ADVERTISEMENT

ಸನ್‌ರೈಸರ್ಸ್‌ಗೆ ವಾರಿಯರ್ಸ್ ಶರಣು

ಒಂದು ಓವರ್‌ನಲ್ಲಿ ಹ್ಯಾಟ್ರಿಕ್ ಸಮೇತ ನಾಲ್ಕು ವಿಕೆಟ್ ಕಬಳಿಸಿದ ಅಮಿತ್ ಮಿಶ್ರಾ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 19:59 IST
Last Updated 17 ಏಪ್ರಿಲ್ 2013, 19:59 IST
ಸಂಭ್ರಮ... ಪುಣೆಯಲ್ಲಿ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಅಮಿತ್ ಮಿಶ್ರಾ ಸಂಭ್ರಮಿಸಿದ್ದು ಹೀಗೆ...  	-ಪಿಟಿಐ ಚಿತ್ರ
ಸಂಭ್ರಮ... ಪುಣೆಯಲ್ಲಿ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಅಮಿತ್ ಮಿಶ್ರಾ ಸಂಭ್ರಮಿಸಿದ್ದು ಹೀಗೆ... -ಪಿಟಿಐ ಚಿತ್ರ   

ಪುಣೆ (ಪಿಟಿಐ): ಅಮಿತ್ ಮಿಶ್ರಾ ಹಾಕಿದ ಆ ಒಂದು ಓವರ್‌ನಲ್ಲಿ ಹ್ಯಾಟ್ರಿಕ್ ಸಮೇತ ನಾಲ್ಕು ವಿಕೆಟ್. ಆ ಓವರ್ ಇಡೀ ಪಂದ್ಯದ ಹಣೆಬರಹವನ್ನೇ ಬದಲಾಯಿಸಿತು. ಅದುವರೆಗೆ ವಿಕೆಟ್ ಲಭಿಸದೇ ಇದ್ದ  ಮಿಶ್ರಾ ಒಮ್ಮೆಲೇ ಹೀರೊ ಆದರು. ಪರಿಣಾಮ ಸೋಲಿನ ಅಂಚಿನಿಂದ ಪಾರಾಗಿ ಬಂದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಅಚ್ಚರಿ ಗೆಲುವು ಲಭಿಸಿತು.

ಸುಬ್ರತೊ ರಾಯ್ ಸಹಾರಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪುಣೆ ವಾರಿಯರ್ಸ್ ಒಮ್ಮೆಲೇ ಆಘಾತಕ್ಕೆ ಒಳಗಾಯಿತು. ಸನ್‌ರೈಸರ್ಸ್ ನೀಡಿದ 120 ರನ್‌ಗಳ ಅಲ್ಪ ಗುರಿಯನ್ನು ತಲುಪಲು ಕೂಡ ವಾರಿಯರ್ಸ್‌ಗೆ ಸಾಧ್ಯವಾಗಲಿಲ್ಲ. 19 ಓವರ್‌ಗಳಲ್ಲಿ ಕೇವಲ 108 ರನ್‌ಗಳಿಗೆ ತತ್ತರಿಸಿ ಹೋದರು. ಈ ಮೂಲಕ ಸನ್‌ರೈಸರ್ಸ್ 11 ರನ್‌ಗಳಿಂದ ಗೆದ್ದು ಬೀಗಿತು.

ಅಲ್ಪ ಗುರಿ ಎದುರು ವಾರಿಯರ್ಸ್ ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲಿತ್ತು. 16.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿತ್ತು. ಆಗ ಗೆಲುವಿಗಾಗಿ 19 ಎಸೆತಗಳಿಂದ 19 ರನ್ ಬೇಕಿದ್ದವು. ಆದರೆ ಮಿಷೆಲ್ ಮಾರ್ಷ್ ವಿಕೆಟ್ ಪತನ ಈ ತಂಡ ಕುಸಿತದ ಹಾದಿ ಹಿಡಿಯಲು ಕಾರಣವಾಯಿತು.

ಅದರಲ್ಲೂ ಪ್ರಮುಖವಾಗಿ 19ನೇ ಓವರ್ ಮಾಡಿದ ಮಿಶ್ರಾ ಪುಣೆ ವಾರಿಯರ್ಸ್ ತಂಡಕ್ಕೆ ನೀಡಿದ ಆಘಾತ ಅಷ್ಟಿಷ್ಟಲ್ಲ. ಆ ಓವರ್ ಮಾಡಿದ ಈ ಲೆಗ್ ಸ್ಪಿನ್ನರ್ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಆ ಓವರ್‌ನ 18.2ನೇ ಎಸೆತದಲ್ಲಿ ಮ್ಯಾಥ್ಯುಸ್ ವಿಕೆಟ್ ಕಬಳಿಸಿದರು.

ಬಳಿಕ 18.4ನೇ ಎಸೆತದಲ್ಲಿ ಭುವನೇಶ್ವರ್ ಕುಮಾರ್, 18.5ನೇ ಎಸೆತದಲ್ಲಿ ರಾಹುಲ್ ಶರ್ಮ ಹಾಗೂ 18.6ನೇ ಎಸೆತದಲ್ಲಿ ಅಶೋಕ್ ದಿಂಡಾ ವಿಕೆಟ್ ಪಡೆದರು. ಈ ಮೂಲಕ ಹ್ಯಾಟ್ರಿಕ್ ವಿಕೆಟ್ ಸಾಧನೆಗೆ ಭಾಜನರಾದರು. ಅಲ್ಲಿಗೆ ವಾರಿಯರ್ಸ್ ಆಲೌಟ್. ಈ ತಂಡ 7 ರನ್ ಸೇರಿಸುವಷ್ಟರಲ್ಲಿ ಕೊನೆಯ 6 ವಿಕೆಟ್ ಕಳೆದುಕೊಂಡಿತು.

ಈ ಓವರ್‌ಗೆ ಮುನ್ನ ಮಿಶ್ರಾ ಮೂರು ಓವರ್ ಮಾಡಿ 17 ರನ್ ನೀಡಿದ್ದರು. ಯಾವುದೇ ವಿಕೆಟ್ ಪಡೆದಿರಲಿಲ್ಲ. ಐಪಿಎಲ್‌ನಲ್ಲಿ ಮಿಶ್ರಾ ಅವರಿಗೆ ಲಭಿಸಿದ ಮೂರನೇ ಹ್ಯಾಟ್ರಿಕ್ ಇದು. ಈ ಹಿಂದೆ  2008ರ ಆವೃತ್ತಿಯಲ್ಲಿ ಹಾಗೂ 2011ರ ಅವತರಣಿಕೆಯಲ್ಲಿ ಅವರು ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದರು.

ಈ ಪಂದ್ಯದಲ್ಲಿ ವಾರಿಯರ್ಸ್ ಪರ ರಾಬಿನ್ ಉತ್ತಪ್ಪ (22) ಗರಿಷ್ಠ ಸ್ಕೋರರ್ ಎನಿಸಿದರು. ಆ್ಯರನ್ ಫಿಂಚ್ (16), ಸ್ಟೀವನ್ ಸ್ಮಿತ್ (17) ಹಾಗೂ ಮ್ಯಾಥ್ಯುಸ್ (20) ಅವರ ಆಟ ಏನಕ್ಕೂ ಸಾಕಾಗಲಿಲ್ಲ.

ಈ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಲು ಅವಕಾಶ ಪಡೆದಿದ್ದ ಸನ್‌ರೈಸರ್ಸ್ 44 ರನ್ ಗಳಿಸುವಷ್ಟರಲ್ಲಿ  ಆರು ವಿಕೆಟ್ ಕಳೆದುಕೊಂಡಿತ್ತು. ಆದರೆ ಬಿಪ್ಲಬ್ ಸಮಂತ್ರೆ (37) ಹಾಗೂ ಮಿಶ್ರಾ (30; 24 ಎ, 3 ಬೌಂ.) ಈ ತಂಡಕ್ಕೆ ಆಸರೆಯಾದರು. ವಾರಿಯರ್ಸ್‌ನ ವೇಗಿ ಭುವನೇಶ್ವರ್ ಕುಮಾರ್ (18ಕ್ಕೆ3) ಹಾಗೂ ರಾಹುಲ್ ಶರ್ಮ (21ಕ್ಕೆ2) ಪ್ರಭಾವಿ ಬೌಲಿಂಗ್ ಪ್ರದರ್ಶನ ತೋರಿದರು. ಆದರೆ ತಂಡ ಸೋತ ಕಾರಣ ಅವರ ಪ್ರಯತ್ನ ವ್ಯರ್ಥವಾಯಿತು.

ಈ ಮೂಲಕ ಸನ್‌ರೈಸರ್ಸ್ ಟೂರ್ನಿಯಲ್ಲಿ ನಾಲ್ಕನೇ ಗೆಲುವು ಸಾಧಿಸಿತು. ನೂತನ ತಂಡವೀಗ ಆರು ಪಂದ್ಯಗಳಿಂದ ಒಟ್ಟು ಎಂಟು ಪಾಯಿಂಟ್ ಹೊಂದಿದೆ. ಆದರೆ ಪುಣೆ ವಾರಿಯರ್ಸ್ 6 ಪಂದ್ಯಗಳಿಂದ ಕೇವಲ 4 ಪಾಯಿಂಟ್ ಹೊಂದಿದೆ. ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಈ ಮೂಲಕ ಟೂರ್ನಿಯ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.ಆರು ಪಂದ್ಯಗಳನ್ನಾಡಿ ನಾಲ್ಕರಲ್ಲಿ ಗೆಲುವು ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT