ADVERTISEMENT

ಶುಭಾರಂಭದ ನಿರೀಕ್ಷೆಯಲ್ಲಿ ಸ್ವೀಡನ್‌

ಸವಾಲು ಮೀರುವ ವಿಶ್ವಾಸದಲ್ಲಿ ಕೊರಿಯಾ ರಿಪಬ್ಲಿಕ್‌

ಏಜೆನ್ಸೀಸ್
Published 17 ಜೂನ್ 2018, 19:30 IST
Last Updated 17 ಜೂನ್ 2018, 19:30 IST
ಸ್ವೀಡನ್‌ ಫುಟ್‌ಬಾಲ್‌ ತಂಡದ ಆಟಗಾರರು ಅಭ್ಯಾಸ ನಡೆಸಿದರು. -ಎಎಫ್‌ಪಿ ಚಿತ್ರ
ಸ್ವೀಡನ್‌ ಫುಟ್‌ಬಾಲ್‌ ತಂಡದ ಆಟಗಾರರು ಅಭ್ಯಾಸ ನಡೆಸಿದರು. -ಎಎಫ್‌ಪಿ ಚಿತ್ರ   

ನಿಜ್ನಿ ನೊವ್‌ಗೊರೋದ್‌: ವಿಶ್ವಕಪ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆ ಹೊಂದಿರುವ ಕೊರಿಯಾ ರಿಪಬ್ಲಿಕ್‌, ಸೋಮವಾರದ ಪಂದ್ಯದಲ್ಲಿ ಸ್ವೀಡನ್‌ ತಂಡವನ್ನು ಎದುರಿಸಲಿದೆ.

ಇಲ್ಲಿನ ನಿಜ್ನಿ ನೊವ್‌ಗೊರೋದ್‌ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಕೊರಿಯಾ ರಿಪಬ್ಲಿಕ್‌ ಅನ್ನು ಸೋಲಿಸಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ ಸ್ವೀಡನ್‌. 1958ರ ವಿಶ್ವಕಪ್‌ನಲ್ಲಿ ರನ್ನರ್ಸ್‌ ಅಪ್‌ ಆಗಿದ್ದೇ ಈ ತಂಡದ ಇದುವರೆಗಿನ ಉತ್ತಮ ಸಾಧನೆ.

ಆಡಿದ ಮೂರು ಅಭ್ಯಾಸ ಪಂದ್ಯಗಳಲ್ಲಿ ಸೋತಿರುವ ಕೊರಿಯಾ ರಿಪಬ್ಲಿಕ್‌ ತಂಡವು ಸ್ವಾಭಾವಿಕವಾಗಿ ಒತ್ತಡಕ್ಕೆ ಸಿಲುಕಿದೆ.

ADVERTISEMENT

ಎರಡೂ ತಂಡಗಳಲ್ಲಿ ಫಾರ್ವರ್ಡ್‌ ವಿಭಾಗಗಳು ಬಲಿಷ್ಠವಾಗಿಲ್ಲ. ಆದರೆ, ಫಿಫಾ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 24ನೇ ಸ್ಥಾನ ಹೊಂದಿರುವ ಸ್ವೀಡನ್‌ನ ಮಿಡ್‌ಫೀಲ್ಡ್‌ ಹಾಗೂ ರಕ್ಷಣಾ ವಿಭಾಗಗಳು ಶಕ್ತಿಯುತವಾಗಿದೆ.

ಹಿಂದಿನ ವಿಶ್ವಕಪ್‌ನಲ್ಲಿ ಸ್ಪರ್ಧಿಸುವ ಅರ್ಹತೆ ಗಳಿಸಲು ವಿಫಲವಾಗಿದ್ದ ಸ್ವೀಡನ್‌ ಕಳೆದ ಎರಡು ವರ್ಷಗಳಿಂದ ಹಲವು ವಿಭಾಗಗಳಲ್ಲಿ ಉತ್ತಮ ಸಾಮರ್ಥ್ಯ ಬೆಳೆಸಿಕೊಂಡಿದೆ. ಜೇನ್‌ ಆ್ಯಂಡರ್ಸನ್‌ ಅವರ ಗರಡಿಯಲ್ಲಿ ಪಳಗಿರುವ ತಂಡವು ಗೆಲುವಿಗಾಗಿ ಹೊಸ ತಂತ್ರ ಅನುಸರಿಸುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ 4–4–2ರ ಯೋಜನೆಯೊಂದಿಗೆ ತಂಡವು ಅಂಗಳಕ್ಕಿಳಿಯುವ ಸಂಭವವಿದೆ. ಪ್ರಮುಖ ಆಟಗಾರ ಮಾರ್ಕಸ್‌ ಬರ್ಗ್‌ ಅವರು ಫಾರ್ವರ್ಡ್‌ ವಿಭಾಗದ ಮುಂದಾಳತ್ವ ವಹಿಸುವ ಸಾಧ್ಯತೆ ಹೆಚ್ಚು.

ಇನ್ನೂ ಕೊರಿಯಾ ಗಣರಾಜ್ಯದ ತಂಡವು ಸನ್‌ ಹುವಾಂಗ್‌ ಮಿನ್‌ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಮಿಡ್‌ಫೀಲ್ಡ್‌ ಹಾಗೂ ಫಾರ್ವರ್ಡ್‌ ವಿಭಾಗಗಳೆಡರಲ್ಲೂ ಉತ್ತಮ ಸಾಮರ್ಥ್ಯ ತೋರುವ ಅವರು ಎದುರಾಳಿ ತಂಡದ ರಕ್ಷಣಾ ಪಡೆಯ ತಂತ್ರವನ್ನು ವಿಫಲಗೊಳಿಸಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.