ADVERTISEMENT

ಸೆಮಿಫೈನಲ್‌ಗೆ ಪಾಕಿಸ್ತಾನ ಲಗ್ಗೆ

ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿ ಎದುರಾಳಿಗಳಿಗೆ ಜಯದ ಕಾಣಿಕೆ ನೀಡಿದ ಶ್ರೀಲಂಕಾ

​ಪ್ರಜಾವಾಣಿ ವಾರ್ತೆ
Published 12 ಜೂನ್ 2017, 19:32 IST
Last Updated 12 ಜೂನ್ 2017, 19:32 IST
ಶ್ರೀಲಂಕಾ ವಿರುದ್ಧದ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಮೂರು ವಿಕೆಟ್‌ ಪಡೆದ ಪಾಕಿಸ್ತಾನದ ಜುನೈದ್‌ ಖಾನ್‌ (ಎಡದಿಂದ ಮೂರನೇಯವರು) ಸಹ ಆಟಗಾರರ ಜೊತೆ ಸಂಭ್ರಮಿಸಿದರು  ಎಎಫ್‌ಪಿ ಚಿತ್ರ
ಶ್ರೀಲಂಕಾ ವಿರುದ್ಧದ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಮೂರು ವಿಕೆಟ್‌ ಪಡೆದ ಪಾಕಿಸ್ತಾನದ ಜುನೈದ್‌ ಖಾನ್‌ (ಎಡದಿಂದ ಮೂರನೇಯವರು) ಸಹ ಆಟಗಾರರ ಜೊತೆ ಸಂಭ್ರಮಿಸಿದರು ಎಎಫ್‌ಪಿ ಚಿತ್ರ   

ಕಾರ್ಡಿಫ್‌:  ಸಾಧಾರಣ ಮೊತ್ತ ಬೆನ್ನತ್ತಿದರೂ ಆತಂಕದ ಕ್ಷಣಗಳನ್ನು ಎದುರಿಸಿದ ಪಾಕಿಸ್ತಾನ ಒತ್ತಡ ಮೆಟ್ಟಿ ನಿಂತು ಜಯ ತನ್ನದಾಗಿಸಿಕೊಂಡಿತು. ಈ ಮೂಲಕ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ ಹಂತ ಪ್ರವೇಶಿಸಿತು.

ಇಲ್ಲಿನ ಸೋಫಿಯಾ ಗಾರ್ಡನ್ಸ್‌ನಲ್ಲಿ ಸೋಮವಾರ ನಡೆದ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಶ್ರೀಲಂಕಾವನ್ನು ಪಾಕಿಸ್ತಾನ ಮೂರು ವಿಕೆಟ್‌ಗಳಿಂದ ಮಣಿಸಿತು. ಮೂರು ಕ್ಯಾಚ್‌ಗಳನ್ನು ಕೈಚೆಲ್ಲಿ, ರನೌಟ್ ಅವಕಾಶಗಳನ್ನು ಸದುಪ ಯೋಗ ಮಾಡಿಕೊಳ್ಳದೇ ಇದ್ದದ್ದು ಮತ್ತು ವೈಡ್ ಎಸೆತಗಳ ಮೂಲಕ ಹೆಚ್ಚು ವರಿ ರನ್‌ ಬಿಟ್ಟುಕೊಟ್ಟದ್ದು ಶ್ರೀಲಂಕಾಗೆ ಮುಳುವಾಯಿತು. 

237 ರನ್‌ಗಳ ಜಯದ ಗುರಿ ಬೆನ್ನತ್ತಿದ ಪಾಕಿಸ್ತಾನ ಉತ್ತಮ ಆರಂಭ ಕಂಡರೂ ನಂತರ ಆತಂಕಕ್ಕೆ ಒಳ ಗಾಯಿತು. ಅಜರ್‌ ಅಲಿ ಮತ್ತು ಫಕ್ರ್ ಜಮಾನ್‌ ಮೊದಲ ವಿಕೆಟ್‌ಗೆ 68 ಎಸೆತಗಳಲ್ಲಿ 74 ರನ್ ಸೇರಿಸಿ ಇನಿಂಗ್ಸ್‌ಗೆ ಉತ್ತಮ ಅಡಿಪಾಯ ಹಾಕಿದರು.

ADVERTISEMENT

ಮಾಲಿಂಗ ಹಾಕಿದ ಮೊದಲ ಓವರ್‌ನಲ್ಲೇ ಗುಣತಿಲಕ ಅವರಿಂದ ಜೀವದಾನ ಪಡೆದ ಅಜರ್ ಅಲಿ ತಾಳ್ಮೆಯಿಂದ ಆಡಿ 50 ಎಸೆತಗಳಲ್ಲಿ 34 ರನ್‌ ಗಳಿಸಿದರು. ಆದರೆ  ಜಮಾನ್‌ ಸ್ಫೋಟಿಸಿದರು. 36 ಎಸೆತಗಳಲ್ಲಿ ಒಂದು ಸಿಕ್ಸರ್‌ ಮತ್ತು ಎಂಟು ಬೌಂಡರಿ ಒಳ ಗೊಂಡ 50 ರನ್‌ ಗಳಿಸಿದರು. ಇವರ ಜೊತೆಯಾಟ ಮುರಿದು ಬಿದ್ದ ನಂತರ ತಂಡ ನಿರಂತರವಾಗಿ ವಿಕೆಟ್ ಕಳೆದು ಕೊಂಡಿತು. 137 ರನ್‌ ಗಳಿಸುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡ ತಂಡಕ್ಕೆ ನಾಯಕ ಸರ್ಫರಾಜ್ ಅಹಮ್ಮದ್‌ ಮತ್ತು ಫಾಹಿಮ್‌ ಅಶ್ರಫ್‌ ಜೀವ ತುಂಬಿದರು.

ಎಂಟನೇ ವಿಕೆಟ್‌ಗೆ ಇವರಿಬ್ಬರು 25 ರನ್‌ ಸೇರಿಸಿದರು. ಫಾಹಿಮ್‌ ರನೌಔಟ್‌ ಆದಾಗ ಶ್ರೀಲಂಕಾ ಪಾಳಯದಲ್ಲಿ ಸಂಭ್ರಮ ಅಲೆದಾಡಿತು. ಈ ಸಂತಸಕ್ಕೆ ಸರ್ಫರಾಜ್‌ (ಔಟಾಗದೆ 61; 79 ಎ, 5 ಬೌಂ) ಮತ್ತು ಮಹಮ್ಮದ್ ಅಮೀರ್‌ ತಣ್ಣೀರೆರಚಿದರು. ಎಂಟನೇ ವಿಕೆಟ್‌ಗೆ 90 ಎಸೆತಗಳಲ್ಲಿ 75 ರನ್‌ ಸೇರಿಸಿದ ಇವರು ಜಯ ಕಸಿದುಕೊಂಡರು. ಇವರ ಜೊತೆಯಾಟದ ನಿರ್ಣಾಯಕ ಹಂತದಲ್ಲಿ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದ ಶ್ರೀಲಂಕಾ ಇದಕ್ಕೆ ತಕ್ಕ ಫಲ ಉಂಡಿತು.

ಬೌಲರ್‌–ಬ್ಯಾಟ್ಸ್‌ಮನ್‌ ಸಮಬಲದ ಹೋರಾಟ: ಟಾಸ್‌ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ದುಕೊಂಡಿತು. ಆರಂಭಿಕ ಬ್ಯಾಟ್ಸ್‌ಮನ್ ನಿರೋಷನ್ ಡಿಕ್ವೆಲಾ ಅವರ ಅರ್ಧಶತಕ ಮತ್ತು ನಾಯಕ ಏಂಜಲೊ ಮ್ಯಾಥ್ಯೂಸ್‌ ಅವರ ತಾಳ್ಮೆಯ 39 ರನ್‌ ಶ್ರೀಲಂಕಾ ಇನಿಂಗ್ಸ್‌ಗೆ ಬಲ ತುಂಬಿತು. ಮಹಮ್ಮದ್ ಅಮೀರ್‌, ಜುನೈದ್‌ ಖಾನ್‌, ಫಾಹಿಮ್ ಅಶ್ರಫ್‌ ಮತ್ತು ಹಸನ್ ಅಲಿ ಪಾಕಿಸ್ತಾನ ಬೌಲಿಂಗ್‌ಗೆ ಮೊನಚು ನೀಡಿದರು.

ನಿರೋಷನ್ ಮತ್ತು ಧನುಷ್ಕಾ ಆರಂಭದಲ್ಲೇ ವೇಗವಾಗಿ ರನ್ ಗಳಿಸಲು ಪ್ರಯತ್ನಿಸಿದರು. ಆದರೆ ಆರನೇ ಓವರ್‌ನಲ್ಲಿ ಎಡಗೈ ವೇಗಿ ಜುನೈದ್ ಖಾನ್‌ 13 ರನ್‌ ಗಳಿಸಿದ್ದ ಗುಣತಿಲಕ ಅವರನ್ನು ವಾಪಸ್ ಕಳುಹಿಸಿದರು. ಡಿಕ್ವೆಲಾ ಜೊತೆಗೂಡಿದ ಕುಶಾಲ್ ಮೆಂಡಿಸ್‌  ನಿಧಾನವಾಗಿ ಇನಿಂಗ್ಸ್ ಕಟ್ಟಿ ದರು. ಹತ್ತು ಓವರ್‌ಗಳ ಮುಕ್ತಾಯದ ವೇಳೆಗೆ ಇವರಿಬ್ಬರು ತಂಡದ ಮೊತ್ತವನ್ನು 50ಕ್ಕೆ ಏರಿಸಿದರು.

50 ರನ್‌ಗಳ ಜೊತೆಯಾಟದ ನಂತರ ಮೆಂಡಿಸ್ ಔಟಾದರು. ಎರಡು ಎಸೆತಗಳ ಅಂತರದಲ್ಲಿ ದಿನೇಶ್‌ ಚಾಂಡಿ ಮಲ್ ಕೂಡ ಔಟಾದರು. ಈ ಸಂದರ್ಭ ದಲ್ಲಿ ಜೊತೆಗೂಡಿದ ಡಿಕ್ವೆಲಾ ಮತ್ತು ನಾಯಕ ಏಂಜೆಲೊ ಮ್ಯಾಥ್ಯೂಸ್‌ ಉತ್ತಮ ಆಟವಾಡಿ ನಾಲ್ಕನೇ ವಿಕೆಟ್‌ಗೆ 78 ರನ್‌ ಸೇರಿಸಿದರು. ಇದರ ಪರಿ ಣಾಮ ತಂಡದ ಮೊತ್ತ 150ರ ಗಡಿ ದಾಟಿತು. 39 ರನ್‌ ಗಳಿಸಿದ ಮ್ಯಾಥ್ಯೂಸ್ ಔಟಾದ ನಂತರವೂ ಡಿಕ್ವೆಲಾ ರನ್‌ ಗಳಿಸುತ್ತ ಸಾಗಿದರು. ಅಷ್ಟರಲ್ಲಿ  ಪಾಕಿ ಸ್ತಾನ ಬೌಲರ್‌ಗಳು ಮೇಲುಗೈ ಸಾಧಿಸಿ ದರು. ಒಂಬತ್ತು ರನ್‌ಗಳ ಅಂತರದಲ್ಲಿ ಡಿಕ್ವೆಲಾ (73; 86 ಎ, 4 ಬೌಂ) ಒಳ ಗೊಂಡಂತೆ ಮೂರು ವಿಕೆಟ್‌ ಕಬಳಿಸಿ ದರು. ಅಸೇಲಾ ಗುಣರತ್ನೆ ಮತ್ತು ಸುರಂಗ ಲಕ್ಮಲ್‌ ಎಂಟನೇ ವಿಕೆಟ್‌ಗೆ 46 ರನ್ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ: 49.2 ಓವರ್‌ಗಳಲ್ಲಿ 236 (ನಿರೋಷನ್‌ ಡಿಕ್ವೆಲಾ 73,  ಏಂಜೆಲೊ ಮ್ಯಾಥ್ಯೂಸ್‌ 39, ಅಸೇಲ ಗುಣರತ್ನೆ 27 ; ಮಹ ಮ್ಮದ್ ಅಮೀರ್‌ 53ಕ್ಕೆ2, ಜುನೈದ್ ಖಾನ್‌ 40ಕ್ಕೆ3, ಫಾಹಿಮ್ ಅಶ್ರಫ್‌ 37ಕ್ಕೆ2, ಹಸನ್‌ ಅಲಿ 43ಕ್ಕೆ3);

ಪಾಕಿಸ್ತಾನ: 44.5 ಓವರ್‌ ಗಳಲ್ಲಿ 7 ವಿಕೆಟ್‌ಗಳಿಗೆ 237 ( ಫಕ್ರ್ ಜಮಾನ್‌ 50, ಸರ್ಫ ರಾಜ್‌ ಅಹಮ್ಮದ್ ಔಟಾಗದೆ 61, ಮಹ ಮ್ಮದ್ ಅಮೀರ್‌ ಔಟಾಗದೆ 28; ನುವಾನ್ ಪ್ರದೀಪ್ 60ಕ್ಕೆ3).  
ಫಲಿತಾಂಶ:  ಪಾಕಿಸ್ತಾನಕ್ಕೆ 3 ವಿಕೆಟ್‌ಗಳ ಜಯ.  
ಪಂದ್ಯಶ್ರೇಷ್ಠ: ಸರ್ಫರಾಜ್ ಅಹಮ್ಮದ್‌ (ಪಾಕಿಸ್ತಾನ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.