ADVERTISEMENT

ವಿಶ್ವ 10ಕೆ ಓಟ: ಹ್ಯಾಟ್ರಿಕ್‌ ಸಾಧನೆ ತವಕದಲ್ಲಿ ಜೆರೆಮೆವ್‌

​ಪ್ರಜಾವಾಣಿ ವಾರ್ತೆ
Published 20 ಮೇ 2017, 19:30 IST
Last Updated 20 ಮೇ 2017, 19:30 IST
ಶನಿವಾರ ಅಭ್ಯಾಸ ನಡೆಸಿದ ಹಾಲಿ ಚಾಂಪಿಯನ್ ಇಥಿಯೋಪಿಯಾದ ಮೊಸಿನೆಟ್ ಜೆರೆಮೆವ್ (ಬಲ) ಮತ್ತು ಮುಮಿನ್ ಗಾಲಾ  ಪ್ರಜಾವಾಣಿ ಚಿತ್ರ
ಶನಿವಾರ ಅಭ್ಯಾಸ ನಡೆಸಿದ ಹಾಲಿ ಚಾಂಪಿಯನ್ ಇಥಿಯೋಪಿಯಾದ ಮೊಸಿನೆಟ್ ಜೆರೆಮೆವ್ (ಬಲ) ಮತ್ತು ಮುಮಿನ್ ಗಾಲಾ ಪ್ರಜಾವಾಣಿ ಚಿತ್ರ   

ಬೆಂಗಳೂರು: ಇಥಿಯೋಪಿಯಾದ ದೂರ ಅಂತರದ ಓಟಗಾರ ಮೊಸಿನೆಟ್‌ ಜೆರೆಮೆವ್‌ ಅವರು ಭಾನುವಾರ ನಡೆಯುವ ವಿಶ್ವ 10ಕೆ ಓಟದ ಸ್ಪರ್ಧೆಯಲ್ಲಿ ‘ಹ್ಯಾಟ್ರಿಕ್‌’ ಸಾಧನೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

2015ರಲ್ಲಿ ಮೊದಲ ಪ್ರಶಸ್ತಿ ಗೆದ್ದು ವಿಶ್ವ 10ಕೆ ಓಟದಲ್ಲಿ ಕೆನ್ಯಾದವರ ಪ್ರಾಬಲ್ಯಕ್ಕೆ ತಡೆ ಒಡ್ಡಿದ್ದ ಜೆರೆಮೆವ್‌ ಈ ಬಾರಿಯೂ ಪ್ರಶಸ್ತಿ ಎತ್ತಿ ಹಿಡಿಯುವ ವಿಶ್ವಾಸ ಹೊಂದಿದ್ದಾರೆ.

ಈ  ವರ್ಷದ ಜನವರಿಯಲ್ಲಿ ನಡೆದಿದ್ದ ಕ್ಸಿಯಾಮೆನ್‌ ಇಂಟರ್‌ ನ್ಯಾಷನಲ್‌ ಮ್ಯಾರಥಾನ್‌ನಲ್ಲಿ ರನ್ನರ್ಸ್‌ ಅಪ್‌ ಆಗಿದ್ದ 25 ವರ್ಷದ ಓಟಗಾರ,  ಏಪ್ರಿಲ್‌ನಲ್ಲಿ ನಡೆದಿದ್ದ ಯಾಂಗ್‌ಜೌ ಇಂಟರ್‌ ನ್ಯಾಷನಲ್‌ ಹಾಫ್‌ ಮ್ಯಾರ ಥಾನ್‌ನಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದ್ದರು. ಮೂರು ದಿನಗಳ ಹಿಂದೆಯೇ ನಗರಕ್ಕೆ ಬಂದಿರುವ ಅವರು  ಇಲ್ಲಿ ಕಠಿಣ ಅಭ್ಯಾಸ ನಡೆಸಿದ್ದಾರೆ.

ಕೆನ್ಯಾದ ಲಿಯೊನಾರ್ಡ್‌ ಕೊಮೊನ್‌, ನ್ಯೂಜಿಲೆಂಡ್‌ನ ಜೇನ್‌ ರಾಬರ್ಟ್‌ಸನ್‌ ಮತ್ತು ಮುಲೆ ವಾಷಿಹುನ್‌ ಅವರು ಜೆರೆಮೆವ್‌ಗೆ ಕಠಿಣ ಪೈಪೋಟಿ ನೀಡುವ ಸಾಧ್ಯತೆ ಇದೆ.

ಎಲೈಟ್‌ ಮಹಿಳೆಯರ ವಿಭಾಗದಲ್ಲೂ ಕೆನ್ಯಾ ಮತ್ತು ಇಥಿಯೋಪಿಯಾದ ಸ್ಪರ್ಧಿಗಳ ನಡುವೆಯೇ ನೇರ ಪೈಪೋಟಿ ಇದೆ. ಕೆನ್ಯಾದ ಓಟಗಾರ್ತಿ, ವಿಶ್ವ ಕ್ರಾಸ್‌ಕಂಟ್ರಿ ಚಾಂಪಿಯನ್‌ ಇರೆನ್‌ ಚೆಪಟಾಯಿ, ಗ್ಲೆಡಿಸ್‌ ಚೆರಿಸ್‌ ಮತ್ತು ಹಲಾಹ್‌ ಕಿಪ್ರಾಪ್‌ ಅವರೂ ಪ್ರಶಸ್ತಿಯತ್ತ ಚಿತ್ತ ಹರಿಸಿದ್ದಾರೆ.

ಭಾರತದ ಸ್ಪರ್ಧಿಗಳ ಪೈಕಿ ಮೊಹಮ್ಮದ್‌ ಯೂನಸ್‌, ಎ.ಬಿ. ಬೆಳ್ಳಿಯಪ್ಪ, ಶ್ರೀನು ಬುಗಾಥ ಮತ್ತು ಮೋನಿಕಾ ಅಥಾರೆ ಅವರು ಉದ್ಯಾನ ನಗರಿಯ ರಸ್ತೆಗಳಲ್ಲಿ ಮಿಂಚು ಹರಿಸಲು ಕಾದಿದ್ದಾರೆ.

ಸೇನೆಯನ್ನು ಪ್ರತಿನಿಧಿಸುವ ದೀಪಕ್‌ ಕುಂಬಾರ್‌ ಮತ್ತು ರಾಷ್ಟ್ರೀಯ ಚಾಂಪಿಯನ್‌ ರಂಜನ್‌ ಸಿಂಗ್‌ ಅವರೂ ಬೆಂಗಳೂರಿನ ರೇಸ್‌ ಪ್ರಿಯರ ಕಣ್ಮಣಿಗಳೆನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.