ADVERTISEMENT

ಶೂಟರ್ ಪ್ರಕಾಶ್‌ಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 19:59 IST
Last Updated 13 ಏಪ್ರಿಲ್ 2013, 19:59 IST

ಬೆಂಗಳೂರು: ಶೂಟಿಂಗ್ ಕ್ರೀಡಾ ಬದುಕಿನಲ್ಲಿ ಎತ್ತರದ ಸಾಧನೆಯನ್ನು ನಾನು ಬಹಳ ತಡವಾಗಿ ಮಾಡಿದ್ದೇನೆ ಎಂದ ಭಾರತದ ಶೂಟಿಂಗ್ ತಾರೆ ಪಿ.ಎನ್.ಪ್ರಕಾಶ್ ಈ ಬಗ್ಗೆ ನನಗೆ ವಿಷಾದವೇನಿಲ್ಲವಾದರೂ, ಕಿರಿಯ ವಯಸ್ಸಿನಲ್ಲಿಯೇ ಅಭ್ಯಾಸ ನಡೆಸಿದ್ದಿದ್ದರೆ ಒಂದು ದಶಕದ ಹಿಂದೆಯೇ  ಅಂತರರಾಷ್ಟ್ರೀಯ ಪದಕಗಳನ್ನು ಗೆಲ್ಲಲು ಸಾಧ್ಯವಿತ್ತೇನೊ ಎಂದು ನುಡಿದರು.

ದಕ್ಷಿಣ ಕೊರಿಯಾದ ಚಾಂಗ್ವಾನ್‌ನಲ್ಲಿ ನಡೆದಿದ್ದ ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ಷಿಪ್‌ನ 10ಮೀಟರ್ಸ್ ಏರ್‌ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಪ್ರಕಾಶ್ ಅವರಿಗೆ ಕರ್ನಾಟಕ ರಾಜ್ಯ ರೈಫಲ್ ಸಂಸ್ಥೆಯ ವತಿಯಿಂದ ಶನಿವಾರ ಕೆಂಗೇರಿಯಲ್ಲಿರುವ ಕೆಎಸ್‌ಆರ್‌ಎ ಶೂಟಿಂಗ್ ರೇಂಜ್ ಆವರಣದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

`ಕೆಎಸ್‌ಆರ್‌ಎ ನನಗೆ ನೀಡಿದ ಪ್ರೋತ್ಸಾಹ ಮತ್ತು ಸಹಕಾರದಿಂದ ನಾನು ಈ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ಸಂಸ್ಥೆಯ ಮುಖ್ಯಸ್ಥ ರಾಜೇಶ್ ಜಗದಾಳೆ ಅವರು ನೀಡಿದ ಆರ್ಥಿಕ ನೆರವಿನಿಂದಲೇ ಹೆಚ್ಚಿನ ತರಬೇತಿ ಪಡೆಯಲು ಸಾಧ್ಯವಾಯಿತು' ಎಂದೂ 37ರ ಹರೆಯದ ಪ್ರಕಾಶ್ ನುಡಿದರು.

ಈ ಸಂದರ್ಭದಲ್ಲಿ ಕೆಎಸ್‌ಆರ್‌ಎ ಗೌರವ ಕಾರ್ಯದರ್ಶಿ ರಾಜೇಶ್ ಜಗದಾಳೆ ಅವರು ಮಾತನಾಡುತ್ತಾ ತಮ್ಮ ಸಂಸ್ಥೆಯು ರಾಜ್ಯದಲ್ಲಿ ಶೂಟಿಂಗ್ ಕ್ರೀಡೆಯ ಅಭಿವೃದ್ಧಿಯ ಕುರಿತು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರತಿಭಾವಂತರನ್ನು ಗುರುತಿಸಿ ಪ್ರಾಯೋಜಕತ್ವ ಒದಗಿಸುವುದಾಗಿಯೂ ಹೇಳಿದರು.

ಇಲ್ಲಿ ತರಬೇತಿ ಪಡೆಯುತ್ತಿರುವ ಸುಮಾರು ಮೂವತ್ತಕ್ಕೂ ಹೆಚ್ಚು ಶೂಟರ್‌ಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಂಸ್ಥೆಯ ಜಂಟಿ ಕಾರ್ಯದರ್ಶಿ ಮುತ್ತುರಾಯ ರೆಡ್ಡಿ ಉಪಸ್ಥಿತರಿದ್ದರು. ಸಂಸ್ಥೆಯ ಪರವಾಗಿ ಪ್ರಕಾಶ್ ಅವರಿಗೆ ಹತ್ತು ಸಾವಿರ ರೂಪಾಯಿ ಚೆಕ್ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.