ADVERTISEMENT

ವಾಲಿಬಾಲ್: ಎಂಇಜಿ ತಂಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST
ವಾಲಿಬಾಲ್: ಎಂಇಜಿ ತಂಡಕ್ಕೆ ಗೆಲುವು
ವಾಲಿಬಾಲ್: ಎಂಇಜಿ ತಂಡಕ್ಕೆ ಗೆಲುವು   

ಬೆಂಗಳೂರು: ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ತಂಡ ಕರ್ನಾಟಕ ವಾಲಿಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ 19ನೇ ರಾಜ್ಯ `ಎ~ ಡಿವಿಷನ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಭಾನುವಾರದ ಪಂದ್ಯದಲ್ಲಿ 3-0ಸೆಟ್‌ಗಳಿಂದ ಪೋಸ್ಟಲ್ ತಂಡವನ್ನು ಮಣಿಸಿತು.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಂಇಜಿ ಮೊದಲ ಸೆಟ್‌ನಲ್ಲಿ ಕಠಿಣ ಸವಾಲು ಎದುರಿಸಿ 25-23ರಲ್ಲಿ ಗೆಲುವು ಸಾಧಿಸಿತು. ಇನ್ನುಳಿದ ಸೆಟ್‌ಗಳಲ್ಲಿಯೂ 25-19, 25-23ರಲ್ಲಿ ಜಯ ಪಡೆಯಿತು. ಈ ಗೆಲುವಿನೊಂದಿಗೆ ಮದ್ರಾಸ್ ತಂಡ ಲೀಗ್ ಮಾದರಿಯ ಮೊದಲ ಹಂತದಲ್ಲಿ ಎರಡನೇ ಸ್ಥಾನ ಗಳಿಸಿತು.
ಇನ್ನೊಂದು ಪಂದ್ಯದಲ್ಲಿ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ (ಐಟಿಐ) 25-18, 25-22, 25-20ರಲ್ಲಿ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ತಂಡವನ್ನು ಸೋಲಿಸಿತು.

ಮಳೆ ಕಾಟ: ಭಾನುವಾರ ಮೊದಲ ಪಂದ್ಯ ಬೆಳಿಗ್ಗೆ 8.30ಕ್ಕೆ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ, ಮಳೆಯ ಕಾರಣ ಪಂದ್ಯಗಳು ನಾಲ್ಕು ಗಂಟೆ ತಡವಾಗಿ ಆರಂಭವಾದವು. ಮಳೆಯಿಂದ ವಾಲಿಬಾಲ್ ಕೋರ್ಟ್‌ನಲ್ಲಿ ನೀರು ತುಂಬಿಕೊಂಡಿತ್ತು. ಆದ್ದರಿಂದ ಪಂದ್ಯಗಳನ್ನು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲಾಯಿತು. ಈ ಪಂದ್ಯಗಳು ಶುಕ್ರವಾರ ನಡೆಯಬೇಕಿತ್ತು. ಮಳೆಯ ಕಾರಣ ಮುಂದೂಡಲಾಗಿತ್ತು.

ಭಾನುವಾರ ಲೀಗ್ ಮಾದರಿಯ ಮೊದಲ ಹಂತದ ಪಂದ್ಯಗಳು ಮುಕ್ತಾಯವಾದವು. ಸೋಮವಾರ ಆರಂಭವಾಗಲಿರುವ ಎರಡನೇ ಹಂತದ ಮೊದಲ ಪಂದ್ಯದಲ್ಲಿ ಬಿಎಸ್‌ಎನ್‌ಎಲ್ ಮತ್ತು ಎಲ್‌ಐಸಿ ತಂಡಗಳು ಪೈಪೋಟಿ ನಡೆಸಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.