ADVERTISEMENT

ಲೆಫ್ಟಿನೆಂಟ್ ಕರ್ನಲ್ ದೋನಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 19:30 IST
Last Updated 13 ಸೆಪ್ಟೆಂಬರ್ 2011, 19:30 IST

 ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಮತ್ತು ಶೂಟರ್ ಅಭಿನವ್ ಬಿಂದ್ರಾ ಅವರಿಗೆ ಮಂಗಳವಾರ ಭೂ ಸೇನೆಯ ಲೆಫ್ಟಿನೆಂಟ್ ಕರ್ನಲ್ ಪದವಿ ನೀಡಿ ಗೌರವಿಸಲಾಗಿದೆ.

`ದೋನಿ ಹಾಗೂ ಒಲಿಂಪಿಕ್ ಚಿನ್ನದ ಪದಕ ವಿಜೇತ ಶೂಟರ್ ಬಿಂದ್ರಾ ಅವರಿಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಗೌರವ ಲೆಫ್ಟಿನೆಂಟ್ ಕರ್ನಲ್ ಪದವಿಯನ್ನು ನೀಡಿದರು~ ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದರು.

`ವಿವಿಧ ಸಂದರ್ಭಗಳಲ್ಲಿ ಸೇನೆಯ ಜೊತೆಗೆ ತೋರಿದ ಬದ್ಧತೆ, ಕ್ರಿಕೆಟ್ ಮತ್ತು ಶೂಟಿಂಗ್‌ನಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಇಬ್ಬರಿಗೆ ಈ ಗೌರವ ನೀಡಲಾಗಿದೆ~ ಎಂದು ಅವರು ನುಡಿದರು.

ಈ ವರ್ಷದ ಆರಂಭದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ದೋನಿ ಭಾರತ ತಂಡವನ್ನು ಚಾಂಪಿಯನ್ ಪಟ್ಟದೆಡೆಗೆ ಮುನ್ನಡೆಸಿದ್ದರು. ಮಾತ್ರವಲ್ಲ ಇವರ ನಾಯಕತ್ವದಲ್ಲಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನೂ ತನ್ನದಾಗಿಸಿಕೊಂಡಿತ್ತು. ಬಿಂದ್ರಾ 2008ರ ಬೀಜಿಂಗ್ ಒಲಿಂಪಿಕ್ ಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರು.

ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಮತ್ತು ಸಚಿನ್ ತೆಂಡೂಲ್ಕರ್ ಅವರಿಗೆ ಈ ಹಿಂದೆಯೇ ಸೇನೆಯಲ್ಲಿ ಗೌರವ ಪದವಿ ನೀಡಲಾಗಿದೆ. ಕಪಿಲ್‌ಗೆ ಭೂಸೇನೆಯ ಗೌರವ ಲೆಫ್ಟಿನೆಂಟ್ ಪದವಿ ಲಭಿಸಿದ್ದರೆ, ಸಚಿನ್‌ಗೆ ವಾಯುಪಡೆಯ ಗೌರವ `ಗ್ರೂಪ್ ಕ್ಯಾಪ್ಟನ್~ ಪದವಿ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.