ADVERTISEMENT

ಸುಲ್ತಾನ್ ಆಫ್ ಜೊಹರ್ ಕಪ್ ಹಾಕಿ ಟೂರ್ನಿ: ಭಾರತಕ್ಕೆ ಎರಡನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2012, 19:30 IST
Last Updated 18 ನವೆಂಬರ್ 2012, 19:30 IST

ಜೊಹರ್ ಬಾಹ್ರು, ಮಲೇಷ್ಯಾ (ಪಿಟಿಐ): ಭಾರತದ ಜೂನಿಯರ್ ತಂಡದವರು ಇಲ್ಲಿ ನಡೆದ ಸುಲ್ತಾನ್ ಆಫ್ ಜೊಹರ್ ಕಪ್ ಹಾಕಿ ಟೂರ್ನಿಯಲ್ಲಿ ರನ್ನರ್‌ಅಪ್ ಸ್ಥಾನಕ್ಕೇ ತೃಪ್ತಿ ಪಡುವಂತಾಯಿತು. ಭಾನುವಾರ ನಡೆದ ಫೈನಲ್‌ನಲ್ಲಿ ಜರ್ಮನಿ ತಂಡದವರು 3-2 ಗೋಲುಗಳಿಂದ ಭಾರತವನ್ನು ಸೋಲಿಸಿ ಟ್ರೋಫಿಯನ್ನು ಎತ್ತಿಕೊಂಡರು.

ಲೀಗ್ ಹಂತದಲ್ಲಿ ಅಜೇಯವಾಗುಳಿದು ಪ್ರಶಸ್ತಿಗೆ ನೆಚ್ಚಿನ ತಂಡದಂತೆ ಕಂಡು ಬಂದಿದ್ದ ಭಾರತ ನಿರ್ಣಾಯಕ ಹಂತದಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರುವಲ್ಲಿ ವೈಫಲ್ಯ ಕಂಡಿತು. ಲೀಗ್ ಹಂತದ ಒಂದು ಪಂದ್ಯದಲ್ಲಿ ಜರ್ಮನಿ ವಿರುದ್ಧವೇ 3-1ರಿಂದ ಗೆದ್ದಿದ್ದ ಭಾರತದ ಆಟಗಾರರು ಫೈನಲ್‌ನಲ್ಲಿ ಅತ್ಯಂತ ಸುಲಭ ಅವಕಾಶಗಳಲ್ಲೆಲ್ಲಾ ಎಡವಿ ಎದುರಾಳಿಯ ಗೆಲುವಿಗೆ ಹಾದಿ ಮಾಡಿಕೊಟ್ಟರು.

ಆಟ ಶುರುವಾದ 11ನೇ ನಿಮಿಷದಲ್ಲಿ ಜರ್ಮನಿಗೆ ಸಿಕ್ಕಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಜೊನಾಸ್ ಗೊಮೊಲ್ ಗೋಲಿನ ಖಾತೆ ತೆರೆದರು. ಆದರೆ 24ನೇ ನಿಮಿಷದಲ್ಲಿ ಸತ್‌ಬೀರ್ ಸಿಂಗ್ ಗೋಲುಗಳ ಅಂತರವನ್ನು ಸಮಗೊಳಿಸಿದರು.

ಇದೇ ವೇಳೆ ಜರ್ಮನಿಯ ಗೋಲ್‌ಕೀಪರ್ ವಿಕ್ಟರ್ ಭಾರತೀಯರ ಗೋಲು ಗಳಿಸುವ ಕೆಲವು ಉತ್ತಮ ಯತ್ನಗಳನ್ನು ವಿಫಲಗೊಳಿಸಿದರು. 30ನೇ ನಿಮಿಷದಲ್ಲಿ ಜರ್ಮನಿಗೆ ಸಿಕ್ಕಿದ ಇನ್ನೊಂದು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಜೋಶುವ ಡೆಲರ್‌ಬರ್ ಗುರಿ ಮುಟ್ಟಿಸಿ ಅಂತರವನ್ನು 2-1ಕ್ಕೆ ಏರಿಸಿದರು.

ಫ್ಲೋರೇನ್ ಆಡ್ರಿನ್ಸ್ 49ನೇ ನಿಮಿಷದಲ್ಲಿ 3ನೇ ಗೋಲು ತಂದಿತ್ತರು. ನಂತರ ಗೋಲು ಗಳಿಸಲು ಭಾರತ ಸತತ ಯತ್ನಗಳನ್ನು ನಡೆಸಿತಾದರೂ, ಆಟ ಮುಗಿಯಲು 3 ನಿಮಿಷಗಳಿದ್ದಾಗ ಆಕಾಶ್‌ದೀಪ್ ಒಂದು ಗೋಲು ಗಳಿಸಲಷ್ಟೇ ಶಕ್ತರಾದರು. ಇನ್ನೊಂದು ಪಂದ್ಯದಲ್ಲಿ ಪಾಕಿಸ್ತಾನವನ್ನು 3-2 ಗೋಲುಗಳಿಂದ ಸೋಲಿಸಿದ ಆಸ್ಟ್ರೇಲಿಯ ಮೂರನೇ ಸ್ಥಾನ ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT