ADVERTISEMENT

ಶುಭಾರಂಭದ ನಿರೀಕ್ಷೆಯಲ್ಲಿ ಚೆಟ್ರಿ ಪಡೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 19:30 IST
Last Updated 21 ಆಗಸ್ಟ್ 2012, 19:30 IST

ಗ್ರೇಟರ್ ನೊಯಿಡಾ (ಪಿಟಿಐ/ಐಎಎನ್‌ಎಸ್): ಪ್ರಶಸ್ತಿಯ ಆಸೆ ಹೊತ್ತಿರುವ ಭಾರತ ತಂಡ ಬುಧವಾರ ಆರಂಭವಾಗಲಿರುವ ನೆಹರೂ ಕಪ್ ಫುಟ್‌ಬಾಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಸಿರಿಯಾ ವಿರುದ್ಧ ಆಡಲಿದೆ. ಈ ಮೂಲಕ `ಹ್ಯಾಟ್ರಿಕ್~ ಕನಸನ್ನು ನನಸು ಮಾಡಿಕೊಳ್ಳುವ ಅಭಿಯಾನಕ್ಕೆ ಚಾಲನೆ ನೀಡಲಿದೆ.

ಈಚೆಗೆ ಬಿಡುಗಡೆ ಮಾಡಲಾಗಿರುವ ಫಿಫಾ ರ‌್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಸಾಕಷ್ಟು ಕುಸಿತ ಕಂಡಿದೆ. ಇದು ಚೆಟ್ರಿ ಪಡೆಯ ಆತಂಕಕ್ಕೂ ಕಾರಣವಾಗಿದೆ. ರ‌್ಯಾಂಕಿಂಗ್ ಪಟ್ಟಿಯಲ್ಲಿ ಸದ್ಯ168ನೇ ಸ್ಥಾನ ಹೊಂದಿರುವ ಭಾರತ 1991ರ ನಂತರ ಈ ಮಟ್ಟದ ಕುಸಿತ ಕಂಡಿರಲಿಲ್ಲ. ಎದುರಾಳಿ ಸಿರಿಯಾ ಕೂಡಾ 15 ಸ್ಥಾನಗಳ ಕುಸಿತ ಕಂಡಿದ್ದು, ಸದ್ಯಕ್ಕೆ 147ನೇ ಸ್ಥಾನದಲ್ಲಿದೆ.

2007 ಹಾಗೂ 2009ರ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿತ್ತು. ಆದ್ದರಿಂದ ಈ ಸಲವೂ ಪ್ರಶಸ್ತಿ ತನ್ನಲ್ಲಿಯೇ ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ.

ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಕೆಲ ದಿನಗಳಿಂದ ಅಭ್ಯಾಸ ನಡೆಸಿರುವ ಆಟಗಾರರು, ಇಂದು (ಆಗಸ್ಟ್ 22) ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ. ಈ ಕ್ರೀಡಾಂಗಣದಲ್ಲಿ 60 ಸಾವಿರ ಪ್ರೇಕ್ಷಕರು ಪಂದ್ಯ ನೋಡಲು ಅವಕಾಶವಿದೆ.

ಆತಿಥೇಯ ಭಾರತ, ಮಾಲ್ಡೀವ್ಸ್, ನೇಪಾಳ, ಸಿರಿಯಾ ಮತ್ತು ಕ್ಯಾಮರಾನ್ ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ನೂತನ ಕೋಚ್ ವಿಮ್ ಕೊವರ್‌ಮನ್ಸ್ ಸಾರಥ್ಯದಲ್ಲಿ ಭಾರತದ ಸ್ಪರ್ಧಿಗಳು ಅಭ್ಯಾಸ ನಡೆಸಿದ್ದಾರೆ. ಕೊವರ್‌ಮನ್ಸ್ ಭಾರತದ ಕೋಚ್ ಆದ ನಂತರ ಇದು ಅವರಿಗೆ ಮೊದಲ ಟೂರ್ನಿಯಾಗಿದೆ.

ಹಿಂದಿನ ಎರಡು ಟೂರ್ನಿಗಳಲ್ಲಿ ಬೈಚುಂಗ್ ಭುಟಿಯಾ,   ಕ್ಲೈಮ್ಯಾಕ್ಸ್ ಲಾರ್ವೆನ್ಸ್, ಮಹೇಶ್ ಗೌವ್ಳಿ ಅವರಂತಹ ಸ್ಟಾರ್ ಆಟಗಾರರು ಭಾರತ ತಂಡದಲ್ಲಿದ್ದರು. ಈಗ ಅನುಭವಿ ಆಟಗಾರರ ಅಲಭ್ಯತೆಯ ನಡುವೆ ಭಾರತ ಹೇಗೆ ಪ್ರದರ್ಶನ ನೀಡುತ್ತದೆ ಎನ್ನುವ ಕುತೂಹಲವಿದೆ. ಪೊರ್ಚುಗಲ್ ಕ್ಲಬ್ ಪರ ಆಡಿ ಇತ್ತೀಚಿಗಷ್ಟೇ ವಾಪಸ್ಸಾಗಿರುವ ಭರತ್ ಚೆಟ್ರಿ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಅವರೇ ಈ ಸಲ ಆತಿಥೇಯ ತಂಡದ ಸವಾಲನ್ನು ಮುನ್ನಡೆಸಲಿದ್ದಾರೆ.

ಉತ್ತಮ ಪ್ರದರ್ಶನದ ವಿಶ್ವಾಸ:
`ಕಳೆದ ಒಂದು ವಾರದಿಂದ ತಂಡದ ಜೊತೆ ಅಭ್ಯಾಸ ನಡೆಸಿದ್ದೇನೆ. ಈ ಸಲ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ~ ಎಂದು ಭಾರತ ತಂಡದ ನಾಯಕ ಭರತ್ ಚೆಟ್ರಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಚ್ ಆಶಯದಂತೆ ಆಡಬೇಕು. ಹೊಸ ಕೌಶಲಗಳಿಗೆ ಹೊಂದಿಕೊಳ್ಳಬೇಕು~ ಎಂದು ನುಡಿದರು.

ಇಂದಿನ ಪಂದ್ಯ: ಭಾರತ-ಸಿರಿಯಾ: ಆರಂಭ: ಸಂಜೆ 7ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.