ADVERTISEMENT

ವಾಲಿಬಾಲ್ ಉಕ್ಕರಪಾಂಡ್ಯನ್ ಉತ್ತಮ ಆಟ:ಫೈನಲ್‌ಗೆ ಐಓಬಿ ತಂಡ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 19:30 IST
Last Updated 7 ಏಪ್ರಿಲ್ 2012, 19:30 IST

ಪಡುಬಿದ್ರಿ: ನಿರೀಕ್ಷೆಗಿಂತ ಸುಲಭವಾಗಿ ಹರ್ಯಾಣದ ಎಚ್‌ಎಸ್‌ಐಡಿಸಿ ತಂಡವನ್ನು ನೇರ ಸೆಟ್‌ಗಳಲ್ಲಿ ಹಿಮ್ಮೆಟ್ಟಿಸಿದ ಚೆನ್ನೈನ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ತಂಡ, ಇಲ್ಲಿಗೆ ಸಮೀಪದ ಎಲ್ಲೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಆಹ್ವಾನ ವಾಲಿಬಾಲ್ ಟೂರ್ನಿಯ ಫೈನಲ್ ತಲುಪಿತು.

ಎಲ್ಲೂರು ಶ್ರೀವಿಶ್ವೇಶ್ವರ ದೇವಸ್ಥಾನದ ಮುಂಭಾಗ, ಯುವಕ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಶನಿವಾರ ಬ್ಯಾಂಕ್ ತಂಡದವರು 25-20, 25-20, 25-23ರಲ್ಲಿ ಹರ್ಯಾಣ ವಿರುದ್ಧ ಗೆಲ್ಲಲು ಒಂದು ಗಂಟೆ ತೆಗೆದುಕೊಂಡರು. ರಾಷ್ಟ್ರೀಯ ತಂಡದ ಆಟಗಾರ ಉಕ್ಕರಪಾಂಡ್ಯನ್ `ಸೆಟ್ಟರ್~ ಪಾತ್ರದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಹರ್ಯಾಣ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ (ಎಚ್‌ಎಸ್‌ಐಡಿಸಿ) ತಂಡದ ಪರ ಸುರ್ಜಿತ್ ಸಿಂಗ್ ಗಮನ ಸೆಳೆದರು.

ಕೆಎಸ್‌ಪಿ ಮುನ್ನಡೆ: ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಬೆಂಗಳೂರಿನ ಕರ್ನಾಟಕ ಪೊಲೀಸ್ ತಂಡ 25-20, 27-29, 22-25, 25-21, 15-13ರಲ್ಲಿ 3-2 ಸೆಟ್‌ಗಳಿಂದ ಬೆಂಗಳೂರಿನ ಬಿಎಸ್‌ಎನ್‌ಎಲ್ ತಂಡವನ್ನು ಸೋಲಿಸಿ ಸೆಮಿಫೈನಲ್ ತಲುಪಿತು.

ಪಂದ್ಯಾವಳಿಯಲ್ಲಿ ಪ್ರೇಕ್ಷಕರ ಮನಗೆದ್ದಿದ್ದ ಕರ್ನಾಟಕ ಯೂತ್ ತಂಡ, `ಬಿ~ ಗುಂಪಿನ ಕೊನೆಯ ಲೀಗ್  ಪಂದ್ಯದಲ್ಲಿ ಕೊನೆಗೂ ಜಯದ ರುಚಿಕಂಡಿತು. ಎಲ್ಲಾ ಪಂದ್ಯಗಳಲ್ಲಿ ಹೋರಾಟ ತೋರಿದ್ದ ಕರ್ನಾಟಕ ಯೂತ್‌ತಂಡ 28-26, 19-25, 26-22, 22-25, 16-14 ಅಂಕಗಳಿಂದ ಮುಂಬೈಯ ಆರ್‌ಸಿಎಫ್ ತಂಡವನ್ನು ಸೋಲಿಸಿತು. ಕರ್ನಾಟಕದ ವಿನಾಯಕ್, ಆರ್‌ಸಿಎಫ್‌ನ ವಿಕ್ಕಿ ಪೂಜಾರಿ ಅವರ ಆಟ ಪ್ರೇಕ್ಷಕರ ಮೆಚ್ಚಗೆಗೆ ಪಾತ್ರವಾಯಿತು. ಈ ಪಂದ್ಯ ಎರಡೂ ತಂಡಗಳಿಗೆ ಅಷ್ಟೇನೂ ಮಹತ್ವದ್ದಾಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.