ADVERTISEMENT

ಸಿಕ್ಸರ್ ಸಿಡಿಸಿದ ಅರುಣ್ ಕಾರ್ತಿಕ್ ಹೀರೊ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೆ ಕೊನೆಯ ಎಸೆತದಲ್ಲಿ ಆರು ರನ್‌ಗಳು ಬೇಕಿದ್ದವು. ಕ್ರೀಸ್‌ನಲ್ಲಿದ್ದದ್ದು ಅರುಣ್ ಕಾರ್ತಿಕ್. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದು ಕ್ಷಣ ಮೌನ ನೆಲೆಸಿತ್ತು. ಎರಡೂ ತಂಡಗಳ ಆಟಗಾರರಲ್ಲಿ ಒತ್ತಡ, ಕಾತರ. ಪ್ರೇಕ್ಷಕರು ಉಸಿರು ಬಿಗಿಹಿಡಿದು ನಿಂತಿದ್ದರು.

ಸೌತ್ ಆಸ್ಟ್ರೇಲಿಯಾ ರೆಡ್‌ಬ್ಯಾಕ್ಸ್ ತಂಡದ ಡೇನಿಯಲ್ ಕ್ರಿಸ್ಟಿಯನ್ ಅಂತಿಮ ಎಸೆತಕ್ಕಾಗಿ ಸಜ್ಜಾಗಿ ನಿಂತರು. ಕೆಲವು ಸಹ ಆಟಗಾರರು ಪ್ರೋತ್ಸಾಹದ ಮಾತುಗಳ ಮೂಲಕ ಕ್ರಿಸ್ಟಿಯನ್‌ಗೆ ಮನೋಬಲ ತುಂಬಿದರು. ಅವರು ಓಡೋಡಿ ಬಂದು ಎಸೆದ ಚೆಂಡನ್ನು ಅರುಣ್ ಅಟ್ಟಿದ್ದು ಸಿಕ್ಸರ್‌ಗೆ!

ಆರ್‌ಸಿಬಿಗೆ ಒಲಿಯಿತು ಅದ್ಭುತ, ರೋಮಾಂಚಕ ಗೆಲುವು. ಕ್ರೀಡಾಂಗಣದಲ್ಲಿ ಸಂಭ್ರಮದ ಕಟ್ಟೆಯೊಡೆಯಿತು. ಸೌತ್ ಆಸ್ಟ್ರೇಲಿಯ ಆಟಗಾರರಿಗೆ ಆಘಾತ, ನಿರಾಸೆ. ರಣಜಿ ಕ್ರಿಕೆಟ್‌ನಲ್ಲಿ ತಮಿಳುನಾಡು ತಂಡವನ್ನು ಪ್ರತಿಧಿನಿಸುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅರುಣ್ ಒಂದೇ ರಾತ್ರಿಯಲ್ಲಿ `ಹೀರೊ~ ಆಗಿ ಮೆರೆದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ರೋಚಕ ಗೆಲುವು ಪಡೆಯುವ ಮೂಲಕ ಆರ್‌ಸಿಬಿ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ಗೆ ಮುನ್ನಡೆಯಿತು.

ಮೊದಲು ಬ್ಯಾಟ್ ಮಾಡಿದ ಸೌತ್ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 214 ರನ್ ಪೇರಿಸಿದಾಗ ಆರ್‌ಸಿಬಿಯ ಕತೆ ಮುಗಿಯಿತು ಎಂದೇ ಭಾವಿಸಲಾಗಿತ್ತು. ಆದರೆ ಅಸಾಮಾನ್ಯ ಬ್ಯಾಟಿಂಗ್ ತೋರಿದ ಡೇನಿಯಲ್ ವೆಟೋರಿ ಬಳಗ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 215 ರನ್ ಗಳಿಸಿ ಸ್ಮರಣೀಯ ಜಯ ಪಡೆಯಿತು.

ಪಂದ್ಯದ ಕೊನೆಯಲ್ಲಿ ಅರುಣ್‌ಗೆ `ಹೀರೊ~ ಪಟ್ಟ ಲಭಿಸಿದರೂ, ಆರ್‌ಸಿಬಿ ಗೆಲುವಿನ ಶ್ರೇಯ `ಪಂದ್ಯಶ್ರೇಷ್ಠ~ ವಿರಾಟ್ ಕೊಹ್ಲಿ (70, 36 ಎಸೆತ, 4 ಬೌಂ, 6 ಸಿಕ್ಸರ್) ಮತ್ತು ತಿಲಕರತ್ನೆ ದಿಲ್ಶಾನ್‌ಗೆ (74, 47 ಎಸೆತ, 9 ಬೌಂ, 2 ಸಿಕ್ಸರ್) ಸಲ್ಲಬೇಕು. ಇವರ ಸಿಡಿಲಬ್ಬರದ ಬ್ಯಾಟಿಂಗ್‌ನ ಕಾರಣ ಅಸಾಧ್ಯ ಎನ್ನಬಹುದಾದ ಗುರಿ ಮುಟ್ಟಿದರು.

ಕೊನೆಯ ಓವರ್‌ನಲ್ಲಿ ಗೆಲುವಿಗೆ 14 ರನ್‌ಗಳ ಅವಶ್ಯತೆಯಿತ್ತು. ಕ್ರಿಸ್ಟಿಯನ್‌ರ ಓವರ್‌ನ ಮೊದಲ ಎಸೆತದಲ್ಲಿ ಒಂದು ರನ್ ಗಳಿಸಿದ ಸಯ್ಯದ್ ಮೊಹಮ್ಮದ್ ಎರಡನೇ ಎಸೆತದಲ್ಲಿ ರನೌಟ್ ಆದರು. ಕ್ರೀಸ್‌ಗೆ ಬಂದ ಅರವಿಂದ್ ಮೂರನೇ ಎಸೆತದಲ್ಲಿ ಬೌಂಡರಿ ಗಿಟ್ಟಿಸಿದರೆ, ನಾಲ್ಕನೇ ಎಸೆತದಲ್ಲಿ ಎರಡು ರನ್ ಗಳಿಸಿದರು.

ಐದನೇ ಎಸೆತದಲ್ಲಿ `ಬೈ~ ರೂಪದಲ್ಲಿ ಒಂದು ರನ್ ಬಂತು. ಇದರಿಂದ ಅಂತಿಮ ಎಸೆತದಲ್ಲಿ ಆರು ರನ್‌ಗಳು ಬೇಕಿದ್ದವು. ಕ್ರಿಸ್ಟಿಯನ್ ಕೊನೆಯ ಓವರ್‌ನಲ್ಲಿ ಅದುವರೆಗೂ ನಿಧಾನಗತಿ ಎಸೆತಗಳನ್ನು ಹಾಕಿದ್ದರು. ಇದರಿಂದ ಅರುಣ್ ಮತ್ತೊಂದು ನಿಧಾನಗತಿ ಎಸೆತವನ್ನು ನಿರೀಕ್ಷಿಸಿ ಸಜ್ಜಾಗಿ ನಿಂತರು. ಅವರ ಲೆಕ್ಕಾಚಾರ ತಪ್ಪಲಿಲ್ಲ. ನಿಧಾನವಾಗಿ ಬಂದ ಚೆಂಡನ್ನು ಮಿಡ್‌ವಿಕೆಟ್ ಮೇಲಿಂದ ಸಿಕ್ಸರ್‌ಗೆ ಅಟ್ಟಿದರು.

ಆರ್‌ಸಿಬಿ ಆಟಗಾರರು ಮೈದಾನದ ಮಧ್ಯದಲ್ಲಿ ಗೆಲುವಿನ ನೃತ್ಯ ಮಾಡಿದರೆ, ಕ್ರಿಸ್ಟಿಯನ್ ಒಳಗೊಂಡಂತೆ ಸೌತ್ ಆಸ್ಟ್ರೇಲಿಯಾ ತಂಡದವರು ಸೋಲಿನ ಆಘಾತದಿಂದ ಹೊರಬರಲು ಹರಸಾಹಸಪಟ್ಟರು. 

ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಟ್ವೆಂಟಿ-20 ಕ್ರಿಕೆಟ್‌ನ ಸಂಪೂರ್ಣ ಸೌಂದರ್ಯ ಹೊರಹೊಮ್ಮಿತು. 40 ಓವರ್‌ಗಳಲ್ಲಿ ಒಟ್ಟು 429 ರನ್‌ಗಳು ಹರಿಯಿತು. ಕೆಲವೊಂದು ಅದ್ಭುತ ವೈಯಕ್ತಿಕ ಪ್ರದರ್ಶನ ಮೂಡಿಬಂತು.

ಕೊಹ್ಲಿ ಮತ್ತು ದಿಲ್ಶಾನ್ ನಡುವಿನ ಜೊತೆಯಾಟ ಪಂದ್ಯದ `ಹೈಲೈಟ್~ ಎನಿಸಿತು. ಇವರು ಎರಡನೇ ವಿಕೆಟ್‌ಗೆ 8.5 ಓವರ್‌ಗಳಲ್ಲಿ 100 ರನ್‌ಗಳನ್ನು ಸೇರಿಸಿದ್ದು ಪಂದ್ಯದ ಗತಿಯನ್ನೇ ಬದಲಿಸಿತು. ದಿಲ್ಶಾನ್ ಮತ್ತು ಕ್ರಿಸ್ ಗೇಲ್ (26, 15 ಎಸೆತ, 3 ಸಿಕ್ಸರ್) ಮೊದಲ ವಿಕೆಟ್‌ಗೆ 6.1 ಓವರ್‌ಗಳಲ್ಲಿ 65 ರನ್ ಸೇರಿಸಿ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು.

ಸೌತ್ ಆಸ್ಟ್ರೇಲಿಯಾ ತಂಡದ `ಶತಕವೀರ~ ಡೇನಿಯಲ್ ಹ್ಯಾರಿಸ್ (ಅಜೇಯ 108, 61 ಎಸೆತ, 17 ಬೌಂ, 2 ಸಿಕ್ಸರ್), ಕಾಲಮ್ ಫರ್ಗ್ಯುಸನ್ (70, 43 ಎಸೆತ, 4 ಬೌಂ, 3 ಸಿಕ್ಸರ್) ಮತ್ತು ಶಾನ್ ಟೇಟ್ (32ಕ್ಕೆ 5) ಸೋಲಿನ ನಡುವೆಯೂ ಮಿಂಚಿದರು. ಒಬ್ಬ ಆಟಗಾರ ಶತಕ ಗಳಿಸಿ, ಇನ್ನೊಬ್ಬ ಐದು ವಿಕೆಟ್ ಪಡೆದ ಸಾಧನೆ ಮಾಡಿದರೂ ಸೋಲು ಎದುರಾದದ್ದು ಈ ತಂಡದ `ದುರಂತ~ ಎನ್ನಬೇಕು.

ಶಾನ್ ಟೇಟ್ 19ನೇ ಓವರ್‌ನಲ್ಲಿ ಸೌತ್ ಆಸ್ಟ್ರೇಲಿಯಾ ತಂಡದ ಗೆಲುವಿನ ಸಾಧ್ಯತೆ ಹೆಚ್ಚಿಸಿದ್ದರು. ಆ ಓವರ್‌ನಲ್ಲಿ ಕೇವಲ ನಾಲ್ಕು ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು. ಆದರೆ ಖಚಿತವಾಗಿದ್ದ ಗೆಲುವು ಅಂತಿಮ ಎಸೆತದಲ್ಲಿ ಕೈಜಾರಿ ಹೋಯಿತು.

ಸ್ಕೋರ್ ವಿವರ
ಸೌತ್ ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 2 ವಿಕೆಟ್‌ಗೆ 214
ಡೇನಿಯಲ್ ಹ್ಯಾರಿಸ್ ಔಟಾಗದೆ  108
ಮೈಕಲ್ ಕ್ಲಿಂಗರ್ ಸಿ ಅರುಣ್ ಬಿ ಸಯ್ಯದ್ ಮೊಹಮ್ಮದ್  07
ಕಾಲಮ್ ಫರ್ಗ್ಯುಸನ್ ಸಿ ಅರುಣ್ ಬಿ ರಾಜು ಭಟ್ಕಳ್  70
ಡೇನಿಯಲ್ ಕ್ರಿಸ್ಟಿಯನ್ ಔಟಾಗದೆ  27
ಇತರೆ: (ಬೈ-1, ನೋಬಾಲ್-1 )  02
ವಿಕೆಟ್ ಪತನ: 1-54 (ಕ್ಲಿಂಗರ್; 5.1), 2-168 (ಫರ್ಗ್ಯುಸನ್; 17.4)
ಬೌಲಿಂಗ್: ಡರ್ಕ್ ನಾನೆಸ್ 4-0-49-0, ಎಸ್. ಅರವಿಂದ್ 4-0-69-0, ಡೇನಿಯಲ್ ವೆಟೋರಿ 4-0-24-0, ಸಯ್ಯದ್ ಮೊಹಮ್ಮದ್ 4-0-29-1, ರಾಜು ಭಟ್ಕಳ್ 3-0-31-1, ವಿರಾಟ್ ಕೊಹ್ಲಿ 1-0-11-0

ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 215
ಕ್ರಿಸ್ ಗೇಲ್ ಸಿ ಕ್ಲಿಂಗರ್ ಬಿ ಡೇನಿಯಲ್ ಕ್ರಿಸ್ಟಿಯನ್  26
ತಿಲಕರತ್ನೆ ದಿಲ್ಶಾನ್ ಬಿ ಶಾನ್ ಟೇಟ್  74
ವಿರಾಟ್ ಕೊಹ್ಲಿ ಸಿ ಬಾರ್ಗಸ್ ಬಿ ಶಾನ್ ಟೇಟ್  70
ಸೌರಭ್ ತಿವಾರಿ ಸಿ ಬಾರ್ಗಸ್ ಬಿ ಶಾನ್ ಟೇಟ್  09
ಮಯಾಂಕ್ ಅಗರ್‌ವಾಗ್ ಸಿ ಹ್ಯಾರಿಸ್ ಬಿ ಆ್ಯರನ್ ಒಬ್ರಿಯನ್  06
ಡೇನಿಯಲ್ ವೆಟೋರಿ ಸಿ ಪುಟ್‌ಲ್ಯಾಂಡ್ (ಸಬ್) ಬಿ ಶಾನ್ ಟೇಟ್  08
ರಾಜು ಭಟ್ಕಳ್ ಬಿ ಶಾನ್ ಟೇಟ್  01
ಅರುಣ್ ಕಾರ್ತಿಕ್ ಔಟಾಗದೆ  06
ಸಯ್ಯದ್ ಮೊಹಮ್ಮದ್ ರನೌಟ್  02
ಎಸ್. ಅರವಿಂದ್ ಔಟಾಗದೆ  06
ಇತರೆ: (ಬೈ-1, ಲೆಗ್‌ಬೈ-1, ವೈಡ್-4, ನೋಬಾಲ್-1) 07
ವಿಕೆಟ್ ಪತನ: 1-65 (ಗೇಲ್; 6.1), 2-165 (ಕೊಹ್ಲಿ; 14.6), 3-183 (ತಿವಾರಿ; 16.6), 4-190 (ಮಯಾಂಕ್; 17.3), 5-199 (ದಿಲ್ಶಾನ್; 18.2), 6-200 (ವೆಟೋರಿ; 18.4), 7-200 (ರಾಜು; 18.5), 8-202 (ಸಯ್ಯದ್; 19.2)
ಬೌಲಿಂಗ್: ಶಾನ್ ಟೇಟ್ 4-0-32-5, ನಥಾನ್ ಲಿಯೊನ್ 3-0-25-0, ಕೇನ್ ರಿಚರ್ಡ್ಸನ್ 3-0-34-0, ಡೇನಿಯಲ್ ಕ್ರಿಸ್ಟಿಯನ್ 4-0-44-1, ಆ್ಯರನ್ ಒಬ್ರಿಯನ್ 4-0-44-1, ಡೇನಿಯಲ್ ಹ್ಯಾರಿಸ್ 2-0-34-0
ಫಲಿತಾಂಶ: ರಾಯಲ್ ಚಾಲೆಂಜರ್ಸ್‌ಗೆ 2 ವಿಕೆಟ್ ಜಯ
ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.