ADVERTISEMENT

ವೃತ್ತಿಪರ ಸ್ನೂಕರ್ ಟೂರ್‌ಗೆ ಪಂಕಜ್

​ಪ್ರಜಾವಾಣಿ ವಾರ್ತೆ
Published 3 ಮೇ 2012, 19:30 IST
Last Updated 3 ಮೇ 2012, 19:30 IST
ವೃತ್ತಿಪರ ಸ್ನೂಕರ್ ಟೂರ್‌ಗೆ ಪಂಕಜ್
ವೃತ್ತಿಪರ ಸ್ನೂಕರ್ ಟೂರ್‌ಗೆ ಪಂಕಜ್   

ಬೆಂಗಳೂರು: ಪಂಕಜ್ ಅಡ್ವಾಣಿ ಅವರು ವೃತ್ತಿಪರ ಸ್ನೂಕರ್ ಟೂರ್‌ನಲ್ಲಿ ಪಾಲ್ಗೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ಪ್ರಸಕ್ತ ವೃತ್ತಿಪರ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಟೂರ್‌ನಲ್ಲಿ ಆಡಲಿರುವ ವಿಶ್ವದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ.

`ಏಷ್ಯನ್ ಕಾನ್ಫೆಡರೇಷನ್ ಆಫ್ ಬಿಲಿಯರ್ಡ್ಸ್ ಅಂಡ್ ಸ್ನೂಕರ್~ ಪಂಕಜ್‌ಗೆ ವೃತ್ತಿಪರ ಲೀಗ್‌ನಲ್ಲಿ ಆಡಲು ವೈಲ್ಡ್ ಕಾರ್ಡ್ ಪ್ರವೇಶ ನೀಡಿದೆ. ಇತ್ತೀಚೆಗೆ ನಡೆದ ಏಷ್ಯನ್ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರಿನ ಸ್ಪರ್ಧಿ `ರನ್ನರ್ ಅಪ್~ ಆಗಿದ್ದರು. ಅಲ್ಲಿ ನೀಡಿದ್ದ ಪ್ರದರ್ಶನದ ಆಧಾರದಲ್ಲಿ ವೈಲ್ಡ್ ಕಾರ್ಡ್ ದೊರೆತಿದೆ.

`ಜೀವನದಲ್ಲಿ ಎಲ್ಲದ್ದಕ್ಕೂ ಒಂದು ನಿಗದಿತ ಸಮಯ ಇದೆ ಎಂಬ ವಿಶ್ವಾಸ ನನ್ನದು. ವೃತ್ತಿಪರ ಸ್ನೂಕರ್‌ನಲ್ಲಿ ಪಾಲ್ಗೊಳ್ಳಲು ಇದು ಸೂಕ್ತ ಸಮಯ ಎಂದು ಭಾವಿಸಿದ್ದೇನೆ~ ಎಂಬುದಾಗಿ ತಮ್ಮ ನಿರ್ಧಾರದ ಬಗ್ಗೆ ಪಂಕಜ್ ತಿಳಿಸಿದ್ದಾರೆ.

ವೃತ್ತಿಪರ ಸ್ನೂಕರ್ ಟೂರ್‌ನ 10 ತಿಂಗಳ ಅವಧಿಯಲ್ಲಿ ವಿವಿಧ ಟೂರ್ನಿಗಳು ನಡೆಯಲಿವೆ. ಪಂಕಜ್ ಇದೇ ಮೊದಲ ಬಾರಿ ಇಲ್ಲಿ ಆಡಲಿರುವ ಕಾರಣ ಪ್ರತಿ ಟೂರ್ನಿಗಳಲ್ಲೂ ಅರ್ಹತಾ ಹಂತದಲ್ಲಿ ಸ್ಪರ್ಧಿಸಬೇಕಿದೆ.

`ವೃತ್ತಿಪರ ಟೂರ್‌ನಲ್ಲಿ ಪಾಲ್ಗೊಂಡು ಇನ್ನಷ್ಟು ಉತ್ತಮ ಹಾಗೂ ಬಲಿಷ್ಠ ಆಟಗಾರನಾಗಬೇಕೆಂಬುದು ನನ್ನ ಬಯಕೆ~ ಎಂದು ಏಳು ಬಾರಿಯ ವಿಶ್ವ ಚಾಂಪಿಯನ್ ಪಂಕಜ್ ನುಡಿದಿದ್ದಾರೆ. ವೃತ್ತಿಪರ ಟೂರ್‌ನಲ್ಲಿ ಪಾಲ್ಗೊಳ್ಳಲಿರುವ ಕಾರಣ ಅವರು ಮುಂದಿನ ಎರಡು ವರ್ಷಗಳ ಕಾಲ ಅಮೆಚೂರ್ ಟೂರ್ನಿಗಳಿಂದ ದೂರವುಳಿಯಲಿದ್ದಾರೆ.

ಏಷ್ಯನ್ ಸ್ನೂಕರ್ ಚಾಂಪಿಯನ್‌ಷಿಪ್ ಗೆದ್ದುಕೊಂಡ ಕಾರಣ ಭಾರತದ ಆದಿತ್ಯ ಮೆಹ್ತಾ ವೃತ್ತಿಪರ ಟೂರ್‌ನಲ್ಲಿ ಪಾಲ್ಗೊಳ್ಳಲು ನೇರ ಪ್ರವೇಶ ಪಡೆದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.