ADVERTISEMENT

ಸಾಮರ್ಥ್ಯದ ಜೊತೆಗೆ ಅದೃಷ್ಟವೂ ಬೇಕು

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 19:30 IST
Last Updated 19 ಜುಲೈ 2012, 19:30 IST

ಲಂಡನ್ (ಪಿಟಿಐ): ಒಲಿಂಪಿಕ್‌ನಂಥ ದೊಡ್ಡ ಕ್ರೀಡಾಕೂಟದಲ್ಲಿ ಪದಕ ಗೆಲ್ಲಲು ಸಾಮರ್ಥ್ಯ ಇದ್ದರೂ ಅದರ ಜೊತೆಗೆ ಅದೃಷ್ಟದ ಬಲವೂ ಬೇಕು.-ಹೀಗೆಂದು ಹೇಳಿದ್ದು ಲಂಡನ್‌ನಲ್ಲಿ ಪದಕ ಗೆಲ್ಲುವ ಆಶಯ ಹೊಂದಿರುವ ಶೂಟಿಂಗ್ ಸ್ಪರ್ಧಿ ರೊಂಜನ್ ಸೋಧಿ.

ಸ್ಪರ್ಧೆ ಸಂದರ್ಭದಲ್ಲಿ ಇಲ್ಲಿನ ವಾತಾವರಣ ಹಾಗೂ ಶೂಟಿಂಗ್ ರೇಂಜ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ನೆಪ ಹೇಳುವಂತೆಯೇ ಇಲ್ಲ. ಯಾವುದೇ ವಾತಾವರಣ ಇದ್ದರೂ ಅದಕ್ಕೆ ಹೊಂದಿಕೊಂಡು ಗುರಿ ಇಡಬೇಕು. ಲಂಡನ್‌ನಲ್ಲಿನ ತಣ್ಣನೆಯ ಗಾಳಿಯು ಶೂಟರ್‌ಗಳಿಗೆ ಖಂಡಿತ ಸವಾಲಾಗುತ್ತದೆ. ಆದರೆ ಅದು ಪ್ರದರ್ಶನ ಮಟ್ಟ ಕಡಿಮೆ ಆಗಲು ಕಾರಣವೆಂದು ದೂರಲಾಗದೆಂದು ಅವರು ಹೇಳಿದರು.

`ಲಂಡನ್‌ನ ಸಹಜ ಪ್ರಕೃತಿಯು ಸ್ಪರ್ಧಿಸುವ ಎಲ್ಲರ ಮೇಲೂ ಪರಿಣಾಮ ಮಾಡುತ್ತದೆ. ಆದ್ದರಿಂದ ಪ್ರದರ್ಶನ ಮಟ್ಟವನ್ನು ಕಾಯ್ದುಕೊಳ್ಳಲು ಅದರಿಂದ ತೊಡಕು ಎನ್ನಲು ಸಾಧ್ಯವಿಲ್ಲ~ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಇಲ್ಲಿನ ಕ್ರೀಡಾಗ್ರಾಮವನ್ನು ತಲುಪಿರುವ ಸೋಧಿ `ಶೂಟಿಂಗ್ ಸ್ಪರ್ಧೆಯಲ್ಲಿ ದೀರ್ಘ ಕಾಲದಿಂದ ಇದ್ದೇನೆ. 2009ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದೆ.

ವಿಶ್ವಕಪ್‌ನಲ್ಲಿ ಕೂಡ ಅಗ್ರಸ್ಥಾನ ಪಡೆದಿದ್ದೆ. ಆದ್ದರಿಂದ ಸ್ಪರ್ಧೆಯ ಸಂದರ್ಭದಲ್ಲಿ ಏನಾಗುತ್ತದೆ ಎನ್ನುವ ಅನುಭವವಿದೆ. ಕೆಲವೊಮ್ಮೆ ವಿಶ್ವದ ಅತ್ಯಂತ ಶ್ರೇಷ್ಠ ಶೂಟರ್‌ಗಳಿಗೂ ಮಹತ್ವದ ದಿನದಂದು ಅದೃಷ್ಟ ಕೈಕೊಡುತ್ತದೆ. ಆದ್ದರಿಂದಲೇ ಸಾಮರ್ಥ್ಯದ ಜೊತೆಗೆ ಅದೃಷ್ಟದ ಬಲವೂ ಬೇಕೆಂದು ನಾನು ಹೇಳಿದ್ದು~ ಎಂದು ವಿವರಿಸಿದರು.

ಒಲಿಂಪಿಕ್ಸ್ ಶೂಟಿಂಗ್ ಸ್ಪರ್ಧೆಗಳು ನಡೆಯುವ ರಾಯಲ್ ಆರ್ಟಿಲರಿ ಬ್ಯಾರೆಕ್ಸ್ ರೇಂಜ್ ಬಗ್ಗೆ ಕೇಳಿದ್ದಕ್ಕೆ `ಉತ್ತಮವಾಗಿದೆ. ಅಲ್ಲಿಗೆ ಹೋಗಿ ವಾತಾವರಣವನ್ನು ಅನುಭವಿಸಿ ಬಂದಿದ್ದೇನೆ. ಇಲ್ಲಿಗೆ ಬರುವುದಕ್ಕೆ ಮುನ್ನ ಇದ್ದ ಕುತೂಹಲ ಈಗಿಲ್ಲ. ಎಲ್ಲವೂ ಸಹಜ ಎನಿಸಿದೆ~ ಎಂದ ಅವರು `ನಾನೀಗ ಒಲಿಂಪಿಕ್ ಸಂಭ್ರಮವನ್ನು ಅನುಭವಿಸುತ್ತಿದ್ದೇನೆ. ಕ್ರೀಡಾ ಗ್ರಾಮದಲ್ಲಿರುವ ಪ್ರತಿಯೊಂದು ಕ್ಷಣವೂ ಸ್ಮರಣೀಯವಾಗಿ ಉಳಿಯಬೇಕು ಎನ್ನುವುದು ನನ್ನ ಆಶಯ~ ಎಂದು ತಿಳಿಸಿದರು.

ಕ್ರೀಡಾ ಗ್ರಾಮಕ್ಕೆ ಭಾರತೀಯ ಅಥ್ಲೀಟ್‌ಗಳು
ಲಂಡನ್ (ಪಿಟಿಐ): ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಶೂಟರ್‌ಗಳಾದ ಸಂಜೀವ್ ರಜಪುತ್, ಶಗುಣ್ ಚೌದ್ರಿ ಮತ್ತು ಅಧಿಕಾರಿಗಳ ತಂಡ ಬುಧವಾರ ಸಂಜೆ ಕ್ರೀಡಾಗ್ರಾಮಕ್ಕೆ ಆಗಮಿಸಿತು.
ಶೂಟರ್‌ಗಳು ಕ್ರೀಡಾಗ್ರಾಮದಲ್ಲಿ ಕೆಲ ಹೊತ್ತು ಸುತ್ತಾಡಿದರು.

ಭಾರತ ಅಥ್ಲೀಟ್‌ಗಳ ಜೊತೆಗೆ ಬಂದಿರುವ ವೈದ್ಯಕೀಯ ತಂಡದಲ್ಲಿರುವ ಹರಪಾಲ್ ಸಿಂಗ್ ಬೇಡಿ, ಡಾ. ಸರಳಾರಾವ್,     ಡಾ. ಸಂಜೊಗೀತಾ ಸೂಡನ್ ಮತ್ತು ಫಿಸಿಯೋ ರಮೇಶ್ ತ್ರಿವೇದಿ ಅವರೂ ಕ್ರೀಡಾಗ್ರಾಮಕ್ಕೆ ಬಂದಿದ್ದಾರೆ.

ಭಾರತ ಬಿಲ್ಲುಗಾರಿಕೆ ತಂಡ ಅಭ್ಯಾಸ ನಡೆಸಲು `ಕ್ರಿಕೆಟ್ ಕಾಶಿ~ ಲಾರ್ಡ್ಸ್ ಕ್ರೀಡಾಂಗಣದತ್ತ ತೆರಳಿತು. ಶೂಟರ್‌ಗಳು ಹಾಗೂ ವೇಟ್‌ಲಿಫ್ಟರ್‌ಗಳು ಸಹ ಅಭ್ಯಾಸ ನಡೆಸಲು ಆರಂಭಿಸಿದ್ದಾರೆ.
`ಇಲ್ಲಿನ ವಾತಾವರಣ ಹೇಗಿರುತ್ತದೆ ಎಂದು ಉಹಿಸಲು ಆಗುವುದಿಲ್ಲ. ಏಕೆಂದರೆ, ಕೆಲ ಸಲ ತುಂತುರು ಮಳೆ ಬರುತ್ತದೆ. ಇನ್ನೂ ಕೆಲ ಸಲ ಸಾಕಷ್ಟು ಬಿಸಿಲು ಇರುತ್ತದೆ. ಆದ್ದರಿಂದ ಇದೊಂದು ವಿಭಿನ್ನ ಅನುಭವ.

ವಾತಾವರಣದಲ್ಲಿ ಏರುಪೇರು ಆಗುತ್ತದೆ. ಆದ್ದರಿಂದ ಬೇಗನೇ ಹೊಂದಿಕೊಳ್ಳುವುದು ಸುಲಭವಲ್ಲ~ ಎಂದು ಡೆಪ್ಯುಟಿ ಚೆಫ್ ಡಿ ಮಿಷೆನ್ ಬ್ರಿಗೇಡಿಯರ್ ಪಿ.ಕೆ. ಮುರಳೀಧರನ್ ರಾಜಾ ಹೇಳಿದ್ದಾರೆ.
`ಈಗಾಗಲೇ ಬೇರೇ ಬೇರೇ ರಾಷ್ಟ್ರಗಳ ಸಾಕಷ್ಟು ಅಥ್ಲೀಟ್‌ಗಳು ಹಾಗೂ ಅಧಿಕಾರಿಗಳು ಕ್ರೀಡಾಗ್ರಾಮಕ್ಕೆ ಬಂದಿದ್ದಾರೆ.

ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಯತ್ನಿಸುತ್ತಿದ್ದಾರೆ~ ಎಂದೂ ಅವರು ನುಡಿದರು. ಶೂಟರ್ ಅಭಿನವ್ ಬಿಂದ್ರಾ, ಬಿಲ್ಲುಗಾರಿಕೆ ತಂಡ ಮತ್ತು ನಾಲ್ಕು ಸದಸ್ಯರನ್ನೊಳಗೊಂಡ ವೇಟ್‌ಲಿಫ್ಟಿಂಗ್ ತಂಡ ಮೂರು ದಿನಗಳ ಹಿಂದೆಯೇ ಕ್ರೀಡಾಗ್ರಾಮಕ್ಕೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.