ADVERTISEMENT

ಸವಾಲನ್ನು ಸಮರ್ಥವಾಗಿ ಎದುರಿಸುವೆ

​ಪ್ರಜಾವಾಣಿ ವಾರ್ತೆ
Published 9 ಮೇ 2012, 19:30 IST
Last Updated 9 ಮೇ 2012, 19:30 IST
ಸವಾಲನ್ನು ಸಮರ್ಥವಾಗಿ ಎದುರಿಸುವೆ
ಸವಾಲನ್ನು ಸಮರ್ಥವಾಗಿ ಎದುರಿಸುವೆ   

ಬೆಂಗಳೂರು: `ತಂಡ ಸಂಕಷ್ಟದಲ್ಲಿದೆ ಎನ್ನುವುದು ತಿಳಿದ ವಿಷಯ. ಈ ಸಂದರ್ಭದಲ್ಲಿ ಮಹತ್ವದ ಜವಾಬ್ದಾರಿ ಲಭಿಸಿದೆ. ಎಲ್ಲಾ ಸವಾಲನ್ನು ಸಮರ್ಥವಾಗಿ ಎದುರಿಸುತ್ತೇನೆ...~

-ಹೀಗೆ ಹೇಳಿದ್ದು ಎಚ್‌ಎಎಲ್ ಫುಟ್‌ಬಾಲ್ ತಂಡದ ನೂತನ ತಾಂತ್ರಿಕ ಮ್ಯಾನೇಜರ್ ಚಂದ್ರಶೇಖರ್. `ಚಾಮರಾಜಪೇಟೆ ಚಂದ್ರು~ ಎಂದೇ ಖ್ಯಾತಿಯಾಗಿರುವ ಅವರು `ಪ್ರಜಾವಾಣಿ~ ಯೊಂದಿಗೆ ಮಾತನಾಡಿದರು.

`ವಿದೇಶಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ನಮ್ಮ ಮುಂದಿರುವ ಮೊದಲ ಯೋಚನೆ. ಸ್ಥಳೀಯ ಆಟಗಾರರ ಆಟದ ನೈಪುಣ್ಯತೆಯನ್ನು ಹೆಚ್ಚಿಸುವುದರ ಜೊತೆಗೆ ಜೀವನ ಭದ್ರತೆಯ ಬಗ್ಗೆಯೂ ಕಾಳಜಿ ವಹಿಸುತ್ತೇವೆ~ ಎಂದು ಅವರು ಹೇಳಿದರು.

`ಆಟಗಾರರ ಆಯ್ಕೆಯಲ್ಲಿ ಪಾರದರ್ಶಕತೆ ಅನುಸರಿಸುತ್ತೇವೆ. ಇಲ್ಲವಾದರೆ, ಬಲಿಷ್ಠ ತಂಡ ಕಟ್ಟಲು ಸಾಧ್ಯವಾಗುವುದಿಲ್ಲ. ಕಳಪೆ ಪ್ರದರ್ಶನದಿಂದ ಟೀಕೆಗೆ ಗುರಿಯಾಗಿರುವ ಎಚ್‌ಎಎಲ್ ಉತ್ತಮ ಪ್ರದರ್ಶನ ನೀಡಲು ಕೆಲ ಕಾಲ ಬೇಕಾಗುತ್ತದೆ. ತಂಡದಲ್ಲಿ ಶೇ. 80ರಷ್ಟು ಬದಲಾವಣೆ ಅಗತ್ಯವಿದೆ~ ಎಂದು ಚಂದ್ರಶೇಖರ್ ಅಭಿಪ್ರಾಯ ಪಟ್ಟಿದ್ದಾರೆ.

ಎಚ್‌ಎಎಲ್ ತಂಡಕ್ಕೆ ಚಂದ್ರಶೇಖರ್ ನೇಮಕ
ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಸ್ಪೋರ್ಟ್ಸ್ ಕ್ಲಬ್ (ಎಚ್‌ಎಎಲ್) ತಂಡಕ್ಕೆ ನೂತನ ತಾಂತ್ರಿಕ ಮ್ಯಾನೇಜರ್ ಆಗಿ ತಂಡದ ಮಾಜಿ ನಾಯಕ ಚಂದ್ರಶೇಖರ್ ನೇಮಕವಾಗಿದ್ದಾರೆ.
1992ರಿಂದ 2005ರ ವರೆಗೆ ಚಂದ್ರಶೇಖರ್ ಇದೇ ತಂಡಕ್ಕೆ ಕೋಚ್ ಆಗಿ ಕೆಲಸ ನಿರ್ವಹಿಸಿದ್ದರು. ವಾಲಿಬಾಲ್ ಪ್ಯಾರಾಲಿಂಪಿಕ್ಸ್ ತಂಡದ ಕೋಚ್ ಹಾಗೂ ಪ್ಯಾರಾಲಿಂಪಿಕ್ಸ್ ಸಮಿತಿಯ ಅಧ್ಯಕ್ಷರೂ ಆಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಿಡ್ ಫೀಲ್ಡರ್ ಆಗಿದ್ದ ಚಂದ್ರಶೇಖರ್ ಕೋಚಿಂಗ್ ಬಗ್ಗೆ ಮಾಲ್ಡೀವ್‌ನಲ್ಲಿ ತರಬೇತಿ ಪಡೆದು ಬಂದಿದ್ದಾರೆ.



ಈ ಸಲದ ಐ ಲೀಗ್ ಟೂರ್ನಿಯಲ್ಲಿ ಎಚ್‌ಎಎಲ್ ಕಳಪೆ ಪ್ರದರ್ಶನ ನೀಡಿ ಎರಡನೇ ಡಿವಿಷನ್‌ಗೆ ಹಿಂಬಡ್ತಿ ಪಡೆದಿದೆ. ಅಷ್ಟೇ ಅಲ್ಲ, ಐ ಲೀಗ್‌ನಲ್ಲಿ ಒಟ್ಟು 26 ಪಂದ್ಯಗಳನ್ನು ಆಡಿ ಕೇವಲ ಎರಡರಲ್ಲಿ ಮಾತ್ರ ಗೆಲುವು ಗಳಿಸಿದೆ. ಆದ್ದರಿಂದ ಫುಟ್‌ಬಾಲ್ ಆಟಗಾರರು ಹಾಗೂ ಕ್ರೀಡಾ ಪ್ರೇಮಿಗಳಿಂದ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಆದ್ದರಿಂದ ಎಚ್‌ಎಎಲ್ ಆಡಳಿತ ಮಂಡಳಿ ಈ ಬದಲಾವಣೆ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.