ADVERTISEMENT

ಸಿಂಧು ಹೋರಾಟಕ್ಕೆ ಬೆಳ್ಳಿಯ ಬೆಡಗು

ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ರಜತ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ಮೊದಲ ಭಾರತೀಯ ಮಹಿಳೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2016, 20:39 IST
Last Updated 19 ಆಗಸ್ಟ್ 2016, 20:39 IST
ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ  ಭಾರತದ  ಪಿ.ವಿ. ಸಿಂಧು   ಪ್ರಜಾವಾಣಿ ಚಿತ್ರ/ ಕೆ.ಎನ್. ಶಾಂತಕುಮಾರ್
ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಪಿ.ವಿ. ಸಿಂಧು ಪ್ರಜಾವಾಣಿ ಚಿತ್ರ/ ಕೆ.ಎನ್. ಶಾಂತಕುಮಾರ್   

ರಿಯೊ ಡಿ ಜನೈರೊ: ಹೈದರಾಬಾದಿನ  ಪಿ.ವಿ. ಸಿಂಧು ಅವರಿಗೆ ಶುಕ್ರವಾರ ರಾತ್ರಿ ಒಲಿಂಪಿಕ್ಸ್‌ ಅಂಗಳದಲ್ಲಿ ಚಿನ್ನದ ಪದಕ ಒಲಿಯಲಿಲ್ಲ. ಆದರೆ ಇತಿಹಾಸದ ಪುಟಗಳಲ್ಲಿ ಅವರ ಹೆಸರು ಸುವರ್ಣಾಕ್ಷರಗಳಲ್ಲಿ ದಾಖಲಾಯಿತು.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರಥಮ ಬ್ಯಾಡ್ಮಿಂಟನ್ ಆಟಗಾರ್ತಿಯೆಂಬ ಹೆಗ್ಗಳಿಕೆಗೆ ಪುಸರ್ಲಾ ವೆಂಕಟ ಸಿಂಧು ಪಾತ್ರರಾದರು.
ಕೋಟ್ಯಂತರ ಅಭಿಮಾನಿಗಳ ಎದೆಬಡಿತವನ್ನು ಇಮ್ಮಡಿಸಿದ್ದ ಫೈನಲ್‌  ಪಂದ್ಯದಲ್ಲಿ  ವಿಶ್ವ ಚಾಂಪಿಯನ್ ಆಟಗಾರ್ತಿ ಸ್ಪೇನ್‌ನ ಕ್ಯಾರೊಲಿನಾ ಅವರ ಎದುರು ಸಿಂಧು ಅವರ ಹೋರಾಟ ಸಾಕಾಗಲಿಲ್ಲ.

23 ವರ್ಷದ ಅನುಭವಿ ಕ್ಯಾರೊಲಿನಾ   ಮೊದಲ ಸೆಟ್‌ನಲ್ಲಿ ಸೋತರೂ  ನಂತರ ಪುಟಿದೆದ್ದರು. 21 ವರ್ಷದ ಸಿಂಧು ಮೊದಲ ಸೆಟ್‌ನಲ್ಲಿ ಕ್ಯಾರೊಲಿನಾ ಅವರ ಪೈಪೋಟಿಯನ್ನು ದಿಟ್ಟವಾಗಿ ಎದುರಿಸಿದರು. ದೀರ್ಘ ರ್‌್ಯಾಲಿಗಳನ್ನು  ಕಂಡ ಗೇಮ್‌ನಲ್ಲಿ ನೆಟ್‌ ಬಳಿಯ ಆಟದಲ್ಲಿ ಸಿಂಧು ಮಿಂಚಿದರು.  ಬೆಸ್‌ಲೈನ್‌ನತ್ತ ಶಟಲ್ ಹೊಡೆಯುತ್ತಿದ್ದ ಸಿಂಧು ತಮ್ಮ ಎದುರಾಳಿಯ ಮೇಲೆ ಒತ್ತಡ ಹಾಕಿ ಗೆದ್ದರು.

ಆದರೆ, ನಂತರದ ಎರಡೂ ಸೆಟ್‌ಗಳಲ್ಲಿ ತಾಳ್ಮೆಯ ಆಟವಾಡಿದ  ಎಡಗೈ ಆಟಗಾರ್ತಿ ಕ್ಯಾರೊಲಿನಾ   ಅವರು   ಕ್ರಾಸ್‌ ಕೋರ್ಟ್ ಹೊಡೆತಗಳ ಮೂಲಕ ಸಿಂಧು ದಣಿಯುವಂತೆ ಮಾಡಿದರು. ಇದರಿಂದಾಗಿ ರಿಟರ್ನ್‌ಗಳಲ್ಲಿಯೇ ಸಿಂಧು ಹೆಚ್ಚು ಅಂಕ ಕಳೆದುಕೊಂಡರು.
  
ನಿರ್ಣಾಯಕ ಸೆಟ್‌ ಆರಂಭದಲ್ಲಿ ಕ್ಯಾರೊಲಿನಾ ಆರಂಭಿಕ ಮುನ್ನಡೆ ಸಾಧಿಸಿದ್ದರು. ಸಿಂಧು ತಮ್ಮ ಚುರುಕಾದ ಸ್ಮ್ಯಾಷ್ ಮತ್ತು  ಹಿಂಗೈ ಹೊಡೆತಗಳ ಮೂಲಕ ಪಾಯಿಂಟ್‌ಗಳನ್ನು ಗಳಿಸಿ 10–10ರ ಸಮಬಲ ಸಾಧಿಸಿದರು.  ಆದರೆ      ಕ್ಯಾರೋಲಿನಾ ತಾಳ್ಮೆ ಕಳೆದುಕೊಳ್ಳಲಿಲ್ಲ. ವೇಗದ ಆಟಕ್ಕೆ ಒತ್ತು ನೀಡಿದರು. ಮುನ್ನಡೆ ಸಾಧಿಸಿ ಸಿಂಧು ಮೇಲೆ ಒತ್ತಡ ಹೆಚ್ಚಿಸಿದರು. ಒಲಿಂಪಿಕ್ಸ್‌ನಲ್ಲಿ ತಮ್ಮ ಮೊದಲ ಚಿನ್ನದ ಪದಕ ಗೆದ್ದು  ಆನಂದ ಭಾಷ್ಪ ಸುರಿಸಿದರು.

ಭಾವೋದ್ವೇಗಕ್ಕೆ ಒಳಗಾದ ಕ್ಯಾರೊಲಿನಾ   ಕೋರ್ಟ್‌ಗೆ ಹಣೆ ಹಚ್ಚಿ ಮಲಗಿದರು. ಅವರ ಬಳಿ ಬಂದ  ಸಿಂಧು  ಕ್ಯಾರೊಲಿನಾ ಅವರನ್ನು ಆತ್ಮೀಯವಾಗಿ ಎಬ್ಬಿಸಿ ಅಭಿನಂದಿಸಿದರು.   ಭಾರತ ತಂಡದ ಕೋಚ್ ಪುಲ್ಲೇಲ ಗೋಪಿಚಂದ್ ಕೂಡ ಸ್ಪೇನ್ ಆಟಗಾರ್ತಿಯನ್ನು ಅಭಿನಂದಿಸಿದರು.

ವಿಜಯ ವೇದಿಕೆಯ ಮೇಲೆ ಚಿನ್ನದ ಪದಕ ಧರಿಸಿದ್ದ ಕ್ಯಾರೊಲಿನಾ ಅವರ ಕಂಗಳಿಂದ ಹರ್ಷಧಾರೆ ನಿಂತಿರಲಿಲ್ಲ. ಬೆಳ್ಳಿ ಪದಕ ಧರಿಸಿದ್ದ ಸಿಂಧು ಮುಗುಳ್ನಗೆ ಬೀರುತ್ತ ಅಭಿಮಾನಿಗಳತ್ತ ಕೈಬೀಸಿದರು.

ಪಿ.ವಿ. ಸಿಂಧು ಅವರಿಗೆ ₹ 50 ಲಕ್ಷ ನಗದು ಪುರಸ್ಕಾರ ನೀಡುವುದಾಗಿ ಭಾರತ ಬ್ಯಾಡ್ಮಿಂಟನ್ ಸಂಸ್ಥೆಯು (ಬಿಎಐ)  ಘೋಷಿಸಿದೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್ ಅವರು ಒಂದು ಕೋಟಿ ನೀಡುವುದಾಗಿದೆ ಘೋಷಿಸಿದ್ದಾರೆ. ಸಿಂಧು ಸಾಧನೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಸಚಿನ್ ತೆಂಡೂಲ್ಕರ್‌ ಸೇರಿದಂತೆ ಖ್ಯಾತನಾಮರು ಅಭಿನಂದನೆ ಸಲ್ಲಿಸಿದ್ದಾರೆ.

* ನಾನು ಚಿನ್ನ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಈ ಸಾಧನೆಯ ಬಗ್ಗೆ ಹೆಮ್ಮೆಯಿದೆ.  ಕುಸ್ತಿಯಲ್ಲಿ ಸಾಕ್ಷಿ ಕಂಚು ಗೆದ್ದರು, ಇವತ್ತು ನಾನು ಬೆಳ್ಳಿ ಗೆದ್ದೆ. ನಮ್ಮಿಬ್ಬರ ಶ್ರಮಕ್ಕೆ ತಕ್ಕ ಫಲ ದೊರೆತಿದೆ.
-ಪಿ.ವಿ. ಸಿಂಧು

ಮುಖ್ಯಾಂಶಗಳು
*  ಒಲಿಂಪಿಕ್ಸ್‌ ಬ್ಯಾಡ್ಮಿಂಟನ್ ಸಿಂಗಲ್ಸ್ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಆಟಗಾರ್ತಿ
* ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಲಿದ ಎರಡನೇ ಪದಕ
* ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಕಂಚು ಗೆದ್ದಿದ್ದ ಸಿಂಧು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.