ADVERTISEMENT

ಸರ್ಬಿಯಾಗೆ ಮರಳಿ ಅರಳುವ ನಿರೀಕ್ಷೆ

ವಿಶ್ವಕಪ್: ಶುಭಾರಂಭದ ಭರವಸೆಯಲ್ಲಿ ಕೋಸ್ಟ ರಿಕಾ

ಏಜೆನ್ಸೀಸ್
Published 16 ಜೂನ್ 2018, 19:35 IST
Last Updated 16 ಜೂನ್ 2018, 19:35 IST
ಕೋಸ್ಟ ರಿಕಾದ ಸೆಲ್ಸೊ ಬೋರ್ಜೆಸ್ ಸಹ ಆಟಗಾರರ ಜೊತೆ ಶನಿವಾರ ಅಭ್ಯಾಸ ನಡೆಸಿದರು. ಎಎಫ್‌ಪಿ ಚಿತ್ರ
ಕೋಸ್ಟ ರಿಕಾದ ಸೆಲ್ಸೊ ಬೋರ್ಜೆಸ್ ಸಹ ಆಟಗಾರರ ಜೊತೆ ಶನಿವಾರ ಅಭ್ಯಾಸ ನಡೆಸಿದರು. ಎಎಫ್‌ಪಿ ಚಿತ್ರ   

ಸಮಾರ, ರಷ್ಯಾ (ರಾಯಿಟರ್ಸ್‌): ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ‘ಇ’ ಗುಂಪಿನ ಪಂದ್ಯದಲ್ಲಿ ಭಾನುವಾರ ಸರ್ಬಿಯಾ ಮತ್ತು ಕೋಸ್ಟ ರಿಕಾ ತಂಡಗಳು ಸೆಣಸಲಿವೆ.

ಎಂಟು ವರ್ಷಗಳಿಂದ ಹೇಳಿಕೊಳ್ಳಬಲ್ಲ ಸಾಧನೆ ಮಾಡದೇ ಇರುವ ಸರ್ಬಿಯಾ 2010ರ ನಂತರ ಇದೇ ಮೊದಲ ಬಾರಿ ವಿಶ್ವಕಪ್‌ನಲ್ಲಿ ಆಡುತ್ತಿರುವ ಸರ್ಬಿಯಾದ ಮುಂದೆ ಅಸ್ತಿತ್ವದ ಪ್ರಶ್ನೆಇದೆ. ಆರಂಭಿಕ ಪಂದ್ಯದಲ್ಲಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಛಲದಲ್ಲಿ ತಂಡವಿದೆ.

1998ರಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು ಬಿಟ್ಟರೆ ಉಳಿದಂತೆ ವಿಶ್ವಕಪ್‌ನಲ್ಲಿ ಗುಂಪು ಹಂತದಿಂದ ಮುಂದೆ ಸಾಗಲು ಸರ್ಬಿಯಾ ತಂಡಕ್ಕೆ ಸಾಧ್ಯವಾಗಲಿಲ್ಲ. ಆದರೆ 2015ರಲ್ಲಿ 20 ವರ್ಷದೊಳಗಿನವರ ವಿಶ್ವಕಪ್‌ ಪ್ರಶಸ್ತಿ ಗೆದ್ದ ನಂತರ ತಂಡದಲ್ಲಿ ಹೊಸ ಭರವಸೆ ಮೂಡಿದೆ. ಈ ಕಾರಣದಿಂದ ಈ ಬಾರಿ ಉತ್ತಮ ಸಾಮರ್ಥ್ಯ ತೋರುವ ವಿಶ್ವಾಸ ಹೊಂದಿದೆ.

ADVERTISEMENT

ಮಿಲಿಂಕೊವಿಚ್ ಸ್ಯಾವಿಂಕ್‌, ನೆಮಾಂಜ ಮ್ಯಾಟಿಕ್‌, ಡುಸಾನ್ ಟಾಡಿಕ್‌ ಮತ್ತು ಗ್ರೂಜಿಕ್‌ ಅವರಂಥ ಅತ್ಯುತ್ತಮ ಆಟಗಾರರನ್ನು ಹೊಂದಿರುವುದರಿಂದ ತಂಡಕ್ಕೆ ಹೊಸ ಚೇತನ ತುಂಬಿದಂತಾಗಿದೆ. ಆದರೆ ವಿಶ್ವ ಫುಟ್‌ಬಾಲ್‌ನ ಬಲಿಷ್ಠ ರಕ್ಷಣಾ ವಿಭಾಗವನ್ನು ಹೊಂದಿರುವ ತಂಡಗಳಲ್ಲಿ ಒಂದು ಎಂದು ಹೇಳಲಾಗುವ ಕೋಸ್ಟ ರಿಕಾದ ಮುಂದೆ ಈ ತಂಡ ಯಾವ ತಂತ್ರಗಳನ್ನು ಹೆಣೆಯಲಿದೆ ಎಂಬುದು ಕುತೂಹಲ ಕೆರಳಿಸಿದೆ. ವಿಶ್ವಕಪ್‌ನ ಅರ್ಹತಾ ಸುತ್ತಿನ 10 ಪಂದ್ಯಗಳಲ್ಲಿ ಕೋಸ್ಟರಿಕಾ ಕೇವಲ ಎಂಟು ಗೋಲುಗಳನ್ನು ಬಿಟ್ಟುಕೊಟ್ಟಿದೆ.

ಕೋಚ್‌ ಜೊತೆ ವಾಗ್ವಾದ ನಡೆಸಿ ತಂಡದ ಆಡಳಿತದ ಕೆಂಗಣ್ಣಿಗೆ ಗುರಿಯಾಗಿದ್ದ ಮಿಲಿಂಕೋವಿಚ್‌ ಸ್ಯಾವಿಕ್‌ ಕೊನೆಗೂ ತಂಡಕ್ಕೆ ಮರಳಿದ್ದಾರೆ. ಇದರಿಂದ ಸರ್ಬಿಯಾಗೆ ಆನೆ ಬಲ ಬಂದಂತಾಗಿದೆ. ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಜುವೆಂಟಸ್‌ ಒಳಗೊಂಡಂತೆ ಯುರೋಪನ್‌ ಪ್ರಮುಖ ಕ್ಲಬ್‌ಗಳಲ್ಲಿ ಆಡಿರುವ ಸ್ಯಾವಿಕ್‌ ಯುರೋಪಾ ಲೀಗ್‌ನಲ್ಲಿ ಅಮೋಘ ಆಟ ಆಡಿ ಗಮನ ಸೆಳೆದಿದ್ದಾರೆ. ರಾಷ್ಟ್ರೀಯ ತಂಡದ ಪರ ಕೇವಲ ಮೂರು ಪಂದ್ಯಗಳನ್ನು ಆಡಿರುವ 23 ವರ್ಷದ ಈ ಆಟಗಾರ ತಂಡದ ಮಿಡ್‌ಫೀಲ್ಡ್‌ ವಿಭಾಗದ ಭರವಸೆಯಾಗಿದ್ದಾರೆ.

ಕೋಚ್‌ ಬದಲಾವಣೆ: ಸರ್ಬಿಯಾ ಈ ಬಾರಿ ವಿಶ್ವಕಪ್‌ಗೆ ಅರ್ಹತೆ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ಲಾವೋನ್‌ಜಬ್‌ ಮಸ್ಲಿನ್ ಅವರನ್ನು ಅವರ ತರಬೇತಿಯ ಶೈಲಿ ಸರಿ ಇಲ್ಲ ಎಂದು ವಜಾ ಮಾಡಿರುವ ತಂಡದ ಆಡಳಿತದ ಸ್ಟಾಜಿಕ್ ಅಮಿದ್ ಅವರ ಹೆಗಲಿಗೆ ಕೋಚ್‌ ಹೊಣೆಯನ್ನು ಹೊರಿಸಿದೆ.

ಪ್ರಬಲ ಪೈಪೋಟಿ ನಿರೀಕ್ಷೆ: ಕಳೆದ ಬಾರಿ ಬ್ರೆಜಿಲ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಕೋಸ್ಟರಿಕಾ ಕೂಡ ಮೊದಲ ಪಂದ್ಯದಲ್ಲಿ ಗೆದ್ದು ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಲು ಹಾತೊರೆಯುತ್ತಿದೆ. ಆದ್ದರಿಂದ ಈ ಪಂದ್ಯದಲ್ಲಿ ಪ್ರಬಲ ಪೈಪೋಟಿಯನ್ನು ನಿರೀಕ್ಷಿಸಲಾಗಿದೆ. ಈ ಪಂದ್ಯದಲ್ಲಿ ಗೆದ್ದರೆ ತಂಡ ವಿಶ್ವಕಪ್‌ನಲ್ಲಿ ನಿರಂತರ ಆರು ಪಂದ್ಯಗಳಲ್ಲಿ ಸೋಲದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.