ADVERTISEMENT

ವಿಶ್ವಕಪ್‌ನತ್ತ ನಡೆದ ಭಾರತ

ಗೋಪಾಲಕೃಷ್ಣ ಹೆಗಡೆ
Published 30 ಮಾರ್ಚ್ 2011, 19:45 IST
Last Updated 30 ಮಾರ್ಚ್ 2011, 19:45 IST
ವಿಶ್ವಕಪ್‌ನತ್ತ ನಡೆದ ಭಾರತ
ವಿಶ್ವಕಪ್‌ನತ್ತ ನಡೆದ ಭಾರತ   

ಮೊಹಾಲಿ (ಚಂಡೀಗಢ): ಭಾರತ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದಂತೆ ವೀರಾವೇಶದಿಂದ ಆಡಿದ ದೋನಿಪಡೆ ಕ್ರಿಕೆಟ್ ಕಾರ್ಗಿಲ್‌ನಲ್ಲಿ ಅಫ್ರಿದಿ ಸೈನ್ಯಕ್ಕೆ ತಮ್ಮ ದೇಶದ ದಾರಿ ತೋರಿಸಿದರು.

ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಬುಧವಾರ ರಾತ್ರಿ ಕೋಟಿ ಕೋಟಿ ಭಾರತೀಯರ ನಿರೀಕ್ಷೆ ಸುಳ್ಳಾಗಲಿಲ್ಲ. ಸಚಿನ್ ತೆಂಡೂಲ್ಕರ್ ತಮ್ಮ ನೂರನೇ ಶತಕ ಗಳಿಸಲಿಲ್ಲ. ಆದರೆ ಅವರ ಆಟ ಭಾರತದ ಮೊತ್ತವನ್ನು ಬೆಳೆಸಿತು. ನಂತರ ಬೌಲರುಗಳು ಪಾಕಿಸ್ತಾನದ ಕಥೆ ಮುಗಿಸಿದರು. ಭಾರತ 29 ರನ್ನುಗಳಿಂದ ಗೆದ್ದು, ಹತ್ತನೇ ವಿಶ್ವ ಕಪ್ ಕ್ರಿಕೆಟ್ ಫೈನಲ್ ತಲುಪಿತು.

ಭಾರತ ಶನಿವಾರ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುವ ಅಂತಿಮ ಹೋರಾಟದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸುವುದು. ಭಾರತ ವಿಶ್ವ ಕಪ್ ಫೈನಲ್ ತಲುಪುತ್ತಿರುವುದು ಇದು ಮೂರನೇ ಸಲ (1983, 2003 ಮತ್ತು 2011).

ಈ ವಿಶ್ವ ಕಪ್‌ನ ಅತ್ಯಂತ ಕುತೂಹಲಕರ ಹಾಗೂ ಮೈಮನ ಕೆರಳಿಸುವ ಪಂದ್ಯವೆಂದೇ ಗುರುತಿಸಿಕೊಂಡಿದ್ದ ಭಾರತ-ಪಾಕಿಸ್ತಾನ ಸೆಮಿಫೈನಲ್ ಎಣಿಸಿಕೊಂಡಷ್ಟು ರೋಚಕ ಅಂತ್ಯ ಕಾಣಲಿಲ್ಲ. ಭಾರತ ಸುಲಭವಾಗಿಯೇ ಜಯಗಳಿಸಿತು. ಪಾಕಿಸ್ತಾನದ ಉತ್ತಮ ಬೌಲಿಂಗ್ ಎದುರು ಭಾರತ 260 ರನ್ (9 ವಿಕೆಟ್‌ಗೆ) ಗಳಿಸಿದ್ದು ಬೇಕಾದಷ್ಟಾಯಿತು. ಪಾಕಿಸ್ತಾನದ ಆಟ ಇನ್ನೊಂದು ಎಸೆತ ಇರುವಂತೆ 231 ರನ್ನುಗಳಿಗೆ ಕೊನೆಗೊಂಡಿತು.

ಯುವರಾಜ್ ಸಿಂಗ್ ಬ್ಯಾಟಿಂಗ್‌ನಲ್ಲಿ  ಆಗಿದ್ದ ವೈಫಲ್ಯವನ್ನು ಬೌಲಿಂಗ್‌ನಲ್ಲಿ ತುಂಬಿಕೊಟ್ಟರು. ಹರಭಜನ್‌ಸಿಂಗ್ ಮತ್ತು ಆಶಿಶ್ ನೆಹ್ರಾ ಮಹತ್ವದ ಹಂತದಲ್ಲಿ ಪ್ರಮುಖ ವಿಕೆಟ್‌ಗಳನ್ನು ಉರುಳಿಸಿದರು. ಹರಭಜನ್ ಬೌಲಿಂಗ್‌ನಲ್ಲಿ ಅಫ್ರಿದಿ ಚೆಂಡನ್ನು ಮೇಲಕ್ಕೆತ್ತಿದಾಗಲೇ ಪಾಕಿಸ್ತಾನದ ಹೋರಾಟಕ್ಕೆ ತೆರೆಬಿದ್ದಿತ್ತು. ತಾವು ಎದುರಿಸಿದ 43ನೇ ಎಸೆತದಲ್ಲಿ ಮೊದಲ ಬೌಂಡರಿ ಹೊಡೆದಿದ್ದ ಮಿಸ್ಬಾ-ಉಲ್-ಹಕ್ ಕೊನೆ ಗಳಿಗೆಯಲ್ಲಿ ಬಿರುಸಿನ ಆಟಕ್ಕಿಳಿದರಾದರೂ ಅದು ಪ್ರಯೋಜನಕ್ಕೆ ಬರಲಿಲ್ಲ.
 
‘ಪಂದ್ಯದ ಆಟಗಾರ’ ಹಿರಿಮೆಗೆ ಪಾತ್ರರಾದ ಸಚಿನ್ ತೆಂಡೂಲ್ಕರ್ ಅವರ ನಾಲ್ಕು ಕ್ಯಾಚುಗಳನ್ನು ಪಾಕಿಸ್ತಾನ ಬಿಟ್ಟದ್ದು ಅದಕ್ಕೆ ಬಹಳ ದುಬಾರಿಯಾಯಿತು. ಯುವರಾಜ್ ಸಿಂಗ್ ಮೊದಲ ಎಸೆತಕ್ಕೇ ಔಟಾದರು. ವಿರಾಟ್ ಕೊಹ್ಲಿ, ದೋನಿ ನಿರೀಕ್ಷಿತ ರೀತಿಯಲ್ಲಿ ಆಡಲಿಲ್ಲ. ಆದರೆ ಅಹಮದಾಬಾದಿನಲ್ಲಿ ಆಸ್ಟ್ರೇಲಿಯ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುರೇಶ್ ರೈನಾ ಇಲ್ಲೂ ಚುರುಕಾಗಿ ಆಡಿದರು. ಇವರಿಗೆ ಉತ್ತಮ ಜೊತೆಯಾದ ಜಹೀರ್ ಖಾನ್, ಬ್ಯಾಟಿಂಗ್ ಪವರ್‌ಪ್ಲೇನಲ್ಲಿ ತಂಡಕ್ಕೆ ಉತ್ತಮ ರನ್ನುಗಳನ್ನು ತಂದುಕೊಟ್ಟಿದ್ದು ಅಂತಿಮವಾಗಿ ನಿರ್ಣಾಯಕವಾಯಿತು.

ಭಾರತದಂತೆಯೇ ಪಾಕಿಸ್ತಾನಕ್ಕೂ ಉತ್ತಮ ಆರಂಭ ಸಿಕ್ಕಿತ್ತಾದರೂ, ಮುಂದೆ ಉತ್ತಮ ಜೊತೆಯಾಟಗಳೇ ಬರಲಿಲ್ಲ. ಗಳಿಸಬೇಕಾದ ರನ್ ಸರಾಸರಿ ಏರುತ್ತಲೇ ಹೋಯಿತು. ರನ್ ವೇಗ ಹೆಚ್ಚಿಸಲು ಯತ್ನ ಮಾಡಿದ ಉಮರ್ ಅಕ್ಮಲ್, ಯುವರಾಜ್ ಬೌಲಿಂಗ್‌ನಲ್ಲಿ ಎರಡು ಸಿಕ್ಸರ್ ಎತ್ತಿದರಾದರೂ ಹರಭಜನ್ ಅವರ ವಿಕೆಟ್ ಹಾರಿಸಿದರು. ಅಬ್ದುಲ್ ರಜಾಕ್ ಹಾಗೂ ಅಫ್ರಿದಿ ಕೂಡ ಏನೂ ಮಾಡಲಾಗಲಿಲ್ಲ. ಜಹೀರ್, ಆಶಿಶ್, ಮುನಾಫ್, ನಿಧಾನ ಗತಿಯ ಪಿಚ್‌ನ ಸಂಪೂರ್ಣ ಪ್ರಯೋಜನ ಪಡೆದರು. ಟೂರ್ನಿಯುದ್ದಕ್ಕೂ ಕಳಪೆ ಎಂದು ಟೀಕಿಸಿಕೊಂಡಿದ್ದ ಭಾರತದ ಬೌಲರುಗಳು ಬುಧವಾರ ಭಾರತಕ್ಕೆ ಗೆಲುವು ತಂದುಕೊಟ್ಟರು.

ಸಚಿನ್ ‘ಅದೃಷ್ಟ’ದ ಆಟ: ಸಚಿನ್ ತೆಂಡೂಲ್ಕರ್ ತಮ್ಮ ನೂರನೇ ಶತಕವನ್ನು ಗಳಿಸಲು ವಿಫಲವಾದರೂ, ಅದರ ಸಮೀಪ ಹೋಗುವ ಮೊದಲು ಅವರ ಅದೃಷ್ಟ ಬಹಳ ಚೆನ್ನಾಗಿತ್ತು. ಪಾಕಿಸ್ತಾನದ ಫೀಲ್ಡರುಗಳು ಕೈಗೆ ಎಣ್ಣೆ ಸವರಿಕೊಂಡಂತೆ ಒಂದರ ಮೇಲೊಂದರಂತೆ ಸಚಿನ್ ಅವರ ಒಟ್ಟು ನಾಲ್ಕು ಕ್ಯಾಚುಗಳನ್ನು ಬಿಟ್ಟರು. ಮೂರು ಸಲ ತಮ್ಮ ಬೌಲಿಂಗ್‌ನಲ್ಲೇ ಕ್ಯಾಚುಗಳು ನೆಲಸಮವಾದಾಗ ಶಾಹಿದ್ ಅಫ್ರಿದಿ ತಲೆ ಚಚ್ಚಿಕೊಂಡರು. ಅಂತಿಮವಾಗಿ ಅಫ್ರಿದಿ ಅವರೇ ಸಚಿನ್ ಅವರ ಕ್ಯಾಚು ಹಿಡಿದರು. ಸಚಿನ್ ಇನ್ನೂ ಹದಿನೈದು ರನ್ ಮಾಡಿದ್ದರೆ, ಅವರ ನೂರನೇ ಶತಕ ಬಂದುಬಿಡುತ್ತಿತ್ತು. ಅಫ್ರಿದಿ ಕ್ಯಾಚ್ ಬಿಟ್ಟಿದ್ದರೆ, ತಂಡದ ಮೇಲೆ ಮತ್ತೆ ಸ್ಪಾಟ್ ಫಿಕ್ಸಿಂಗ್ ಆರೋಪ ಖಂಡಿತವಾಗಿಯೂ ಬರುತ್ತಿತ್ತೇನೋ!

ಸಚಿನ್ 27 ರನ್ ಮಾಡಿದ್ದಾಗ ಷಾರ್ಟ್ ಮಿಡ್‌ವಿಕೆಟ್‌ನಲ್ಲಿದ್ದ ಮಿಸ್ಬಾ-ಉಲ್-ಹಕ್ ಕ್ಯಾಚ್ ಬಿಟ್ಟರು. 45 ರನ್ ಮಾಡಿದ್ದಾಗ ಕವರ್ಸ್‌ನಲ್ಲಿ ಯೂನುಸ್ ಖಾನ್ ಕೈಯಿಂದ ಚೆಂಡು ಮೇಲೆ ಪುಟಿದು ಕೆಳಗೆ ಬಿತ್ತು. 70 ರನ್ ಮಾಡಿದ್ದಾಗ ವಿಕೆಟ್‌ಕೀಪರ್ ಕಮ್ರಾನ್ ಅಕ್ಮಲ್ ಕ್ಯಾಚ್ ಹಿಡಿಯಲಿಲ್ಲ. 81 ರನ್ ಮಾಡಿದ್ದಾಗ ಹಫೀಜ್ ಬೌಲಿಂಗ್‌ನಲ್ಲಿ ಉಮರ್ ಅಕ್ಮಲ್ ಕ್ಯಾಚ್ ಬಿಟ್ಟರು. ವಹಾಬ್ ಬೌಲಿಂಗ್‌ನಲ್ಲಿ ದೋನಿ ಅವರ ಕ್ಯಾಚನ್ನು ಕಮ್ರಾನ್ ಅಕ್ಮಲ್ ಬಿಟ್ಟರು.

ಸಚಿನ್ ಇನ್ನೆರಡು ಸಂದರ್ಭಗಳಲ್ಲಿ ನಿರ್ಣಯ ಮರುಪರಿಶೀಲನೆಯಲ್ಲಿ ಪಾರಾದರು. ಆಫ್‌ಸ್ಪಿನ್ನರ್ ಸಯೀದ್ ಅಜ್ಮಲ್ ಎಲ್‌ಬಿಡಬ್ಲುಗಾಗಿ ಮಾಡಿದ ಮನವಿಯನ್ನು ಅಂಪೈರ್ ಇಯಾನ್ ಗೌಲ್ಡ್ ಪುರಸ್ಕರಿಸಿದರು. ಆದರೆ ಮುಂದೆ ಬಂದು ಆಡಿದ್ದ ಸಚಿನ್ ನಿರ್ಣಯದ ವಿರುದ್ಧ ಮರುಪರಿಶೀಲನೆಗೆ ಕೋರಿದರು. ಅದರಲ್ಲಿ ಚೆಂಡು ಲೆಗ್‌ಸ್ಟಂಪ್ ಆಚೆ ಹೋಗುತ್ತಿದ್ದುದು ಕಂಡುಬಂತು. ಮರುಎಸೆತದಲ್ಲೇ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಸ್ಟಂಪಿಂಗ್ ಮಾಡಿದರು. ಅಂಪೈರ್ ಮರುಪರಿಶೀಲನೆಯಲ್ಲಿ ಸಚಿನ್ ಕಾಲು ಒಳಗಿದ್ದದ್ದು ಕಂಡುಬಂತು.

ವೀರೇಂದ್ರ ಸೆಹ್ವಾಗ್ ಮಧ್ಯಾಹ್ನ ತಮ್ಮ ಆಟವನ್ನು ಬೌಂಡರಿಯೊಂದಿಗೆ ಆರಂಭಿಸಲಿಲ್ಲ. ಆದರೆ ಉಮರ್ ಗುಲ್ ಅವರ ಎರಡನೇ ಓವರ್‌ನಲ್ಲಿ ಐದು ಬೌಂಡರಿಗಳನ್ನು ಹೊಡೆದರು. ಎಡಗೈ ವೇಗದ ಬೌಲರ್ ವಹಾಬ್ ರಿಯಾಜ್ ತಮ್ಮ ಮೊದಲ ಓವರ್‌ನಲ್ಲೇ ಸೆಹ್ವಾಗ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಸೆಹ್ವಾಗ್ ನಿರ್ಗಮನದ ನಂತರ ಸಚಿನ್ ಅವರ ಆಟ ಕೂಡ ಸ್ವಲ್ಪ ನಿಧಾನವಾಯಿತು. ಸಚಿನ್ ಮತ್ತು ಗೌತಮ್ ಗಂಭೀರ್ ನಡುವೆ ಎರಡನೇ ವಿಕೆಟ್‌ಗೆ 68 ರನ್ ಬಂದರೂ, ರನ್ ಸರಾಸರಿ ಕಡಿಮೆಯಾಗುತ್ತಲೇ ಇತ್ತು.

ಪಾಕಿಸ್ತಾನದ ಸ್ಪಿನ್ನರುಗಳು ಮತ್ತು ವಹಾಬ್ ಚೆನ್ನಾಗಿ ಬೌಲ್ ಮಾಡಿ, ಭಾರತದ ಮಧ್ಯಮ ಕ್ರಮಾಂಕ ಹೆಚ್ಚು ರನ್ ಗಳಿಸದಂತೆ ನೋಡಿಕೊಂಡರು. ವಹಾಬ್ ಎರಡು ಸತತ ಎಸೆತಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಯುವರಾಜ್ ಸಿಂಗ್ ಅವರ ವಿಕೆಟ್ ಪಡೆದರು. ಯುವರಾಜ್ ಸ್ವಿಂಗಿಂಗ್ ಯಾರ್ಕರ್‌ಗೆ ಖಾತೆ ತೆರೆಯುವ ಮೊದಲೇ ಬಲಿಯಾದರು. ಕೊನೆಯಲ್ಲಿ ಸುರೇಶ್ ರೈನಾ ಅವರಿಂದಾಗಿ ಭಾರತ 250 ರ ಗಡಿ ದಾಟಿತು. 45ರಿಂದ 49ನೇ ಓವರ್ ವರೆಗೆ ತೆಗೆದುಕೊಂಡ ಬ್ಯಾಟಿಂಗ್ ಪವರ್‌ಪ್ಲೇನಲ್ಲಿ 43 ರನ್ನುಗಳು ಬಂದವು. ಹೆಚ್ಚು ದಂಡಿಸಿಕೊಂಡವರು ಉಮರ್ ಗುಲ್.

ಭಾರತ- 260/9 (50)
‘ಪಂದ್ಯಶ್ರೇಷ್ಠ’ ಸಚಿನ್ 85 (115)
ವೀರೇಂದ್ರ ಸೆಹ್ವಾಗ್ 38 (25)

ಪಾಕಿಸ್ತಾನ: 231/10 (49.5)
ಮಿಸ್ಬಾ ಉಲ್ ಹಕ್ 56 (76 ಎಸೆತ, 5 ಬೌಂಡರಿ, 1 ಸಿಕ್ಸರ್)
ಮಹಮ್ಮದ್ ಹಫೀಜ್ 43 (59 ಎಸೆತ, 7 ಬೌಂಡರಿ)
ಆಶೀಶ್ ನೆಹ್ರಾ 10-0-33-2
ಮುನಾಫ್ ಪಟೇಲ್ 10-1-40-2

ADVERTISEMENT

ಭಾರತಕ್ಕೆ 29 ರನ್ ಗೆಲುವು

ಫೈನಲ್ ಸೆಣಸು
ಏಪ್ರಿಲ್ 2 2
ಭಾರತ- ಶ್ರೀಲಂಕಾ
ಸ್ಥಳ: ವಾಂಖೆಡೆ ಕ್ರೀಡಾಂಗಣ, ಮುಂಬೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.