ADVERTISEMENT

ಶಿಲ್ಲಿಂಗ್ ಫೋರ್ಡ್ ಬೌಲಿಂಗ್‌ ನಿಯಮ ಬಾಹಿರ

ಕ್ರಿಕೆಟ್: ಸ್ಯಾಮುಯೆಲ್ಸ್ ವೇಗದ ಎಸೆತಕ್ಕೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST

ದುಬೈ (ಐಎಎನ್‌ಎಸ್): ವೆಸ್ಟ್ ಇಂಡೀಸ್ ತಂಡದ ಆಫ್‌ಸ್ಪಿನ್ನರ್ ಶೇನ್ ಶಿಲ್ಲಿಂಗ್ ಫೋರ್ಡ್ ಅವರ ಬೌಲಿಂಗ್ ಶೈಲಿ ನಿಯಮ ಬಾಹಿರ ಎಂದು ಭಾವಿಸಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಇನ್ನು ಮುಂದೆ ಅಂತರ ರಾಷ್ಟ್ರೀಯ ಪಂದ್ಯಗಳಲ್ಲಿ ಬೌಲಿಂಗ್ ಮಾಡದಂತೆ ಅವರನ್ನು ಅಮಾನತುಗೊಳಿಸಿದೆ.

ಜೊತೆಗೆ ಮತ್ತೊಬ್ಬ ವಿಂಡೀಸ್ ಆಟಗಾರ ಮಾರ್ಲೊನ್ ಸ್ಯಾಮು ಯೆಲ್ಸ್ ಅವರಿಗೆ  ಬೌಲಿಂಗ್‌ ಮಾಡುವುದನ್ನು ಮುಂದುವರೆಸಲು ಅವಕಾಶ ನೀಡಿದೆ.

ಸೋಮವಾರ ಐಸಿಸಿ ನಡೆಸಿದ ಸ್ವತಂತ್ರ ಬಯೋ ಮೆಕಾನಿಕಲ್ ವಿಶ್ಲೇಷಣೆಯಲ್ಲಿ ಶಿಲ್ಲಿಂಗ್ ಫೋರ್ಡ್ ಅವರ ‘ಆಫ್ ಬ್ರೇಕ್’ ಮತ್ತು ‘ದೂಸ್ರಾ’ ಎಸೆತಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಪರೀಕ್ಷೆಯಲ್ಲಿ ಅವರು ತಮ್ಮ ಬೌಲಿಂಗ್ ಶೈಲಿಯ ವೇಳೆ ಐಸಿಸಿ ನಿಯಮವನ್ನು ಮೀರಿ  15ಡಿಗ್ರಿ ಹಂತಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮೊಣಕೈಯನ್ನು ಮೇಲೆ ಮಾಡಿ ಬೌಲಿಂಗ್ ಮಾಡಿದ್ದು ಸಾಬೀತಾಗಿದೆ.
ಐಸಿಸಿ ನಿಯಮದ ಪ್ರಕಾರ ಬೌಲಿಂಗ್ ವೇಳೆ 15 ಡಿಗ್ರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ  ಮೊಣಕೈ ಮೇಲೆ ಮಾಡಿ ಬೌಲಿಂಗ್ ಮಾಡುವಂತಿಲ್ಲ.

ಕಳೆದ ತಿಂಗಳು ಮುಂಬೈನಲ್ಲಿ ನಡೆದ ಭಾರತ, ವೆಸ್ಟ್ ಇಂಡೀಸ್ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದ ಎರಡನೇ ದಿನದಾಟದ ನಂತರ ಪಂದ್ಯದ ಅಂಪೈರ್ ಗಳಾದ ರಿಚರ್ಡ್ ಕೆಟೆಲ್‌ಬರೊ ಮತ್ತು ನಿಜೆಲ್ ಲಾಂಗ್ ಅವರು ಶಿಲ್ಲಿಂಗ್ ಪೋರ್ಡ್ ಮತ್ತು ಸ್ಯಾಮುಯೆಲ್ಸ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಟಿವಿ ಅಂಪೈರ್ ವಿನೀತ್ ಕುಲಕರ್ಣಿ ಮತ್ತು  ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಪ್ಟ್ ಗೆ ವರದಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.