ADVERTISEMENT

ಶಹಬಾಜ್, ಮುಕುಂದ್‌ಗೆ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2012, 20:44 IST
Last Updated 1 ಡಿಸೆಂಬರ್ 2012, 20:44 IST
ದಾವಣಗೆರೆಯಲ್ಲಿ ಶನಿವಾರ ನಡೆದ ಐಟಿಎಫ್ ಪುರುಷರ ಟೂರ್ನಿಯ ಅರ್ಹತಾ ಪಂದ್ಯದಲ್ಲಿ ಶಹಬಾಜ್ ಖಾನ್ ಅವರ ಆಟದ ಪರಿ.	 ಪ್ರಜಾವಾಣಿ ಚಿತ್ರ: ಅನೂಪ್ ಆರ್. ತಿಪ್ಪೇಸ್ವಾಮಿ
ದಾವಣಗೆರೆಯಲ್ಲಿ ಶನಿವಾರ ನಡೆದ ಐಟಿಎಫ್ ಪುರುಷರ ಟೂರ್ನಿಯ ಅರ್ಹತಾ ಪಂದ್ಯದಲ್ಲಿ ಶಹಬಾಜ್ ಖಾನ್ ಅವರ ಆಟದ ಪರಿ. ಪ್ರಜಾವಾಣಿ ಚಿತ್ರ: ಅನೂಪ್ ಆರ್. ತಿಪ್ಪೇಸ್ವಾಮಿ   

ದಾವಣಗೆರೆ: ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್, ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಮತ್ತು ಜಿಲ್ಲಾ ಟೆನಿಸ್ ಸಂಸ್ಥೆ ವತಿಯಿಂದ ನಗರದಲ್ಲಿ ನಡೆಯುತ್ತಿರುವ  ಪುರುಷರ ಸಿಂಗಲ್ಸ್ ಅರ್ಹತಾ ಸುತ್ತಿನಲ್ಲಿ ಭಾರತದ ಶಹಬಾಜ್ ಖಾನ್ ಹಾಗೂ ಶಶಿಕುಮಾರ್ ಮುಕುಂದ್ ಅವರು ಕ್ರಮವಾಗಿ ಜರ್ಮನಿ ಹಾಗೂ ಹಾಲೆಂಡ್‌ನ ಎದುರಾಳಿಗಳನ್ನು ಮಣಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು.

ಖಾನ್ ಜರ್ಮನಿಯ ಲಾರೆನ್ಸ್ ಇಲ್ಗ್ ಅವರನ್ನು 6-1, 7-6 ರಿಂದ ಸೋಲಿಸಿದರು. ಇದೇ ವೇಳೆ ಶಶಿಕುಮಾರ್ ಮುಕುಂದ್ ಅವರು ಹಾಲೆಂಡ್‌ನ ರುಟರ್ ಕ್ರೇಮರ್ ಅವರನ್ನು 6-2, 6-2 ರಿಂದ ಮಣಿಸಿದರು.

`ಆಟದ ಆರಂಭದಲ್ಲಿ ಹಿಡಿತ ಸಾಧಿಸಿದ್ದೆ. ನಂತರ ಎಲ್ಲ ಸರ್ವ್‌ಗಳೂ ವಾಪಸಾಗುತ್ತಿದ್ದವು. ಪಂದ್ಯದ ಎರಡನೇ ಸೆಟ್‌ನಲ್ಲಿ ಮೂರು ಅಂಕಗಳಷ್ಟು ಹಿನ್ನಡೆ ಉಂಟಾಯಿತು. ಆದರೆ, ಇದೇ ಪರಿಣಾಮ ಲಾರೆನ್ಸ್ ಕೂಡಾ ಅನುಭವಿಸಿ ಅವರಿಗೆ ಸ್ವಲ್ಪ ಹಿನ್ನಡೆ ಉಂಟಾಗಿತ್ತು. ಅದು ನನಗೆ ಲಾಭದಾಯಕವಾಯಿತು' ಎಂದು ಖಾನ್ `ಪ್ರಜಾವಾಣಿ' ಜತೆ ಅನುಭವ ಹಂಚಿಕೊಂಡರು. ಖಾನ್ ಮುಂಬೈನ ಅಂಧೇರಿಯವರು. ಶಶಿಕುಮಾರ್ ಆಂಧ್ರಪ್ರದೇಶದ ಆಟಗಾರ.

ADVERTISEMENT

ಇತರ ಪಂದ್ಯಗಳ ಫಲಿತಾಂಶ: ಆರ್. ಸೂರಜ್‌ಪ್ರಭೋದ್ ಅವರು ಕಾಳಪ್ಪ ಬಸವರಾಜ್ ಅವರನ್ನು 6-1, 6-0 ರಿಂದ ಸೋಲಿಸಿದರು. ಪೂರ್ವಾ ಎಸ್. ಕುಮಾರ್ ಅವರು ಯಶಸ್ ಉಮೇಶ್ ಅವರ ವಿರುದ್ಧ 6-2, 6-4ರಿಂದ ಜಯ ಸಾಧಿಸಿದರು. ಭರಮ್‌ಜೋತ್ ಸಿಂಗ್, ಜಗನ್ಮಯ ಪಾಣಿಗ್ರಹಿ ವಿರುದ್ಧ 6-0, 6-0ರಿಂದ ಗೆದ್ದರು.

ಸಚಿನ್ ಸಾತನೂರ್ ಮಹೇಶ್ ವಿರುದ್ಧ ಸೂರಜ್ ಬೆನಿವಾಲ್ ಅವರು 6-2, 6-1 ರಿಂದ ಗೆಲುವು ಪಡೆದರೆ, ಜಾನಿ ಬೆಂಜಮಿನ್ ಮರಿಯಾ ಕುಮಾರ್ ಅವರು ಮಂಜುಳಾ ರೋಣಕ್ ಎದುರು 6-1, 6-1 ರಿಂದ ಸೋಲಬೇಕಾಯಿತು.

ರಿಭವ್ ರವಿಕಿರಣ್ ವಿರುದ್ಧ ಮಹಮದ್ ಅಶ್ರಫ್ 6-4, 7-5 ಸೆಟ್‌ಗಳಲ್ಲಿ ಗೆದ್ದರು. ಯು.ಎಂ. ಗಗನ್ ವರ್ಮಾ ಅವರು 6-1, 6-3 ರಿಂದ ನೀರಜ್ ಇಳಂಗೋವನ್ ಎದುರು ಸೋಲು ಕಾಣಬೇಕಾಯಿತು. ಚಿನ್ಮಯ್ ಪ್ರಧಾನ್ ಅವರು ಶ್ರೀನಿವಾಸ್ ದರ್ಶನ್ ಅವರನ್ನು 6-0, 6-4 ಸೆಟ್‌ಗಳಿಂದ ಮಣಿಸಿದರೆ, ಪಿ. ಶಿವಮೂರ್ತಿ ತಿಲಗಂ ವಿರುದ್ಧ ಬೆಂಗಳೂರಿನ ವಿಕ್ರಂ ನಾಯ್ಡು 6-4, 6-4 ರಿಂದ ಗೆಲುವು ಪಡೆದರು.

ಭಾನುವಾರ ಶ್ರೇಯಾಂಕಿತ ಆಟಗಾರ ಕುನಾಲ್ ಆನಂದ್ - ಸೂರಜ್ ಆರ್. ಪ್ರಭೋದ್, ಜರ್ಮನಿಯ ಟಾರ್ಸ್ಟನ್ ವಿಟೋಸ್ಕಾ - ಪೂರ್ವಾ ಎಸ್. ಕುಮಾರ್, ರಜತ್ ಮಹೇಶ್ವರಿ - ಭರಮ್‌ಜೋತ್ ಸಿಂಗ್,  ಜತಿನ್ ದಹಿಯಾ- ಸೂರಜ್ ಬೆನಿವಾಲ್,  ಫರೀಜ್ ಮಹಮದ್ - ಶಶಿಕುಮಾರ್ ಮುಕುಂದ್, ರೋಣಕ್ ಮಂಜುಳಾ -ಮಹಮದ್ ಅಶ್ರಫ್, ಇಳಂಗೋವನ್ ನೀರಜ್ - ಶಹಬಾಜ್ ಖಾನ್, ಚಿನ್ಮಯ್‌ಪ್ರಧಾನ್- ವಿಕ್ರಮ್ ನಾಯ್ಡು ನಡುವೆ ಎರಡನೇ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.