ADVERTISEMENT

ಸಿಂಧು ಶುಭಾರಂಭ

ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 19:59 IST
Last Updated 18 ಸೆಪ್ಟೆಂಬರ್ 2013, 19:59 IST

ಟೋಕಿಯೊ (ಪಿಟಿಐ): ಪಿ.ವಿ. ಸಿಂಧು ಮತ್ತು ಅಜಯ್‌ ಜಯರಾಮ್‌ ಒಳಗೊಂಡಂತೆ ಭಾರತದ ಐವರು ಸ್ಪರ್ಧಿಗಳು ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತು ಪ್ರವೇಶಿಸಿದರು.

ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು 21–12, 21–13 ರಲ್ಲಿ ಸ್ಥಳೀಯ ಸ್ಪರ್ಧಿ ಯುಕಿನೊ ನಕಾಯ್‌ ಎದುರು ಸುಲಭ ಗೆಲುವು ಪಡೆದರು. ಎರಡನೇ ಸುತ್ತಿನ ಪಂದ್ಯದಲ್ಲಿ  ಅವರು ಜಪಾನ್‌ನವರೇ ಆದ ಅಕಾನೆ ಯಮಗುಚಿ ವಿರುದ್ಧ ಪೈಪೋಟಿ ನಡೆಸುವರು.

ಆನಂದ್‌ ಪವಾರ್‌ ಮತ್ತು ಕೆ. ಶ್ರೀಕಾಂತ್‌  ವಿಶ್ವ ರ‍್ಯಾಂಕಿಂಗ್ ನಲ್ಲಿ ತಮಗಿಂತ ಮೇಲಿನ ಸ್ಥಾನದಲ್ಲಿರುವ ಎದುರಾಳಿಗಳಿಗೆ ಆಘಾತ ಉಂಟು ಮಾಡಿದರು. ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಪವಾರ್‌ 21–17, 7–21, 21–18 ರಲ್ಲಿ ಇಂಡೊನೇಷ್ಯದ ಸೋನಿ ದ್ವಿ ಕುನ್ಸೊರೊ ವಿರುದ್ಧ ಗೆದ್ದರು. 2004ರ ಅಥೆನ್ಸ್‌ ಒಲಿಂಪಿಕ್ಸ್‌ನ ಕಂಚಿನ ಪದಕ ವಿಜೇತ ಕುನ್ಸೊರೊ ವಿಶ್ವ ರ್‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿದ್ದಾರೆ.

ಪ್ರಸಕ್ತ ವಿಶ್ವ ರ್‍್ಯಾಂಕಿಂಗ್‌ನಲ್ಲಿ 37ನೇ ಸ್ಥಾನದಲ್ಲಿರುವ ಪವಾರ್‌ ಒಂದು ಗಂಟೆಯ ಹೋರಾಟದ ಬಳಿಕ ಪಂದ್ಯ ತಮ್ಮದಾಗಿಸಿಕೊಂಡರು. ಕುನ್ಸೊರೊ 2007 ಹಾಗೂ 2009ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದರು.

ಶ್ರೀಕಾಂತ್‌ 22–20, 22–24, 21–18 ರಲ್ಲಿ ವಿಶ್ವದ 22ನೇ ರ‍್ಯಾಂಕ್ ನ ಆಟಗಾರ ಜಪಾನ್‌ನ ಶೊ ಸಸಾಕಿ ವಿರುದ್ಧ ಪ್ರಯಾಸದ ಜಯ ಸಾಧಿಸಿದರು. ಈ ಪಂದ್ಯ ಒಂದು ಗಂಟೆ ಎಂಟು ನಿಮಿಷಗಳ ಕಾಲ ನಡೆಯಿತು.

ಎಚ್‌.ಎಸ್‌. ಪ್ರಣೋಯ್‌ 15–21, 21–17, 24–22 ರಲ್ಲಿ ಹಾಂಕಾಂಗ್‌ನ ವಿಂಗ್ ಕಿ ವೊಂಗ್‌ ಅವರನ್ನು ಪರಾಭವಗೊಳಿಸಿದರು. ಪ್ರಬಲ ಪೈಪೋಟಿ ಕಂಡುಬಂದ ಪಂದ್ಯ ಒಂದು ಗಂಟೆ ಏಳು ನಿಮಿಷಗಳ ಕಾಲ ನಡೆಯಿತು. ಅಜಯ್‌ ಜಯರಾಮ್‌ 21–11, 21–18 ರಲ್ಲಿ ಚೀನಾ ತೈಪೆಯ ತಿಯಾನ್‌ ಚೆನ್‌ ಚೌ ವಿರುದ್ಧ ಗೆಲುವು ಪಡೆದರು.

ಆದರೆ ಸೌರಭ್‌ ವರ್ಮಾ, ಸಾಯಿ ಪ್ರಣೀತ್‌ ಮತ್ತು ತನ್ವಿ ಲಾಡ್‌ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು. ಜಪಾನ್‌ನ ಜುನ್‌ ತಕೆಮುರಾ 22–24, 21–19, 21–14 ರಲ್ಲಿ ಸೌರಭ್‌ ವಿರುದ್ಧ ಗೆದ್ದರೆ, ಹಾಂಕಾಂಗ್‌ನ ಯುನ್‌ ಹು 23–21, 21–18 ರಲ್ಲಿ ಪ್ರಣೀತ್‌ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.