ADVERTISEMENT

ಶುಭಾರಂಭದ ನಿರೀಕ್ಷೆಯಲ್ಲಿ ಭಾರತ ‘ಎ’

ಪಿಟಿಐ
Published 3 ಮಾರ್ಚ್ 2018, 19:30 IST
Last Updated 3 ಮಾರ್ಚ್ 2018, 19:30 IST
ಉಮೇಶ್‌ ಯಾದವ್‌ (ಎಡ) ಮತ್ತು ಮಹಮ್ಮದ್‌ ಶಮಿ ದೇವಧರ್‌ ಟ್ರೋಫಿಯಲ್ಲಿ ಮಿಂಚುವ ವಿಶ್ವಾಸದಲ್ಲಿದ್ದಾರೆ.
ಉಮೇಶ್‌ ಯಾದವ್‌ (ಎಡ) ಮತ್ತು ಮಹಮ್ಮದ್‌ ಶಮಿ ದೇವಧರ್‌ ಟ್ರೋಫಿಯಲ್ಲಿ ಮಿಂಚುವ ವಿಶ್ವಾಸದಲ್ಲಿದ್ದಾರೆ.   

ಧರ್ಮಶಾಲಾ: ಭಾರತ ‘ಎ’ ತಂಡದವರು ದೇವಧರ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆಯ ಅಂಗಳದಲ್ಲಿ ಭಾನುವಾರ ನಡೆಯುವ ಪಂದ್ಯದಲ್ಲಿ ಭಾರತ ‘ಎ’ ತಂಡ ಭಾರತ ‘ಬಿ’ ವಿರುದ್ಧ ಸೆಣಸಲಿದೆ.

ಭಾರತ ‘ಎ’ ಟೂರ್ನಿಯಲ್ಲಿ ಒಮ್ಮೆ ಚಾಂಪಿಯನ್‌ ಆಗಿದೆ. ಭಾರತ ‘ಬಿ’ ತಂಡ ಚೊಚ್ಚಲ ಪ್ರಶಸ್ತಿಯ ಕನಸು ಕಾಣುತ್ತಿದೆ.

ADVERTISEMENT

ಸ್ಪಿನ್ನರ್‌ ಆರ್‌.ಅಶ್ವಿನ್‌ ಗಾಯದ ಕಾರಣ ಟೂರ್ನಿಗೆ ಅಲಭ್ಯರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಮಹಾರಾಷ್ಟ್ರದ ಅಂಕಿತ್‌ ಭಾವ್ನೆ, ಭಾರತ ‘ಎ’ ತಂಡವನ್ನು ಮುನ್ನಡೆಸಲಿದ್ದಾರೆ.

19 ವರ್ಷದೊಳಗಿನವರ ವಿಶ್ವಕಪ್‌ ಗೆದ್ದ ತಂಡದ ನಾಯಕತ್ವ ವಹಿಸಿದ್ದ ಪೃಥ್ವಿ ಶಾ ಮತ್ತು ಶುಭಮನ್‌ ಗಿಲ್‌ ಜಾರ್ಖಂಡ್‌ನ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌, ಸೂರ್ಯಕುಮಾರ್‌ ಯಾದವ್‌ ಮತ್ತು ಉನ್ಮುಕ್ತ್‌ ಚಾಂದ್‌ ಅವರು ಭಾರತ ‘ಎ’ ತಂಡದ ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ.

ವಿಜಯ್‌ ಹಜಾರೆ ಟೂರ್ನಿಯಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿರುವ ಉನ್ಮುಕ್ತ್‌, ಪೃಥ್ವಿ ಶಾ ಜೊತೆ ಇನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. ಆಲ್‌ರೌಂಡರ್‌ ಕೃಣಾಲ್‌ ಪಾಂಡ್ಯ ಅವರ ಬಲವೂ ತಂಡಕ್ಕಿದೆ.

ಮಹಮ್ಮದ್‌ ಶಮಿ, ನವದೀಪ್‌ ಸೈನಿ ಮತ್ತು ಬೇಸಿಲ್‌ ಥಂಪಿ ಅವರು ಬೌಲಿಂಗ್‌ನಲ್ಲಿ ತಂಡದ ಆಧಾರ ಸ್ತಂಭಗಳೆನಿಸಿದ್ದಾರೆ. ಅಶ್ವಿನ್‌ ಬದಲಿಗೆ ತಂಡದಲ್ಲಿ ಸ್ಥಾನ ಗಳಿಸಿರುವ ಶಹಬಾಜ್‌ ನದೀಮ್‌ ಕೂಡ ಮೋಡಿ ಮಾಡುವ ತವಕದಲ್ಲಿದ್ದಾರೆ.

ಭಾರತ ‘ಬಿ’ ತಂಡವೂ ಗೆಲುವಿಗಾಗಿ ಹಾತೊರೆಯುತ್ತಿದೆ. ಶ್ರೇಯಸ್‌ ಅಯ್ಯರ್‌ ಈ ತಂಡದ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಜಯಂತ್‌ ಯಾದವ್‌, ಮಹಾರಾಷ್ಟ್ರದ ಆರಂಭಿಕ ಆಟಗಾರ ರುತುರಾಜ್‌ ಗಾಯಕವಾಡ್‌, ಬಂಗಾಳದ ಮನೋಜ್‌ ತಿವಾರಿ, ಅಭಿಮನ್ಯು ಈಶ್ವರನ್‌ ಮತ್ತು ಸಿದ್ದೇಶ್‌ ಲಾಡ್‌ ಅವರು ಭಾರತ ‘ಎ’ ತಂಡದ ಬೌಲರ್‌ಗಳನ್ನು ಕಾಡುವ ಉತ್ಸಾಹದಲ್ಲಿದ್ದಾರೆ.

ಉಮೇಶ್‌ ಯಾದವ್‌, ಸಿದ್ದಾರ್ಥ್‌ ಕೌಲ್‌ ಮತ್ತು ಹರ್ಷಲ್‌ ಪಟೇಲ್‌ ಅವರು ಬೌಲಿಂಗ್‌ನಲ್ಲಿ ಮಿಂಚುವ ವಿಶ್ವಾಸದಲ್ಲಿದ್ದಾರೆ. ಜಯಂತ್‌ ಮತ್ತು ಸೌರಾಷ್ಟ್ರದ ಧರ್ಮೇಂದ್ರಸಿನ್ಹಾ ಜಡೇಜ ಅವರು ಭಾರತ ‘ಬಿ’ ತಂಡದ ಸ್ಪಿನ್‌ ಅಸ್ತ್ರವಾಗಿದ್ದಾರೆ.

ಶಮಿ–ಉಮೇಶ್‌ಗೆ ಮಹತ್ವದ ಟೂರ್ನಿ: ಭಾರತ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ಗುರಿ ಹೊಂದಿರುವ ಉಮೇಶ್‌ ಯಾದವ್‌ ಮತ್ತು ಮಹಮ್ಮದ್‌ ಶಮಿ ಪಾಲಿಗೆ ಈ ಟೂರ್ನಿ ಮಹತ್ವದ್ದೆನಿಸಿದೆ.

ಉಮೇಶ್‌, ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಗೆ ತಂಡದಲ್ಲಿ ಸ್ಥಾನ ಗಳಿಸಲು ವಿಫಲರಾಗಿದ್ದರು. ತಂಡದಲ್ಲಿದ್ದ ಶಮಿಗೆ ಹೆಚ್ಚು ಅವಕಾಶ ಸಿಕ್ಕಿರಲಿಲ್ಲ. ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಉಭಯ ಆಟಗಾರರಿಗೂ ಈ ಟೂರ್ನಿ ವೇದಿಕೆಯಾಗಿ ಪರಿಣಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.