ಹೈದರಾಬಾದ್ (ಪಿಟಿಐ): ಸನ್ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ ಟೂರ್ನಿಯಲ್ಲಿ ಗುರುವಾರ ನಡೆಯುವ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಸೆಣಸಲಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಅಮೋಘ ಜಯ ಸಾಧಿಸಿ ಹುಮ್ಮಸ್ಸಿ
ನಲ್ಲಿರುವ ಕೇನ್ ವಿಲಿಯಮ್ಸನ್ ಬಳಗ, ಕಿಂಗ್ಸ್ ಎದುರು ಹಿಂದಿನ ಪಂದ್ಯದಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ನಿರಂತರ ಎರಡು ಸೋಲುಗಳಿಂದಾಗಿ ಕಂಗೆಟ್ಟಿದ್ದ ಸನ್ರೈಸರ್ಸ್ ತಂಡ, ಮುಂಬೈ ವಿರುದ್ಧ ಗೆದ್ದ ನಂತರ ಚೇತರಿಸಿಕೊಂಡಿದೆ. ಗಾಯಗೊಂಡಿದ್ದ ಮಧ್ಯಮವೇಗಿ ಭುವನೇಶ್ವರ್ ಕುಮಾರ್ ಅವರ ಅನುಪಸ್ಥಿತಿಯಲ್ಲೂ ತಂಡ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು. ವೇಗಿ ಸಿದ್ಧಾರ್ಥ್ ಕೌಲ್ ಮತ್ತು ಲೆಗ್ ಸ್ಪಿನ್ನರ್ ರಶೀದ್ ಖಾನ್ ಪ್ರಭಾವಿ ದಾಳಿ ಸಂಘಟಿಸಿದ್ದರು. ಹೀಗಾಗಿ ತಂಡ 31 ರನ್ಗಳ ಜಯ
ದಾಖಲಿಸಿತ್ತು.
ಸನ್ರೈಸರ್ಸ್ ಈಗ ಸಮತೋಲನ ಹೊಂದಿರುವ ತಂಡವಾಗಿದೆ. ನಾಯಕ ಕೇನ್ ವಿಲಿಯಮ್ಸನ್ ನೇತೃತ್ವದ ಬ್ಯಾಟಿಂಗ್ ಬಳಗ ಅತ್ಯುತ್ತಮ
ವಾಗಿ ಆಡುತ್ತಿದೆ. ಕೇನ್ ಈ ವರೆಗೆ 259 ರನ್ ಗಳಿಸಿದ್ದಾರೆ. ಎದುರಾಳಿ ತಂಡದ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಲು ಸಿದ್ಧಾರ್ಥ್ ಕೌಲ್ ಯಶಸ್ವಿಯಾಗಿದ್ದಾರೆ. ಅವರ ಖಾತೆಯಲ್ಲಿ ಈಗ ಒಂಬತ್ತು ವಿಕೆಟ್ಗಳು ಇವೆ.
ಗೇಲ್–ರಾಹುಲ್ ಜೋಡಿ ಮೇಲೆ ಕಣ್ಣು: ಏಪ್ರಿಲ್ 19ರಂದು ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ವಿರುದ್ಧ ಕಿಂಗ್ಸ್ ಇಲೆವನ್ ತಂಡ
15 ರನ್ಗಳ ಜಯ ದಾಖಲಿಸಿತ್ತು. ಆ ಪಂದ್ಯದಲ್ಲಿ ಕ್ರಿಸ್ ಗೇಲ್ 63 ಎಸೆತಗಳಲ್ಲಿ 104 ರನ್ ಸಿಡಿಸಿದ್ದರು. ಈ ಬಾರಿ ಉತ್ತಮ ಆಟ ಆಡುತ್ತಿರುವ ಅವರು ಈಗಾಗಲೇ ಒಂದು ಶತಕ ಮತ್ತು ಎರಡು ಅರ್ಧಶತಕ ಗಳಿಸಿದ್ದಾರೆ. ಗುರುವಾರವೂ ಅವರು ಮಿಂಚಿದರೆ ಸನ್ರೈಸರ್ಸ್ನ ಹಾದಿ ಕಠಿಣವಾಗಲಿದೆ.
ಗೇಲ್ ಅವರ ಆರಂಭಿಕ ಜೋಡಿ ಕೆ.ಎಲ್.ರಾಹುಲ್ ಕೂಡ ಉತ್ತಮ ಲಯದಲ್ಲಿದ್ದಾರೆ. ಅವರು ಈವರೆಗೆ 236 ರನ್ ಗಳಿಸಿದ್ದಾರೆ. ಇವರಿಬ್ಬರನ್ನು ಆದಷ್ಟು ಬೇಗ ಔಟ್ ಮಾಡುವುದು ಗುರುವಾರ ಸನ್ರೈಸರ್ಸ್ನ ಮೊದಲ ಆದ್ಯತೆ ಆಗಲಿದೆ.
ವೇಗಿಗಳಾದ ಸಿದ್ಧಾರ್ಥ್ ಕೌಲ್, ಬೇಸಿಲ್ ಥಂಪಿ, ಸ್ಪಿನ್ನರ್ಗಳಾದ ರಶೀದ್ ಖಾನ್, ಶಕೀಬ್ ಅಲ್ಹಸನ್ ಮತ್ತು ಮಹಮ್ಮದ್ ನಬಿ ಅವರ ಮೇಲೆ ಸನ್ರೈಸರ್ಸ್ ಭರವಸೆ ಹೊಂದಿದೆ.
ಪಂದ್ಯ ಆರಂಭ: ರಾತ್ರಿ 8.00.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.