ವವೇ ಆರಂಭವಾಯಿತು ಎನ್ನುವ ನಂಬಿಕೆ ಅನೇಕ ಜನರಲ್ಲಿದೆ. ಆದರೆ ಐಪಿಎಲ್‌ಗೂ ಮೊದಲೇ ಬೇರೆ ಬೇರೆ ದೇಶಗಳಲ್ಲಿ ಸಾಕಷ್ಟು ಲೀಗ್‌ಗಳಿದ್ದವು. ಅಷ್ಟೇ ಏಕೆ ಭಾರತದಲ್ಲಿ ಇಂಡಿಯನ್ ಕ್ರಿಕೆಟ್ ಲೀಗ್ ನಡೆದಿತ್ತಲ್ಲವೇ...’ ಹೀಗೆ ಪ್ರಶ್ನಿಸಿದ್ದು ಪ್ರೊ ಕಬಡ್ಡಿ ಲೀಗ್ ರೂವಾರಿ ಮತ್ತು ವೀಕ್ಷಕ ವಿವರಣೆಗಾರ ಚಾರು ಶರ್ಮಾ.
‘ಹಲವು ವರ್ಷಗಳ ಹಿಂದೆಯೇ ಫುಟ್‌ಬಾಲ್‌ನಲ್ಲಿ ಅನೇಕ ಲೀಗ್‌ಗಳು ನಡೆದಿವೆ. ಐಸಿಎಲ್‌ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಬೆಂಬಲ ನೀಡಿದ್ದರೆ ಆ ಟೂರ್ನಿ ಕೂಡ ಯಶಸ್ಸು ಪಡೆಯುತ್ತಿತ್ತು’ ಎಂದು ಚಾರು ಶರ್ಮಾ ಅಭಿಪ್ರಾಯ ಪಟ್ಟರು. ಜೊತೆಗೆ ಕಬಡ್ಡಿ ಲೀಗ್ ಯಶಸ್ಸಿನ ಕಥೆಯನ್ನೂ ಅವರು ‘ಪ್ರಜಾವಾಣಿ’ ಎದುರು ಬಿಚ್ಚಿಟ್ಟರು.
*ಕಬಡ್ಡಿ ಲೀಗ್ ಆರಂಭಿಸಲು ಸ್ಫೂರ್ತಿಯಾದ ಅಂಶವೇನು?
2006ರ ದೋಹಾ ಏಷ್ಯನ್ ಕ್ರೀಡಾಕೂಟದಲ್ಲಿ ಕಬಡ್ಡಿ ಪಂದ್ಯಗಳಿಗೆ ವೀಕ್ಷಕ ವಿವರಣೆ ನೀಡುವಾಗ ಲೀಗ್ ಆರಂಭಿಸುವಂತೆ ಸ್ನೇಹಿತರೊಬ್ಬರು ಸಲಹೆ ನೀಡಿದ್ದರು. ಲೀಗ್ ಆರಂಭದಿಂದ ಮತ್ತಷ್ಟು ಪ್ರತಿಭೆಗಳಿಗೆ ವೇದಿಕೆ ಸಿಕ್ಕಂತಾಗುತ್ತದೆ ಎಂದೂ ಹೇಳಿದ್ದರು. ಆಗ ಲೀಗ್ ಆರಂಭಿಸುವ ಯೋಚನೆ ಬಂದಿತು.
*ಕೆಲವೇ ವರ್ಷಗಳಲ್ಲಿ ಲೀಗ್ ಜನಪ್ರಿಯತೆ ಪಡೆಯಲಿದೆ ಎನ್ನುವ ನಿರೀಕ್ಷೆಯಿತ್ತೇ?
ಖಂಡಿತವಾಗಿಯೂ ಇರಲಿಲ್ಲ. ಜನಪ್ರಿಯತೆ ನಮ್ಮ ಗುರಿಯಾಗಿರಲಿಲ್ಲ. ಬೇರೆ ದೇಶಗಳಲ್ಲಿ ಹುಟ್ಟಿದ ಕ್ರೀಡೆಗಳು ಇಂದು ಭಾರತದಲ್ಲಿ ಖ್ಯಾತಿ ಗಳಿಸಿವೆ. ಆದರೆ ನಮ್ಮ ದೇಶಿ ಕ್ರೀಡೆಯನ್ನು ಯಾರೂ ಕೇಳುವವರೇ ಇಲ್ಲದಂತಾಗಿತ್ತು. ಆದ್ದರಿಂದ ಮೊದಲು ಕಬಡ್ಡಿಯನ್ನು ಎಲ್ಲರೂ ನೋಡುವಂತಾಗಬೇಕು. ಹೆಚ್ಚು ಜನರನ್ನು ತಲುಪಬೇಕು ಎನ್ನುವುದಷ್ಟೇ ನಮ್ಮ ಉದ್ದೇಶವಾಗಿತ್ತು.
*ಆಟಗಾರರಿಗೆ ಸರಿಯಾಗಿ ಉದ್ದೀಪನ ಮದ್ದು ಪರೀಕ್ಷೆ ನಡೆಸುತ್ತಿಲ್ಲ ಎನ್ನುವ ಆರೋಪವಿದೆಯಲ್ಲಾ?
ವಿಶ್ವ ಉದ್ದೀಪನಾ ಮದ್ದು ತಡೆ ಘಟಕದ ನಿಯಮಗಳಂತೆಯೇ ಪ್ರತಿ ಆಟಗಾರನನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದುವರೆಗೆ ಯಾವ ಪ್ರಕರಣಗಳು ಪತ್ತೆಯಾಗಿಲ್ಲ. ಒಂದು ವೇಳೆ ಆ ರೀತಿಯ ಘಟನೆ ನಡೆದರೆ ಗಂಭೀರ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ.
*ಬೋನಸ್ ಲೈನ್ ದಾಟದಿದ್ದರೂ ಕೆಲ ಅಂಪೈರ್‌ಗಳು ಪಾಯಿಂಟ್ ಕೊಡುತ್ತಾರೆ ಎನ್ನುವ ದೂರು ಇದೆಯಲ್ಲಾ?
ಹೌದು. ಈ ಬಗ್ಗೆ ಅನೇಕ ಜನ ನನ್ನೊಂದಿಗೆ ಮಾತನಾಡಿದ್ದಾರೆ. ಎಲ್ಲಾ ತೀರ್ಪುಗಳನ್ನು ಸ್ಪಷ್ಟವಾಗಿ ಕೊಡುತ್ತಾರೆ ಎಂದು ಹೇಳುವುದಿಲ್ಲ. ಕೆಲ ಬಾರಿ ತಪ್ಪುಗಳಾಗುವುದು ಸಹಜ. ಶೇ. 95 ರಷ್ಟು ತೀರ್ಪುಗಳು ಸರಿಯಾಗಿಯೇ ಇರುತ್ತವೆ. ಅಂಪೈರ್ ತೀರ್ಪನ್ನು ಪುನರ್ ಪರಿಶೀಲಿಸಲು ಎರಡೂ ತಂಡಗಳ ಆಟಗಾರರಿಗೆ ಅವಕಾಶವಿದೆಯಲ್ಲಾ.
*ವರ್ಷಕ್ಕೆ ಎರಡು ಬಾರಿ ಲೀಗ್ ನಡೆಸಿದರೆ ಮೊದಲಿನ ಬೆಂಬಲ ಈಗಲೂ ಲಭಿಸುವುದೇ?
ಕಬಡ್ಡಿ ಜನರೇ ಮೆಚ್ಚಿಕೊಂಡ ಕ್ರೀಡೆ. ಪ್ರತಿ ಲೀಗ್ ನಡೆದಾಗಲೂ ಲಭಿಸುತ್ತಿರುವ ಬೆಂಬಲವೇ ಇದಕ್ಕೆ ಸಾಕ್ಷಿ. ವರ್ಷಕ್ಕೆ ಎರಡು ಬಾರಿ ಲೀಗ್ ಆಯೋಜಿಸಲು ಕಬಡ್ಡಿ ಪ್ರೇಮಿಗಳ ಅಭಿಮಾನವೇ ಸ್ಫೂರ್ತಿ.
*ನಿಮ್ಮ ನೆಚ್ಚಿನ ಕ್ರೀಡೆ ಯಾವುದು?
ಎಲ್ಲಾ ಕ್ರೀಡೆಗಳನ್ನು ನೋಡುತ್ತೇನೆ. ಪ್ರತಿ ಕ್ರೀಡೆಯಲ್ಲಿ ಆಗುವ ಬೆಳವಣಿಗೆಗಳನ್ನು ಗಮನಿಸುತ್ತೇನೆ. ಗಾಲ್ಫ್ ಆಡುವುದು ಇಷ್ಟ. ಫುಟ್‌ಬಾಲ್, ಕ್ರಿಕೆಟ್ ಮತ್ತು ಟೆನಿಸ್ ಕೂಡ ಆಡುತ್ತೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.