ADVERTISEMENT

ವಿಂಡೀಸ್ ವಿರುದ್ಧ ಗೆಲ್ಲುವ ಅವಕಾಶ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 19:30 IST
Last Updated 27 ಫೆಬ್ರುವರಿ 2011, 19:30 IST

ನವದೆಹಲಿ: ವೆಸ್ಟ್ ಇಂಡೀಸ್ ತಂಡ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಅನುಭವಿಸಿದ ಸೋಲಿನ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಇದರ ಜೊತೆಗೆ ಪ್ರಮುಖ ಆಟಗಾರ ಡ್ವೇಯ್ನ್ ಬ್ರಾವೊ ಗಾಯ ಗೊಂಡದ್ದು ತಂಡದ ಚಿಂತೆಗೆ ಕಾರಣವಾಗಿದೆ. ಡರೆನ್ ಸಾಮಿ ನೇತೃತ್ವದ ತಂಡ ಆತ್ಮವಿಶ್ವಾಸವನ್ನು ಕಳೆದುಕೊಂಡಿದೆ. ಇದರ ಲಾಭ ಎತ್ತಿಕೊಳ್ಳುವುದು ಹಾಲೆಂಡ್ ತಂಡದ ನಾಯಕ ಪೀಟರ್ ಬೊರೆನ್ ಅವರ ಗುರಿ.

‘ದಕ್ಷಿಣ ಆಫ್ರಿಕಾ ವಿರುದ್ಧ ವಿಂಡೀಸ್ ತಂಡ ನೀಡಿದ ಪ್ರದರ್ಶನವನ್ನು ನೋಡಿದ್ದೇವೆ. ನಮಗೆ ಅವರನ್ನು ಮಣಿಸಲು ಲಭಿಸಿರುವ ಉತ್ತಮ ಅವಕಾಶ ಇದು’ ಎಂದು ಪಂದ್ಯದ ಮುನ್ನಾದಿನವಾದ ಭಾನುವಾರ ಸುದ್ದಿಗೋಷ್ಠಿಯಲ್ಲಿ ಬೊರೆನ್ ತಿಳಿಸಿದರು. ಡ್ವೇಯ್ನಿ ಬ್ರಾವೊ ಗಾಯಗೊಂಡದ್ದು ವಿಂಡೀಸ್‌ಗೆ ಹಿನ್ನಡೆ ಉಂಟುಮಾಡಿದೆ ಎಂದು ಬೊರೆನ್ ನುಡಿದರು.
 
‘ಅವರು ತಂಡದ ಉಪನಾಯಕ ಮಾತ್ರವಲ್ಲ, ಪ್ರಮುಖ ಆಟಗಾರನೂ ಹೌದು. ಆದರೆ ಬ್ರಾವೊ ಅನುಪಸ್ಥಿತಿಯಲ್ಲೂ ವಿಂಡೀಸ್ ಉತ್ತಮ ಪ್ರದರ್ಶನ ನೀಡುವ ತಾಕತ್ತು ಹೊಂದಿದೆ’ ಎಂದರು. ‘ನಾವು ಕಳೆದ ಎರಡು ದಿನಗಳಿಂದ ಇಲ್ಲಿ ಅಭ್ಯಾಸ ನಡೆಸುತ್ತಿದ್ದೇವೆ. ಇದರಿಂದ ಇಲ್ಲಿನ ಪರಿಸ್ಥಿತಿಗೆ ಹೊಂದಿ ಕೊಳ್ಳಲು ಸಾಧ್ಯವಾಗಿದ್ದು, ಫೀಲ್ಡಿಂಗ್ ನಲ್ಲಿ ಸುಧಾರಣೆ ತಂದುಕೊಳ್ಳುವತ್ತ ಗಮನ ಹರಿಸಿದ್ದೇವೆ. ತಂಡದ ಹೆಚ್ಚಿನ ಸದಸ್ಯರು ಈ ಹಿಂದೆ ಹಲವು ಸಲ ನವದೆಹಲಿಗೆ ಭೇಟಿ ನೀಡಿದ್ದಾರೆ. ಇದು ಕೂಡಾ ನಮಗೆ ನೆರವಾಗಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.