ADVERTISEMENT

ವಿವಾದಕ್ಕೆ ಕಾರಣವಾದ ಸೈನಾ ನಿರ್ಧಾರ

ಬ್ಯಾಡ್ಮಿಂಟನ್: ಗೆಲುವಿಗೆ ಒಂದು ಅಂಕ ಅಗತ್ಯವಿದ್ದಾಗ `ಗಾಯ'ಗೊಂಡು ನಿವೃತ್ತಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 19:59 IST
Last Updated 19 ಡಿಸೆಂಬರ್ 2012, 19:59 IST

ಲಖನೌ (ಪಿಟಿಐ/ಐಎಎನ್‌ಎಸ್): ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸೈನಾ ನೆಹ್ವಾಲ್ ಅವರು ಸಯ್ಯದ್ ಮೋದಿ ಇಂಡಿಯಾ ಗ್ರ್ಯಾನ್ ಪ್ರೀ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಗೆಲುವಿನ ಅಂಚಿನಲ್ಲಿದ್ದಾಗಲೇ ಪಂದ್ಯವನ್ನು ಬಿಟ್ಟು ಹೋಗಿದ್ದು, ವಿವಾದಕ್ಕೆ ಕಾರಣರಾಗಿದ್ದಾರೆ.

ಬಾಬು ಬನಾರ್ಸಿ ದಾಸ್ ಕೋರ್ಟ್‌ನಲ್ಲಿ ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ ಗೆಲುವು ಸಾಧಿಸಲು ಒಂದು ಪಾಯಿಂಟ್ ಮಾತ್ರ ಅಗತ್ಯವಿತ್ತು. ರಷ್ಯಾದ ಸೆನಿಯಾ ಪಲಿಕರ್ಪೋವಾ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್‌ನ ಆಟಗಾರ್ತಿ ಮೊದಲ ಗೇಮ್‌ನಲ್ಲಿ 21-17ರಲ್ಲಿ ಗೆಲುವು ಸಾಧಿಸಿದ್ದರು. ಎರಡನೇ ಗೇಮ್‌ನಲ್ಲಿ 20-17ರಲ್ಲಿ ಮುನ್ನಡೆಯಲ್ಲಿದ್ದಾಗ ನಿವೃತ್ತಿ ಪ್ರಕಟಿಸಿ ಪಂದ್ಯದಿಂದ ಹಿಂದೆ ಸರಿದು ಅಚ್ಚರಿ ಮೂಡಿಸಿದರು.

`ಮೊಣಕಾಲಿನ ಮೇಲೆ ಹೆಚ್ಚು ಒತ್ತಡ ಹಾಕಬಾರದು ಎಂದು ಫಿಸಿಯೋ ತಿಳಿಸಿದ್ದರು. ಆರಂಭದಿಂದಲೂ ಉತ್ತಮವಾಗಿ ಆಡುತ್ತಿದ್ದೆ. ಆದರೆ, ದಿಢೀರನೇ ಮೊಣಕಾಲು ನೋವು ಹೆಚ್ಚಾಯಿತು. ಆದ್ದರಿಂದ ಪಂದ್ಯದಿಂದ ಹಿಂದೆ ಸರಿಯಲು ನಿರ್ಧರಿಸಿದೆ' ಎಂದು 22 ವರ್ಷದ ಸೈನಾ ಹೇಳಿದ್ದಾರೆ.

2009 ಹಾಗೂ 10ರಲ್ಲಿ ಸೈನಾ ಇಲ್ಲಿ ಚಾಂಪಿಯನ್ ಆಗಿದ್ದರು. ಚೀನಾದಲ್ಲಿ ಇತ್ತೀಚಿಗೆ ನಡೆದ ಬಿಡಬ್ಲ್ಯುಎಫ್ ವರ್ಲ್ಡ್ ಸೂಪರ್ ಸೀರಿಸ್ ಫೈನಲ್ಸ್‌ನ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಆಟಗಾರ್ತಿ ಸೋಲು ಕಂಡಿದ್ದರು. ಈ ವೇಳೆಯೂ ಮೊಣಕಾಲು ನೋವು ಅವರನ್ನು ಕಾಡಿತ್ತು. ಆದ್ದರಿಂದ ಈ ಲಖನೌದಲ್ಲಿ ಆಡುವುದಿಲ್ಲ ಎಂದು ಮೊದಲೇ ತಿಳಿಸಿದ್ದರು. ಆದರೆ, ಸಂಘಟಕರ ಒತ್ತಾಯದ ಮೇರೆಗೆ ಅವರು ಇಲ್ಲಿ ಆಡಿದ್ದರು ಎಂದು ತಿಳಿದು ಬಂದಿದೆ.

`ಸೂಪರ್ ಸೀರಿಸ್ ಫೈನಲ್‌ನಲ್ಲಿ ಆಡುವಾಗಲೂ ಈ ನೋವು ಕಾಡಿತ್ತು. ಆದರೂ, ನೋವನ್ನೂ ಸಹಿಸಿಕೊಂಡು ಆಡಿದ್ದೆ. ಇಲ್ಲಿ ಆ ನೋವು ಹೆಚ್ಚಾದ ಕಾರಣ ಮುಂದುವರಿಯಲು ಸಾಧ್ಯವಾಗಲಿಲ್ಲ' ಎಂದು ಅವರು ಹೇಳಿದ್ದಾರೆ. ಆದರೆ ಸೈನಾ ಉದ್ದೇಶಪೂರ್ವಕವಾಗಿ ಹಿಂದೆ ಸರಿದಿದ್ದಾರೆ ಎಂಬ ಅನುಮಾನಗಳು ಎದ್ದಿವೆ.

ಟಿಕೆಟ್ ಬುಕ್ ಆಗಿತ್ತು:  `ಸೈನಾ ಬುಧವಾರ ಮಧ್ಯಾಹ್ನ 3.30ಕ್ಕೆ ಹೈದರಾಬಾದ್‌ಗೆ ವಾಪಸ್ ತೆರಳಲು ಟಿಕೆಟ್ ಬುಕ್ ಮಾಡಿದ್ದರು. ಆದ್ದರಿಂದ ಬೆಳಿಗ್ಗಿನ ಅವಧಿಯಲ್ಲಿ ಮಾತ್ರ ಆಡುವುದಾಗಿ ತಿಳಿಸಿದ್ದರು. ನಿಗದಿಯಂತೆ ಈ ಪಂದ್ಯ ಮಧ್ಯಾಹ್ನ 2.30ಕ್ಕೆ ನಡೆಯಬೇಕಿತ್ತು. ಆದರೆ ಸೈನಾ ನಮ್ಮಲ್ಲಿ ಮನವಿ ಮಾಡಿಕೊಂಡು 12.30ಕ್ಕೆ ಪಂದ್ಯ ಆಯೋಜನೆ ಮಾಡುವಂತೆ ಕೋರಿಕೊಂಡಿದ್ದರು' ಎಂದು ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಡಿಎ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

`ಸೈನಾ ಮಂಗಳವಾರ ಸಹಾರಾ ಇಂಡಿಯಾ ಸಮೂಹದ ರಾಯಭಾರಿಯಾಗಿ ನೇಮಕವಾಗಿದ್ದರು. ಸಹಾರಾದ ಒತ್ತಡದ ಮೇರೆಗೆ ಅವರು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು' ಎಂದು ಮೂಲಗಳು ಸುದ್ದಿಸಂಸ್ಥೆಗೆ ಮಾಹಿತಿ ನೀಡಿವೆ.

ತೌಫೀಕ್‌ಗೆ ನಿರಾಸೆ:  ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿದ್ದ ಇಂಡೊನೇಷ್ಯಾದ ತೌಫಿಕ್ ಹಿದಾಯತ್ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲು ಕಂಡರು. ಭಾರತದ ಪ್ರತುಲ್ ಜೋಶಿ 21-17, 21- 17ರಲ್ಲಿ ತೌಫಿಕ್ ಅವರನ್ನು ಮಣಿಸಿ ಅಚ್ಚರಿಗೆ ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.