ADVERTISEMENT

ವಿನೋದ್, ಶೀತಲ್ ಶುಭಾರಂಭ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 19:30 IST
Last Updated 13 ಸೆಪ್ಟೆಂಬರ್ 2011, 19:30 IST
ವಿನೋದ್, ಶೀತಲ್ ಶುಭಾರಂಭ
ವಿನೋದ್, ಶೀತಲ್ ಶುಭಾರಂಭ   

ಬೆಂಗಳೂರು: ಸೊಗಸಾದ ಆಟ ಪ್ರದರ್ಶಿಸಿದ ಕರ್ನಾಟಕದ ವಿನೋದ್ ಗೌಡ ಹಾಗೂ ಶೀತಲ್ ಗೌತಮ್ ಇಲ್ಲಿ ಆರಂಭವಾದ ಜೆಜಿಐ-ಎಐಟಿಎ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದರು.

ಇಲ್ಲಿನ ಕೆಎಸ್‌ಎಲ್‌ಟಿಎ ಅಂಗಳದಲ್ಲಿ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ವಿನೋದ್ 6-0, 6-0ರಲ್ಲಿ ಆತಿಥೇಯ ರಾಜ್ಯದ ಅಕ್ಷಯ್ ಕಿಶೋರ್ ಅವರನ್ನು ಮಣಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು.
ಅತ್ಯುತ್ತಮ ಸರ್ವ್ ಹಾಗೂ ಪ್ರಭಾವಿ ರಿಟರ್ನ್ ಮೂಲಕ ಗಮನ ಸೆಳೆಯುವ ಆಟವಾಡಿದ ಗೌತಮ್ 13 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಸುಲಭ ಗೆಲುವು ಪಡೆದರು. ಅಕ್ಷಯ್ ಯಾವುದೇ ಹಂತದಲ್ಲೂ ಸವಾಲು ಎನಿಸಲಿಲ್ಲ.

ಮಹಿಳೆಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಶೀತಲ್ ಗೌತಮ್ 6-2, 6-3ರಲ್ಲಿ ಕರ್ನಾಟಕದವರೇ ಆದ ಪಿ. ಸಹನಾ ಶೆಟ್ಟಿ ಎದುರು ಗೆಲುವು ಸಾಧಿಸಿದರು. ಎರಡೂ ಸೆಟ್‌ಗಳಲ್ಲಿ ಶೀತಲ್ ಮೊದಲ್ ಸೆಟ್‌ನಲ್ಲಿ ಸುಲಭ ಗೆಲುವು ಪಡೆದರು. ಎರಡನೇ ಸೆಟ್‌ನಲ್ಲಿ ಅಲ್ಪ ಪ್ರತಿರೋಧ ನೀಡುವಲ್ಲಿ ಸಹನಾ ಯಶ ಕಂಡರು. ಆದರೆ ಸೆಟ್ ಗೆದ್ದುಕೊಳ್ಳಲು ಆಗಲಿಲ್ಲ.

ಆದರೆ ಕರ್ನಾಟಕದ ಇನ್ನೊಬ್ಬ ಆಟಗಾರ್ತಿ ಪ್ರೇರಣಾ ಪ್ರತಾಪ್ 2-6, 3-6ರಲ್ಲಿ ಜೀಜಬ್ ವಿರುದ್ಧ ಸೋಲು ಕಂಡು ಅಚ್ಚರಿ ಮೂಡಿಸಿದರು.

ಪುರುಷರ ವಿಭಾಗದ ಇತರ ಪಂದ್ಯಗಳಲ್ಲಿ ಆಂಧ್ರ ಪ್ರದೇಶದ ಎಂ. ಸಕೇತ್ 6-2, 6-0ರಲ್ಲಿ ವೀರಾ ವಸಂತ್ ಮೇಲೂ, ವಿಜಯ್ ಸುಂದರ್ ಪ್ರಶಾಂತ್ 6-0, 6-2ರಲ್ಲಿ ಅರ್ಪಿತ್ ಶರ್ಮ ರಾಜ್ ವಿರುದ್ಧವೂ, ಸಾಯಿ ಶರಣ್ ರೆಡ್ಡಿ 4-6, 6-0, 6-2ರಲ್ಲಿ ಕರ್ನಾಟಕದ ಸಾಗರ್ ಮಂಜಣ್ಣ ಮೇಲೂ ಜಯ ಸಾಧಿಸಿದರು.

ಮೊದಲ ಸೆಟ್‌ನಲ್ಲಿ ಗೆಲುವು ಪಡೆದು ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿದ್ದ ಸಾಗರ್ ಮಂಜಣ್ಣ ಮುಂದಿನ ಎರಡೂ ಸೆಟ್‌ಗಳಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಲಿಲ್ಲ.

ಮಹಿಳೆಯರ ವಿಭಾಗದಲ್ಲಿ ಟ್ರಿಟಾ ಭಟ್ಟಾಚಾರ್ಯ 7-6, 6-2ರಲ್ಲಿ ಆತಿಥೇಯ ರಾಜ್ಯದ ಲಿಖಿತಾ ಶೆಟ್ಟಿ ಮೇಲೂ, ನೊವಾ ಪಟೇಲ್ 6-2, 6-7, 6-2ರಲ್ಲಿ ಯು.ಎಂ. ಶಲಕಾ ವಿರುದ್ಧವೂ, ಕರ್ನಾಟಕದ ಲಿಜಾ ವಿಪ್ಲವಾ 6-1, 6-2ರಲ್ಲಿ ಅಮಲಾ ಅಮೋಲ್ ವಾರಿಖ್ ಮೇಲೂ, ದೆಹಲಿಯ ವನಿಯಾ ತಂಗ್ವಾಲ್ 6-4, 5-7, 6-2ರಲ್ಲಿ ಪ್ರಾರ್ಥನಾ ಪ್ರತಾಪ್ ವಿರುದ್ಧವೂ, ದಿಶಾ ಸೈಯ್ಗಲ್ 6-2, 6-4ರಲ್ಲಿ ಆತಿಥೇಯ ರಾಜ್ಯದ ರಚಿತಾ ಸರ್ದಾ ಮೇಲೂ, ಆಂಧ್ರ ಪ್ರದೇಶದ ಜೀನಬ್ ಅಲಿ ಸಜ್ಜದ್ 6-2, 6-3ರಲ್ಲಿ ಪ್ರೇರಣಾ ಪ್ರತಾಪ್ ವಿರುದ್ಧವೂ ಜಯ ಪಡೆದರು.

ದಿಶಾ ಎದುರು ಸೋಲು ಕಂಡ ರಚಿತಾ ಮೊದಲ ಸೆಟ್‌ನಲ್ಲಿ ಸುಲಭವಾಗಿ ಶರಣಾದರೆ, ಎರಡನೇ ಸೆಟ್‌ನಲ್ಲಿ ಉತ್ತಮ ಪ್ರತಿರೋಧ ತೋರಿ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.