ADVERTISEMENT

ಸರ್ದಾರ್, ರಘುನಾಥ್‌ಗೆ ಭಾರಿ ಬೆಲೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2012, 19:59 IST
Last Updated 16 ಡಿಸೆಂಬರ್ 2012, 19:59 IST

ನವದೆಹಲಿ (ಪಿಟಿಐ): ಭಾರತ ತಂಡದ ನಾಯಕ ಸರ್ದಾರ ಸಿಂಗ್ ಮತ್ತು ಕರ್ನಾಟಕದ ವಿ.ಆರ್. ರಘುನಾಥ್ ಹಾಕಿ ಇಂಡಿಯಾ ಲೀಗ್ (ಎಚ್‌ಐಎಲ್) ಆಟಗಾರರ ಹರಾಜಿನಲ್ಲಿ ಭಾರಿ ಬೆಲೆಗೆ `ಮಾರಾಟ'ವಾಗಿದ್ದಾರೆ.

ಭಾನುವಾರ ನಡೆದ ಹರಾಜಿನಲ್ಲಿ ಸರ್ದಾರ್ ಅವರನ್ನು ದೆಹಲಿ ಫ್ರಾಂಚೈಸಿ ರೂ. 42.49 ಲಕ್ಷ ನೀಡಿ ತನ್ನದಾಗಿಸಿಕೊಂಡಿದೆ. `ಡ್ರ್ಯಾಗ್‌ಫ್ಲಿಕ್ಕರ್' ರಘುನಾಥ್ ಅವರನ್ನು ರೂ. 41.40 ಲಕ್ಷಕ್ಕೆ ಸಹಾರಾ ಉತ್ತರ ಪ್ರದೇಶ ವಿಜಾರ್ಡ್ಸ್ ಫ್ರಾಂಚೈಸಿ ಕೊಂಡುಕೊಂಡಿದೆ. ರಘುನಾಥ್ ಅವರ ಮೂಲಬೆಲೆ 7.56 ಲಕ್ಷ ರೂ. ಆಗಿತ್ತು.

ಆದರೆ ಈ ಆಟಗಾರನನ್ನು ಪಡೆದುಕೊಳ್ಳಲು ಯುಪಿ ವಿಜಾರ್ಡ್ಸ್ ಹಾಗೂ ದೆಹಲಿ ವೇವ್‌ರೈಡರ್ಸ್ ನಡುವೆ ಪ್ರಬಲ ಪೈಪೋಟಿ ನಡೆಯಿತು. ಈ ಕಾರಣ ಮೂಲಬೆಲೆಗಿಂತ ಆರುಪಟ್ಟು ಅಧಿಕ ಬೆಲೆ ಅವರಿಗೆ ದೊರೆತಿದೆ. ರಘುನಾಥ್ ಬಾರಿ ಬೆಲೆ ಪಡೆದದ್ದು ಯುಪಿ ತಂಡ `ಮಾರ್ಕೀ' ಆಟಗಾರ ಹಾಲೆಂಡ್‌ನ ಟೆನ್ ಡಿ ನೂಜೆರ್‌ಗೆ ಲಾಭ ತಂದಿತ್ತಿದೆ. ಏಕೆಂದರೆ ಎಚ್‌ಐಎಲ್‌ನ ನಿಯಮದಂತೆ `ಮಾರ್ಕೀ' ಆಟಗಾರ ಆ ತಂಡದಲ್ಲಿರುವ ಅತಿಹೆಚ್ಚು ಬೆಲೆಯುಳ್ಳ ಆಟಗಾರನಿಗಿಂತ ಶೇ. 15 ರಷ್ಟು ಅಧಿಕ ಹಣ ಪಡೆಯುವರು.

ನೂಜೆರ್‌ಗೆ ಹರಾಜಿನಲ್ಲಿ ರೂ. 35.93 ಲಕ್ಷ ಲಭಿಸಿತ್ತು. ಇದೀಗ ಅವರು ರಘುನಾಥ್ ಪಡೆದ ಮೊತ್ತಕ್ಕಿಂತ ಶೇ. 15 ರಷ್ಟು ಅಧಿಕ ಹಣ ಪಡೆಯಲಿದ್ದಾರೆ. ನೂಜೆರ್ ಅಲ್ಲದೆ, ಸರ್ದಾರ್ ಸಿಂಗ್, ಸಂದೀಪ್ ಸಿಂಗ್, ಎಸ್.ವಿ. ಸುನಿಲ್, ಜೇಮಿ ಡ್ವಾಯರ್ ಮತ್ತು ಮಾರಿಟ್ಜ್ ಫ್ಯುಯೆಟ್ಸ್ ಅವರಿಗೆ `ಮಾರ್ಕೀ ಆಟಗಾರ' ಎಂಬ ಹಣೆಪಟ್ಟಿ ಲಭಿಸಿದೆ.

ಯುವ ಆಟಗಾರ ರೂಪಿಂದರ್ ಪಾಲ್ ಸಿಂಗ್ ಕೂಡಾ ಮೂಲಬೆಲೆಗಿಂತ ಆರು ಪಟ್ಟು ಅಧಿಕ ಬೆಲೆ ಪಡೆದು ಅಚ್ಚರಿ ಉಂಟುಮಾಡಿದರು. 5.03 ಲಕ್ಷ ಮೂಲಬೆಲೆ ಹೊಂದಿದ್ದ ಅವರನ್ನು ದೆಹಲಿ ತಂಡ 30.48 ಲಕ್ಷ ರೂ. ಮೊತ್ತಕ್ಕೆ ಖರೀದಿಸಿದೆ.

ಆದರೆ ಸಂದೀಪ್ ಸಿಂಗ್ ಹೆಚ್ಚಿನ ಬೆಲೆ ಪಡೆಯುವಲ್ಲಿ ವಿಫಲರಾದರು. ಅವರು ಮೂಲಬೆಲೆಗಿಂತ (ರೂ. 15.13 ಲಕ್ಷ) ಹೆಚ್ಚಿನ ಮೌಲ್ಯ ಪಡೆಯಲಿಲ್ಲ. ಅವರನ್ನು ಮುಂಬೈ ಮ್ಯಾಜಿಷಿಯನ್ಸ್ ಫ್ರಾಂಚೈಸ್ ಕೊಂಡುಕೊಂಡಿತು. ಆದರೆ ಆಸ್ಟ್ರೇಲಿಯದ ಜೋ ಕರೊಲ್ ಅವರನ್ನು ಈ ತಂಡ ರೂ. 30.30 ಲಕ್ಷ ನೀಡಿ ಖರೀದಿಸಿದೆ. ಸಂದೀಪ್ `ಮಾರ್ಕೀ' ಆಟಗಾರನಾಗಿರುವ ಕಾರಣ ಕರೊಲ್ ಅವರಿಗಿಂತ ಶೇ. 15 ರಷ್ಟು ಅಧಿಕ ಹಣ ಪಡೆಯಲಿದ್ದಾರೆ.

ಭಾರತದ ಇತರ ಆಟಗಾರರಾದ ಎಸ್.ವಿ. ಸುನಿಲ್ (ರೂ. 22.86 ಲಕ್ಷ, ದೆಹಲಿ ವಿಜಾರ್ಡ್ಸ್), ಇಗ್ನೇಸ್ ಟಿರ್ಕಿ (ರೂ. 16.87 ಲಕ್ಷ, ಪಂಜಾಬ್ ವಾರಿಯರ್ಸ್), ಎಂ.ಬಿ. ಅಯ್ಯಪ್ಪ (ರೂ. 11.43 ಲಕ್ಷ, ಮುಂಬೈ), ಗುರ್ಬಾಜ್ ಸಿಂಗ್ (ರೂ. 19.60 ಲಕ್ಷ, ದೆಹಲಿ) ಮತ್ತು ಕೊತಜಿತ್ ಸಿಂಗ್ (ರೂ. 17.42 ಲಕ್ಷ, ರಾಂಚಿ ರಿನೋಸ್) ಉತ್ತಮ ಬೆಲೆ ಪಡೆದರು.

ಜರ್ಮನಿಯ ಮಾರಿಟ್ಜ್ ಫ್ಯುಯೆಟ್ಸ್ ಅವರನ್ನು ರಾಂಚಿ ರಿನೋಸ್ ರೂ. 41.10 ಲಕ್ಷ ವೊತ್ತಕ್ಕೆ ಕೊಂಡುಕೊಂಡರೆ, ಆಸ್ಟ್ರೇಲಿಯದ ಜೇಮಿ ಡ್ವಾಯರ್ ರೂ. 32.66 ಲಕ್ಷಕ್ಕೆ ಪಂಜಾಬ್ ವಾರಿಯರ್ಸ್‌ಗೆ ಮಾರಾಟವಾದರು.

ಹರಾಜಾಗದ ಭರತ್ ಚೆಟ್ರಿ: ಭಾರತ ತಂಡದ ಮಾಜಿ ನಾಯಕ ಹಾಗೂ ಗೋಲ್‌ಕೀಪರ್ ಭರತ್ ಚೆಟ್ರಿ ಹರಾಜಾಗದೇ ಉಳಿದರು. ಚೆಟ್ರಿಗೆ ರೂ. 10 ಲಕ್ಷ ಮೂಲಬೆಲೆ ನಿಗದಿಪಡಿಸಲಾಗಿತ್ತು. ಆದರೆ ಅವರನ್ನು ಕೊಂಡುಕೊಳ್ಳಲು ಯಾವುದೇ ಫ್ರಾಂಚೈಸ್‌ಗಳು ಆಸಕ್ತಿ ತೋರಲಿಲ್ಲ. ಪಾಕಿಸ್ತಾನದ ಮೊಹಮ್ಮದ್ ಇಮ್ರಾನ್ ಮತ್ತು ಸ್ಪೇನ್‌ನ ಯುವ ಆಟಗಾರ ಪಾಲ್ ಅಮಾಟ್ ಕೂಡಾ ಹರಾಜಾಗದೆ ಉಳಿದುಕೊಂಡರು.

ಹರಾಜಿನಲ್ಲಿ ಪಾಲ್ಗೊಂಡ ಐದು ಫ್ರಾಂಚೈಸ್‌ಗಳು: ದೆಹಲಿ ವೇವ್‌ರೈಡಸ್, ಉತ್ತರ ಪ್ರದೇಶ ವಿಜಾರ್ಡ್ಸ್, ಮುಂಬೈ ಮ್ಯಾಜಿಷಿಯನ್ಸ್, ಪಂಜಾಬ್ ವಾರಿಯರ್ಸ್, ರಾಂಚಿ ರಿನೋಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.