ADVERTISEMENT

ವಿಂಬಲ್ಡನ್‌: ಪ್ರೀ ಕ್ವಾರ್ಟರ್‌ಫೈನಲ್‌ಗೆ ಏಂಜಲಿಕ್ ಕೆರ್ಬರ್‌

ರಾಯಿಟರ್ಸ್
Published 8 ಜುಲೈ 2017, 19:30 IST
Last Updated 8 ಜುಲೈ 2017, 19:30 IST
ಏಂಜಲಿಕ್ ಕೆರ್ಬರ್
ಏಂಜಲಿಕ್ ಕೆರ್ಬರ್   

ಲಂಡನ್‌: ಗುಣಮಟ್ಟದ ಆಟ ಆಡಿದ ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಅವರು ವಿಂಬಲ್ಡನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನ ಹೋರಾಟದಲ್ಲಿ ಕೆರ್ಬರ್‌ 4–6, 7–6, 6–4ರಲ್ಲಿ ಅಮೆರಿಕಾದ ಶೆಲ್ಬಿ ರೋಜರ್ಸ್‌ ಅವರನ್ನು ಮಣಿಸಿದರು.

ಇಲ್ಲಿ ಅಗ್ರಶ್ರೇಯಾಂಕ ಹೊಂದಿರುವ ಕೆರ್ಬರ್‌ ಆರಂಭಿಕ ಸೆಟ್‌ನಲ್ಲಿ ಮುಗ್ಗರಿಸಿದರು. ಬಳಿಕ ಲಯ ಕಂಡುಕೊಂಡ  ಅವರು ಎರಡು ಮತ್ತು ಮೂರನೇ ಸೆಟ್‌ಗಳಲ್ಲಿ ಮಿಂಚಿನ ಆಟ ಆಡಿ ಗೆಲುವು ತಮ್ಮದಾಗಿಸಿಕೊಂಡರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಗಾರ್ಬೈನ್‌ ಮುಗುರುಜಾ 6–2, 6–2ರಲ್ಲಿ ಸೊರಾನ ಕ್ರಿಸ್ಟಿ ಎದುರೂ, ಅಗ್ನಿಸ್ಕಾ ರಾಡ್ವಾಂಸ್ಕಾ 3–6, 6–4, 6–1ರಲ್ಲಿ ಟೈಮಿ ಬ್ಯಾಕ್‌ಸಿಂಜಿಕಿ ಮೇಲೂ, ಸ್ವೆಟ್ಲಾನ ಕುಜ್ನೆತ್ಸೋವಾ 6–4, 6–0ರಲ್ಲಿ ಪೊಲೊನಾ ಹೆರ್ಕಾಗ್‌ ವಿರುದ್ಧವೂ, ಮಗಡಲೆನಾ ರ್‍ಯಾಬರಿಕೊವಾ 6–2, 6–1ರಲ್ಲಿ ಲೆಸ್‍ಯಾ ಸುರೆಂಕೊ ಎದುರೂ, ಪೆಟ್ರಾ ಮಾರ್ಟಿಕ್‌ 7–6, 6–1ರಲ್ಲಿ ಜರಿನಾ ದಿಯಾಸ್‌ ವಿರುದ್ಧವೂ, ಕೊಕೊ ವೆಂಡೆವೆಘೆ 6–2, 6–4ರಲ್ಲಿ ಅಲಿಸನ್‌ ರಿಸ್ಕೆ ಮೇಲೂ ಗೆಲುವು ಗಳಿಸಿದರು.

ನಾಲ್ಕನೇ ಸುತ್ತಿಗೆ ಮಿಲೊಸ್‌: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕೆನಡಾದ ಮಿಲೊಸ್‌ ರಾವೊನಿಕ್‌ ನಾಲ್ಕನೇ ಸುತ್ತು ಪ್ರವೇಶಿಸಿದರು. ಮೂರನೇ ಸುತ್ತಿನ ಹೋರಾಟದಲ್ಲಿ  ಮಿಲೊಸ್‌ 7–6, 6–4, 7–5ರಲ್ಲಿ ಸ್ಪೇನ್‌ನ ಅಲ್ಬರ್ಟ್‌ ರಾಮೊಸ್‌ ಅವರನ್ನು ಸೋಲಿಸಿದರು.
*


ಬೆಥನಿ ಮಾಟೆಕ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು

ನರಕಯಾತನೆ ಅನುಭವಿಸಿದ್ದೆ: ಬೆಥನಿ
ಲಂಡನ್‌: ಸೊರಾನ ಕ್ರಿಸ್ಟಿ ವಿರುದ್ಧದ ವಿಂಬಲ್ಡನ್‌ ಟೂರ್ನಿಯ ಪಂದ್ಯದ ವೇಳೆ ಮಂಡಿಗೆ ಬಲವಾದ ಪೆಟ್ಟು ಬಿದ್ದ ನಂತರ 36 ಗಂಟೆಗಳ ಕಾಲ ನರಕಯಾತನೆ ಅನುಭವಿಸಿದ್ದೆ’ ಎಂದು ಅಮೆರಿಕಾದ ಟೆನಿಸ್‌ ಆಟಗಾರ್ತಿ ಬೆಥನಿ ಮಟೆಕ್‌ ಸ್ಯಾಂಡ್ಸ್‌ ಹೇಳಿದ್ದಾರೆ.

ADVERTISEMENT

ಗುರುವಾರ ಆಲ್‌ ಇಂಗ್ಲೆಂಡ್‌ ಕ್ಲಬ್‌ನ 17ನೇ ಅಂಗಳದಲ್ಲಿ ನಡೆದಿದ್ದ ಸೊರಾನ ವಿರುದ್ಧದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದ ವೇಳೆ ಬೆಥನಿ ಅವರ ಬಲ ಮಂಡಿಗೆ ಬಲವಾದ ಪೆಟ್ಟು ಬಿದ್ದಿತ್ತು.

ಸೊರಾನ ಬಾರಿಸಿದ ಚೆಂಡನ್ನು ಹಿಂತಿರುಗಿಸಲು ಮುಂದಾದಾಗ 32 ವರ್ಷದ ಬೆಥನಿ ಜಾರಿ ಬಿದ್ದಿದ್ದರು. ಆಗ ಗಾಯವಾಗಿತ್ತು. ಅಂಗಳಕ್ಕೆ ಧಾವಿಸಿದ್ದ ವೈದ್ಯಕೀಯ ಸಿಬ್ಬಂದಿ 25 ನಿಮಿಷಗಳ ಕಾಲ ಅವರಿಗೆ ಚಿಕಿತ್ಸೆ ನೀಡಿ ಬಳಿಕ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸೇರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.