ADVERTISEMENT

ವಿಶ್ವ ಈಜು: ಲಿಯು, ಲಾಕ್ಟೆ ಚಿನ್ನದ ಸಾಧನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 19:59 IST
Last Updated 2 ಆಗಸ್ಟ್ 2013, 19:59 IST

ಬಾರ್ಸಿಲೋನಾ (ರಾಯಿಟರ್ಸ್‌): ಚೀನಾದ ಲಿಯು ಜಿಗ್ ಮತ್ತು ಅಮೆರಿಕದ ರ‌್ಯಾನ್ ಲಾಕ್ಟೆ ಇಲ್ಲಿ ನಡೆಯುತ್ತಿರುವ ವಿಶ್ವ ಈಜು ಚಾಂಪಿಯನ್‌ಷಿಪ್‌ನಲ್ಲಿ ಬಂಗಾರದ ಪದಕ ತಮ್ಮದಾಗಿಸಿಕೊಂಡರು.

ಶುಕ್ರವಾರ ನಡೆದ ಮಹಿಳೆಯರ 200 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಲಿಯು ಎರಡು ನಿಮಿಷ 5.59 ಸೆಕೆಂಡ್‌ಗಳಲ್ಲಿ ಮೊದಲಿಗರಾಗಿ ಗುರಿ ತಲುಪಿದರು. ಈ ವಿಭಾಗದಲ್ಲಿ ವಿಶ್ವದಾಖಲೆ ಹೊಂದಿರುವ ಲಿಯು ಸ್ಪೇನ್‌ನ ಮಿರಿಯಾ ಬೆಲ್‌ಮಾಂಟೆ ಗಾರ್ಸಿಯಾ ಅವರಿಂದ ಪ್ರಬಲ ಪೈಪೋಟಿ ಎದುರಿಸಿದರು.

ಅಮೆರಿಕದ ಲಾಕ್ಟೆ ನಿರೀಕ್ಷೆಯಂತೆಯೇ 200 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಅಗ್ರಸ್ಥಾನದೊಂದಿಗೆ ಚಿನ್ನ ಗೆದ್ದುಕೊಂಡರು. ಒಂದು ನಿಮಿಷ 53.79 ಸೆಕೆಂಡ್‌ಗಳೊಂದಿಗೆ ಅವರು ಗುರಿ ತಲುಪಿದರು. ಪೋಲೆಂಡ್‌ನ ರಡೊಸ್ಲಾವ್ ಕವೇಸಿ (1:54.24) ಬೆಳ್ಳಿ ಗೆದ್ದರೆ, ಒಲಿಂಪಿಕ್ ಚಾಂಪಿಯನ್ ಟೇಲರ್ ಕ್ಲಾರಿ (1:54.64 ಸೆ.) ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ಆಸ್ಟ್ರೇಲಿಯದ ಕೇಟ್ ಕ್ಯಾಂಪ್‌ಬೆಲ್ ಮಹಿಳೆಯರ 100 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಚಿನ್ನ ತಮ್ಮದಾಗಿಸಿಕೊಂಡರು. ಅವರು 52.34 ಸೆಕೆಂಡ್‌ಗಳಲ್ಲಿ ನಿಗದಿತ ಗುರಿ ತಲುಪಿದರು. ಸ್ವೀಡನ್‌ನ ಸಾರಾ ಸೊಸ್ಟ್ರಾಮ್ (52.89 ಸೆ.) ಹಾಗೂ ಹಾಲೆಂಡ್‌ನ ರನೊಮಿ ಕ್ರೊಮೊವಿಜೊಜೊ (53.42) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದರು.

ಈಗಾಗಲೇ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಚಿನ್ನ ಜಯಿಸಿರುವ ಅಮೆರಿಕದ ಮಿಸ್ಸಿ ಫ್ರಾಂಕ್ಲಿನ್ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.