ADVERTISEMENT

ವಿವಿಧ ರಾಜ್ಯ; ಒಂದೇ ತಂಡ

ತಂಡ ಬದಲಿಸಿ ಯಶಸ್ಸು ಪಡೆದ ಹರ್ಷಲ್‌, ದೇವನ್‌

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 19:30 IST
Last Updated 6 ಡಿಸೆಂಬರ್ 2013, 19:30 IST

ಲಾಹ್ಲಿ, ರೋಹ್ಟಕ್‌: ಸೂಕ್ತ ಅವಕಾಶ ಮತ್ತು ಪ್ರತಿಭೆಗೆ ಮನ್ನಣೆ ಸಿಗದೇ ಪರದಾಡಿದ ಕೆಲ ಕ್ರಿಕೆಟಿಗರು ಹುಟ್ಟೂರಿನ ತಂಡದ ಬದಲು ಬೇರೆ ರಾಜ್ಯದ ತಂಡದಲ್ಲಿ ಆಡಿ ಯಶಸ್ಸು ಕಂಡಿದ್ದಾರೆ. ಈ ರೀತಿ ಯಶಸ್ಸು ಕಂಡವರೇ ಈಗ ಪ್ರಮುಖ ಆಟಗಾರರೆನಿಸಿದ್ದಾರೆ.

ಕರ್ನಾಟಕ ಎದುರಿನ ರಣಜಿ ಪಂದ್ಯಕ್ಕೆ ತಂಡವನ್ನು ಮುನ್ನಡೆಸುತ್ತಿರುವ ರಾಹುಲ್‌ ದೇವನ್‌ ಹುಟ್ಟಿದ್ದು ದೆಹಲಿಯಲ್ಲಿ. ಹರಿಯಾಣ ತಂಡದ ಪ್ರಮುಖ ಬೌಲರ್‌ ಆಗಿ ಗುರುತಿಸಿಕೊಂಡಿರುವ ಹರ್ಷಲ್‌ ಪಟೇಲ್‌ ಜನ್ಮಸ್ಥಳ ಗುಜರಾತ್‌. ಭಾರತ ಮೊದಲ ಸಲ ಏಕದಿನ ವಿಶ್ವಕಪ್‌ ಗೆದ್ದಾಗ ನಾಯಕರಾಗಿದ್ದ ಕಪಿಲ್ ದೇವ್‌ ಹುಟ್ಟೂರು ಚಂಡೀಗಡ. ಆದರೆ, ಅವರು ಹರಿಯಾಣ ತಂಡದ ಪರ ಆಡಿಯೇ ಯಶಸ್ಸು ಕಂಡಿದ್ದಾರೆ. ಅಷ್ಟೇ ಅಲ್ಲ, ಈ ತಂಡಕ್ಕೆ ಮೊದಲ ಸಲ ರಣಜಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ.

‘ದೆಹಲಿಯಲ್ಲಿ ಕ್ರಿಕೆಟ್‌ ಪ್ರತಿಭೆಗಳು ಹೆಚ್ಚು ಉದಯಿಸುತ್ತಿರುವ ಕಾರಣ ಪೈಪೋಟಿ ಹೆಚ್ಚಾಗಿದೆ. ಅವಕಾಶಗಳು ಕಡಿಮೆಯಾಗಿವೆ. ಆದ್ದರಿಂದ ಹರಿಯಾಣ ತಂಡದ ಪರ ಆಡಲು ಆಸಕ್ತಿ ವಹಿಸಿದೆ. ಸಾಕಷ್ಟು ಶ್ರಮವೂ ಪಟ್ಟೆ. ಆದ್ದರಿಂದ ಇಂದು ನಾಯಕ ಸ್ಥಾನ ಲಭಿಸಿದೆ’ ಎಂದು ರಾಹುಲ್‌ ದೇವನ್‌ ‘ಪ್ರಜಾವಾಣಿ’ ಎದುರು ಹೆಮ್ಮೆಯಿಂದ ಹೇಳಿದರು.

ದೇವನ್‌ ಪ್ರತಿಭಾವಂತ ಆಟಗಾರ. ಅವರು ಕ್ರಿಕೆಟ್‌ ಜೀವನ ಶುರು ಮಾಡಿದ್ದು ದೆಹಲಿಯಲ್ಲಿ. 2004-05ರಲ್ಲಿ 19 ವರ್ಷದೊಳಗಿನವರ ಟೂರ್ನಿಯಲ್ಲಿ ದೆಹಲಿ ಪರ ಆಡಿದ್ದರು. ಜೊತೆಗೆ 22 ವರ್ಷದೊಳಗಿನವರ ತಂಡಕ್ಕೂ ನಾಯಕರಾಗಿದ್ದರು. ಆದರೆ, ದೆಹಲಿ ರಣಜಿ ತಂಡದಲ್ಲಿ ಅವಕಾಶ ಸಿಗದ ಕಾರಣ 2008-09ರಲ್ಲಿ ಹರಿಯಾಣದ ಪರ ಆಡಲು ಶುರುಮಾಡಿದರು.

ಅಜಯ್‌ ಜಡೇಜ ಮೂಲತಃ ಗುಜರಾತ್‌ನವರಾದರೂ, ಹರಿಯಾಣದ ಪರ ಆಡುತ್ತಿದ್ದಾರೆ. ಈ ಮೊದಲು  ಜಮ್ಮು ಮತ್ತು ಕಾಶ್ಮೀರ, ರಾಜಸ್ತಾನ ತಂಡದ ಪರವೂ ಜಡೇಜ ಆಡಿದ್ದರು. ಗುಜರಾತ್‌ ತಂಡದಲ್ಲಿ ಸೂಕ್ತ ಸ್ಥಾನ ಸಿಗದ ಕಾರಣ ಹರ್ಷಲ್‌ ಪಟೇಲ್‌ ಹರಿಯಾಣದ ಪರ ವಾಲಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.