ADVERTISEMENT

ವಾರಿಯರ್ಸ್ ಎದುರು ಚಾಲೆಂಜರ್ಸ್ ಕದನ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST

ಬೆಂಗಳೂರು: ಕರ್ನಾಟಕದ ಕ್ರಿಕೆಟ್ ಕಣ್ಮಣಿಗಳು ಎನಿಸಿರುವ ರಾಬಿನ್ ಉತ್ತಪ್ಪ ಹಾಗೂ ಮನೀಷ್ ಪಾಂಡೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಕ್ಸರ್ ಎತ್ತಿದರೆ ಇಲ್ಲಿನ ಕ್ರೀಡಾ ಪ್ರೇಮಿಗಳು ಚಪ್ಪಾಳೆ ಹೊಡೆಯುತ್ತಾರೆಯೇ?
ಆದರೆ ಉದ್ಯಾನ ನಗರಿಯಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದು, ಸ್ಥಳೀಯ ಕ್ರೀಡಾಭಿಮಾನಿಗಳ ಚಪ್ಪಾಳೆಯ ಪ್ರೋತ್ಸಾಹದೊಂದಿಗೆ ಹೆಸರಾಂತ ಕ್ರಿಕೆಟಿಗರಾಗಿರುವ ಉತ್ತಪ್ಪ ಹಾಗೂ ಪಾಂಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರು ಹಾಕಿಕೊಳ್ಳಲು ಸಜ್ಜಾಗಿದ್ದಾರೆ. ಈ ನಗರಿಯ ತಂಡಕ್ಕೆ ಸೆಡ್ಡು ಹೊಡೆಯಲು ಕಾತರದಿಂದ ಕಾಯುತ್ತಿದ್ದಾರೆ.

ಏಕೆಂದರೆ ಮಂಗಳವಾರ ರಾತ್ರಿ ರಾಯಲ್ ಚಾಲೆಂಜರ್ಸ್ ಹಾಗೂ ಪುಣೆ ವಾರಿಯರ್ಸ್ ತಂಡಗಳ ನಡುವೆ ಸಿಲಿಕಾನ್ ಸಿಟಿಯ ಅಂಗಳದಲ್ಲಿ ಐಪಿಎಲ್ ಹೋರಾಟ. ಹಾಗಾಗಿ ವಾರಿಯರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಉತ್ತಪ್ಪ ಹಾಗೂ ಪಾಂಡೆಗೆ ಇದೊಂದು ವಿಶೇಷ ಹಾಗೂ ವಿಭಿನ್ನ ಅನುಭವ. ಉತ್ತಪ್ಪ ಸೋಮವಾರ ಸಂಜೆ ಅಭ್ಯಾಸ ನಡೆಸುತ್ತಿದ್ದಾಗಲೇ ಅದನ್ನು ಇಣುಕಿ ನೋಡಲು ಮಹಿಳಾ ಅಭಿಮಾನಿಗಳು ಪೈಪೋಟಿಗಿಳಿದಿದ್ದರು.

ಆದರೆ ಹ್ಯಾಟ್ರಿಕ್ ಸೋಲುಗಳಿಂದ ರಾಯಲ್ ಚಾಲೆಂಜರ್ಸ್ ಆಟಗಾರರ ಮನಸ್ಸು ಜರ್ಜರಿತವಾಗಿದೆ. 205 ರನ್ ಗಳಿಸಿಯೂ ಸೋಲು ಕಂಡಿದ್ದು ಈ ತಂಡದ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಿದೆ. ಬ್ಯಾಟಿಂಗ್‌ಗಿಂತ ಬೌಲಿಂಗ್‌ನದ್ದೇ ದೊಡ್ಡ ಸಮಸ್ಯೆ. ಐದನೇ ಬೌಲರ್ ಕೊರತೆ ಈ ತಂಡವನ್ನು ಕಾಡುತ್ತಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಪದೇಪದೇ ವಿಫಲರಾಗುತ್ತಿದ್ದಾರೆ. ಈ ಸಮಸ್ಯೆಗೆ ಕಾರಣ ಕ್ರಿಸ್ ಗೇಲ್ ಮೇಲೆ ಇಟ್ಟಿರುವ ಅತಿಯಾದ ವಿಶ್ವಾಸ.

ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ 205 ರನ್ ಗಳಿಸಿಯೂ ಗೆಲ್ಲಲು ಚಾಲೆಂಜರ್ಸ್‌ಗೆ ಸಾಧ್ಯವಾಗಿರಲಿಲ್ಲ. ರಾಜಸ್ತಾನ ರಾಯಲ್ಸ್ ತಂಡದ ಬ್ಯಾಟ್ಸ್‌ಮನ್‌ಗಳು ಹಿಗ್ಗಾಮುಗ್ಗಾ ಥಳಿಸಿದ್ದರು. ಅದರಲ್ಲೂ ಎಸ್. ಅರವಿಂದ್ ಹಾಕಿದ ಒಂದು ಓವರ್‌ನ ಎಲ್ಲಾ ಎಸೆತಗಳನ್ನು ಬೌಂಡರಿಗಟ್ಟಿದ್ದರು. ನಾಲ್ಕು ಮಂದಿ ಅಂತರರಾಷ್ಟ್ರೀಯ ಬೌಲರ್‌ಗಳಿದ್ದರೂ ಈ ತಂಡಕ್ಕೆ ಯಶಸ್ಸು ಕಾಣಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪಾಯಿಂಟ್ ಪಟ್ಟಿಯ್ಲ್ಲಲೂ ಕೆಳ ಕ್ರಮಾಂಕದಲ್ಲಿದೆ.

ಈ ಕಾರಣ ಈ ತಂಡದ ಮುಂದೆ ದೊಡ್ಡ ಸವಾಲಿದೆ. ಆದರೆ ಪುಣೆ ವಾರಿಯರ್ಸ್ ಪರಿಸ್ಥಿತಿ ತದ್ವಿರುದ್ಧ. ಈ ತಂಡ ಈ ಬಾರಿ ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿದೆ. ಕಳೆದ ಬಾರಿ ಕುಸಿತ ಕಂಡಿದ್ದ ಈ ತಂಡಕ್ಕೆ ಸ್ಫೂರ್ತಿ ನೀಡಿರುವುದು ಸೌರವ್ ಗಂಗೂಲಿ. ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಯಶಸ್ಸು ಕಂಡಿದ್ದ ಗಂಗೂಲಿ ಅವರನ್ನು ಕಳೆದ ಬಾರಿ ಹರಾಜಿನಲ್ಲಿ ಯಾರೂ ಕೊಂಡುಕೊಂಡಿರಲಿಲ್ಲ. ಆದರೆ ವಾರಿಯರ್ಸ್ ಮಾಲೀಕ ಸುಬ್ರತಾ  ರಾಯ್ ತಮ್ಮ ತಂಡಕ್ಕೆ ದಾದಾ ಅವರನ್ನು ಸೇರಿಸಿಕೊಂಡಿದ್ದರು.

ತಂಡಗಳು ಇಂತಿವೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಡೇನಿಯಲ್ ವೆಟೋರಿ (ನಾಯಕ), ಮಾಯಂಕ್ ಅಗರ್ವಾಲ್, ಕ್ರಿಸ್ ಗೇಲ್, ತಿಲಕರತ್ನೆ ದಿಲ್ಶಾನ್, ವಿರಾಟ್ ಕೊಹ್ಲಿ,        ಎಬಿ ಡಿವಿಲಿಯರ್ಸ್, ಸೌರಭ್ ತಿವಾರಿ, ಚೇತೇಶ್ವರ ಪೂಜಾರ, ಜಹೀರ್ ಖಾನ್, ಆರ್.ವಿನಯ್ ಕುಮಾರ್, ಮುತ್ತಯ್ಯ ಮುರಳೀಧರನ್, ಕೆ.ಪಿ. ಅಪ್ಪಣ್ಣ, ಅಭಿಮನ್ಯು ಮಿಥುನ್, ಎಸ್.ಅರವಿಂದ್, ಅರುಣ್ ಕಾರ್ತಿಕ್, ಮೊಹಮ್ಮದ್ ಕೈಫ್ ಹಾಗೂ ಹರ್ಷಲ್ ಪಟೇಲ್.

ಪುಣೆ ವಾರಿಯರ್ಸ್: ಸೌರವ್ ಗಂಗೂಲಿ (ನಾಯಕ), ರಾಬಿನ್ ಉತ್ತಪ್ಪ, ಜೆಸ್ಸಿ ರೈಡರ್, ಮಾರ್ಲೊನ್ ಸ್ಯಾಮುಯೆಲ್ಸ್, ಸ್ಟೀವನ್ ಸ್ಮಿತ್, ಆ್ಯಂಜೆಲೊ ಮ್ಯಾಥ್ಯೂಸ್, ಮಿಥುನ್ ಮನ್ಹಾಸ್, ರಾಹುಲ್ ಶರ್ಮ, ಅಶೋಕ್ ದಿಂಡಾ, ಮುರಳಿ ಕಾರ್ತಿಕ್, ಮನೀಷ್ ಪಾಂಡೆ, ಆಶಿಶ್ ನೆಹ್ರಾ, ವೇಯ್ನ ಪಾರ್ನೆಲ್, ಭುವನೇಶ್ವರ್ ಕುಮಾರ್, ಮೋನಿಶ್ ಮಿಶ್ರಾ ಹಾಗೂ ತಮೀಮ್ ಇಕ್ಬಾಲ್. ಪಂದ್ಯ ಆರಂಭ:

ರಾತ್ರಿ 8.00ಕ್ಕೆ,  ನೇರ ಪ್ರಸಾರ: ಸೆಟ್ ಮ್ಯಾಕ್ಸ್

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.