ADVERTISEMENT

ವಿಶ್ವಕಪ್‌ ಫುಟ್‌ಬಾಲ್‌: ಈಜಿಪ್ಟ್‌ಗೆ ಕುವೈತ್‌ ಸವಾಲು

ಆಫ್ರಿಕಾ ತಂಡಗಳ ಅಭ್ಯಾಸ ಪಂದ್ಯಗಳು ಇಂದಿನಿಂದ

ಏಜೆನ್ಸೀಸ್
Published 25 ಮೇ 2018, 19:24 IST
Last Updated 25 ಮೇ 2018, 19:24 IST
ರಾಷ್ಟ್ರಧ್ವಜ ಪ್ರದರ್ಶಿಸಿ ತಂಡಕ್ಕೆ ಶುಭ ಕೋರಿದ ಈಜಿಪ್ಟ್‌ ಅಭಿಮಾನಿಗಳು ರಾಯಿಟರ್ಸ್ ಚಿತ್ರ
ರಾಷ್ಟ್ರಧ್ವಜ ಪ್ರದರ್ಶಿಸಿ ತಂಡಕ್ಕೆ ಶುಭ ಕೋರಿದ ಈಜಿಪ್ಟ್‌ ಅಭಿಮಾನಿಗಳು ರಾಯಿಟರ್ಸ್ ಚಿತ್ರ   

ಜೊಹಾನ್ಸ್‌ಬರ್ಗ್‌ (ಎಎಫ್‌ಪಿ): ಈಜಿಪ್ಟ್ ತಂಡ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಮೊದಲ ಅಭ್ಯಾಸ ಪಂದ್ಯದಲ್ಲಿ ಶನಿವಾರ ಕುವೈತ್‌ ವಿರುದ್ಧ ಸೆಣಸಲಿದೆ.

ಆಫ್ರಿಕಾದಿಂದ ಅರ್ಹತೆ ಪಡೆದ ಇತರ ತಂಡಗಳಾದ ಮೊರೊಕ್ಕೊ, ನೈಜೀರಿಯಾ, ಸೆನೆಗಲ್‌ ಮತ್ತು ಟುನೀಷಿಯಾ ಕೂಡ ಅಭ್ಯಾಸ ಪಂದ್ಯಗಳಿಗೆ ಸಜ್ಜಾಗಿವೆ.

ಈಜಿಪ್ಟ್ ತಂಡ ಪ್ರಮುಖ ಆಟಗಾರ ಮೊಹಮ್ಮದ್‌ ಸಲಾಹ್‌ ಅವರ ಅನುಪಸ್ಥಿತಿಯಲ್ಲಿ ಕಣಕ್ಕೆ ಇಳಿಯಲಿದೆ. ಅವರು ಚಾಂಪಿಯನ್ಸ್ ಲೀಗ್‌ನ ರಿಯಲ್ ಮ್ಯಾಡ್ರಿಡ್‌ ವಿರುದ್ಧದ ಫೈನಲ್‌ನಲ್ಲಿ ಲಿವರ್‌ಪೂಲ್ ತಂಡದ ಪರವಾಗಿ ಆಡಲಿದ್ದಾರೆ.

ADVERTISEMENT

ವಿಶ್ವಕಪ್‌ನಲ್ಲಿ ಆಡುವ ಮತ್ತೊಬ್ಬ ಪ್ರಮುಖ ಆಟಗಾರ, ಸೆನೆಗಲ್‌ನ ಸರ್ಡಿಯೊ ಮಾನೆ ಕೂಡ ಲಿವರ್‌ಪೂರ್ ತಂಡದಲ್ಲಿದ್ದಾರೆ.

ಕುವೈತ್ ವಿರುದ್ಧದ ಪಂದ್ಯದ ನಂತರ ಈಜಿಪ್ಟ್‌ ತಂಡ ಕೊಲಂಬಿಯಾ ಮತ್ತು ಬೆಲ್ಜಿಯಂ ವಿರುದ್ಧ ಹೋರಾಡಲಿದೆ.

20 ವರ್ಷಗಳ ನಂತರ ವಿಶ್ವಕಪ್‌ಗೆ: ಎರಡು ದಶಕಗಳ ನಂತರ ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ಮೊರೊಕ್ಕೊ ತಂಡ ಮೊದಲ ಮೂರು ಅಭ್ಯಾಸ ಪಂದ್ಯಗಳಲ್ಲಿ ಉಕ್ರೇನ್‌, ಸ್ಲೊವಾಕಿಯಾ ಮತ್ತು ಎಸ್ಟೋನಿಯಾ ವಿರುದ್ಧ ಆಡಲಿದೆ.

ನೈಜೀರಿಯಾ ತಂಡ ತನ್ನ ನೆಲದಲ್ಲೇ ಅಭ್ಯಾಸ ಪಂದ್ಯ ಆಡಲಿದ್ದು ಮೊದಲ ಹಣಾಹಣಿಯಲ್ಲಿ ಕಾಂಗೊವನ್ನು ಎದುರಿಸಲಿದೆ. ಈ ಪಂದ್ಯ ಸೋಮವಾರ ನಡೆಯಲಿದೆ.

‘ಸೂಪರ್ ಈಗಲ್ಸ್‌’ ಎಂಬ ಖ್ಯಾತಿ ಹೊಂದಿರುವ ನೈಜೀರಿಯಾ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮತ್ತು ನಂತರ ಜೆಕ್ ಗಣರಾಜ್ಯವನ್ನು ಎದುರಿಸಲಿದೆ.

ಸೆನೆಗಲ್‌ ಮೊದಲ ಪಂದ್ಯದಲ್ಲಿ ಲಕ್ಸೆಂಬರ್ಗ್ ಮತ್ತು ಎರಡನೇ ಪಂದ್ಯದಲ್ಲಿ ಕ್ರೊವೇಷಿಯಾ ವಿರುದ್ಧ ಸೆಣಸಲಿದೆ.

ಮೂರನೇ ಪಂದ್ಯದಲ್ಲಿ ಈ ತಂಡಕ್ಕೆ ದಕ್ಷಿಣ ಕೊರಿಯಾ ಎದುರಾಳಿ. ಸೆನೆಗಲ್‌ 2002ರಲ್ಲಿ ಕ್ವಾರ್ಟರ್‌ ಫೈನಲ್ ಪ್ರವೇಶಿಸಿತ್ತು.

ಯುರೋಪಿಯನ್ ಚಾಂಪಿಯನ್‌ ಪೋರ್ಚುಗಲ್ ವಿರುದ್ಧ ಸೆಣಸಿದ ನಂತರ ಟುನಿಷಿಯಾ ತಂಡ ಟರ್ಕಿ ಮತ್ತು ಸ್ಪೇನ್‌ ಎದುರು ಆಡಲಿದೆ. ಈ ತಂಡ 1978ರಲ್ಲಿ ಮೆಕ್ಸಿಕೊವನ್ನು ಮಣಿಸಿದ ನಂತರ ಈ ವರೆಗೆ ವಿಶ್ವಕಪ್‌ನಲ್ಲಿ ಒಂದೇ ಒಂದು  ಪಂದ್ಯವನ್ನು ಗೆದ್ದಿಲ್ಲ.

**

ಕರಾ ಬೋಡ್ಜಿ ವಿಶ್ವಾಸ

ಡಕಾರ್‌ (ರಾಯಿಟರ್ಸ್‌): ವಿಶ್ವಕ‍‍ಪ್‌ನಲ್ಲಿ ಸಮರ್ಥ ಆಟ ಆಡುವ ಭರವಸೆ ಇದೆ ಎಂದು ಸೆನೆಗಲ್‌ ತಂಡದ ಡಿಫೆಂಡರ್‌ ಕರಾ ಬೋಡ್ಜಿ ಅಭಿಪ್ರಾಯಪಟ್ಟರು. ಕಳೆದ ಮೊಣಕಾಲಿನ ಗಾಯದಿಂದಾಗಿ ಡಿಸೆಂಬರ್‌ನಿಂದ ಅಂಗಣದಿಂದ ದೂರ ಉಳಿದಿರುವ ಅವರನ್ನು ಸೆನೆಗಲ್ ತಂಡಕ್ಕೆ ಆಯ್ಕೆ ಮಾಡಿದ್ದು ಅನೇಕರಿಗೆ ಅಚ್ಚರಿ ಮೂಡಿಸಿತ್ತು.

‘ತಂಡದಲ್ಲಿ ಮರಳಿ ಸ್ಥಾನ ಗಳಿಸಿದ್ದು ಖುಷಿ ನೀಡಿದೆ. ನನ್ನ ದೇಶದ ಜನರು, ಕುಟುಂಬ ಮತ್ತು ಕ್ಲಬ್‌ನವರನ್ನು ನೆನೆಯುತ್ತ ಅಂಗಣಕ್ಕೆ ಇಳಿಯಲಿದ್ದೇನೆ. ಅಲ್ಲಿ ಯಶಸ್ಸು ಕಾಣಲಿದ್ದೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.