ADVERTISEMENT

ವಿಶ್ವ 10ಕೆ ಓಟ: ಜೆಫ್ರಿ, ನೆಟ್ಸಾನೆಟ್‌ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 8 ಮೇ 2018, 19:30 IST
Last Updated 8 ಮೇ 2018, 19:30 IST
ಜೆಫ್ರಿ ಕ್ಯಾಮ್‌ವೊರೊರ್‌
ಜೆಫ್ರಿ ಕ್ಯಾಮ್‌ವೊರೊರ್‌   

ಬೆಂಗಳೂರು: ಇಲ್ಲಿ ನಡೆಯಲಿರುವ ಟಿಸಿಎಸ್‌ ವಿಶ್ವ 10ಕೆ ಓಟದ ಎಲಿಟ್‌ ಗುಂಪಿನಲ್ಲಿ ಕೆನ್ಯಾದ ಜೆಫ್ರಿ ಕ್ಯಾಮ್‌ವೊರೊರ್‌ ಹಾಗೂ ಇಥಿಯೋಪಿಯಾದ ನೆಟ್ಸಾನೆಟ್‌ ಗುಡೆಟಾ ಅವರು ಸ್ಪರ್ಧಿಸಲಿದ್ದಾರೆ.

ಜೆಫ್ರಿ ಮತ್ತು ನೆಟ್ಸಾನೆಟ್‌ ಅವರು ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ಭಾಗವಹಿಸಲಿದ್ದಾರೆ.

ಈ ಇಬ್ಬರು ಅಥ್ಲೀಟ್‌ಗಳು ಇತ್ತೀಚೆಗೆ ನಡೆದಿದ್ದ ಐಎಎಎಫ್‌ ವಿಶ್ವ ಹಾಫ್‌ ಮ್ಯಾರಥಾನ್‌ ಚಾಂಪಿಯನ್‌ಷಿಪ್‌ನಲ್ಲಿ ಜಯಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಜೆಫ್ರಿ ಅವರು ದೂರ ಅಂತರದ ಪ್ರಮುಖ ಅಥ್ಲೀಟ್‌ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ. ಹಿಂದಿನ ಎರಡು ವಿಶ್ವ ಕ್ರಾಸ್‌ ಕಂಟ್ರಿ ಹಾಗೂ ಹಾಫ್‌ ಮ್ಯಾರಥಾನ್‌ನಲ್ಲಿ ಅವರು ಚಾಂಪಿಯನ್‌ ಆಗಿ ಹೊರಹೊಮ್ಮಿದ್ದರು.

ADVERTISEMENT

‘ವಿಶ್ವ ಹಾಫ್‌ ಮ್ಯಾರಥಾನ್‌ ಚಾಂಪಿಯನ್‌ಷಿಪ್‌ ನಂತರ ನಾನು ಕೆಲ ಕಾಲ ವಿಶ್ರಾಂತಿ ತೆಗೆದುಕೊಂಡಿದ್ದೇನೆ. ಬೆಂಗಳೂರಿನಲ್ಲಿ ಆಯೋಜಿಸಿರುವ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಉತ್ಸುಕನಾಗಿದ್ದೇನೆ. ಭಾರತದಲ್ಲಿ ನಡೆದ ಮ್ಯಾರಥಾನ್‌ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಅನುಭವವಿದೆ’ ಎಂದು ಜೆಫ್ರಿ ಅವರು ಹೇಳಿದ್ದಾರೆ.

‘ಈ ಸ್ಪರ್ಧೆಯಲ್ಲಿ ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದ್ದು ಇದನ್ನು ಮೀರಿ ನಿಲ್ಲುವ ವಿಶ್ವಾಸವಿದೆ’ ಎಂದು ಅವರು ತಿಳಿಸಿದ್ದಾರೆ.

‘ಈಗಾಗಲೇ ಅಭ್ಯಾಸ ಆರಂಭಿಸಿದ್ದೇನೆ. ಪ್ರತಿ ಸಲ ತೋರುವ ಉತ್ತಮ ಸಾಮರ್ಥ್ಯವನ್ನು ಬೆಂಗಳೂರಿನ ಓಟದಲ್ಲೂ ಮುಂದುವರಿಸಲಿದ್ದೇನೆ. ಹಿಂದಿನ ಮ್ಯಾರಥಾನ್‌ನಲ್ಲಿ ಮಾಡಿದ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸುತ್ತೇನೆ’ ಎಂದು ನೆಟ್ಸಾನೆಟ್‌ ಹೇಳಿದ್ದಾರೆ.

‘ಏರಟೆಲ್‌ ದೆಹಲಿ ಹಾಫ್‌ ಮ್ಯಾರಥಾನ್‌ನಲ್ಲಿ ಭಾಗವಹಿಸಲು ನಾನು ಮೂರು ಬಾರಿ ಭಾರತಕ್ಕೆ ಬಂದಿದ್ದೆ. ಆದರೆ, ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ. ಆದ್ದರಿಂದ, ಈ ಓಟದಲ್ಲಿ ಗೆಲುವು ಸಾಧಿಸುವುದಷ್ಟೇ ನನ್ನ ಗುರಿ’ ಎಂದು ಅವರು ತಿಳಿಸಿದ್ದಾರೆ.

ವಿಶ್ವ 10ಕೆ ಓಟವು ಮೇ 27ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.