ADVERTISEMENT

ಸೆಮಿಫೈನಲ್‌ಗೆ ನೊವಾಕ್, ಪೊಟ್ರೊ

ವಿಂಬಲ್ಡನ್ ಟೆನಿಸ್: ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಸಾನಿಯಾ, ಬೋಪಣ್ಣ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 19:59 IST
Last Updated 3 ಜುಲೈ 2013, 19:59 IST

ಲಂಡನ್ (ರಾಯಿಟರ್ಸ್): ಅಗ್ರ ಶ್ರೇಯಾಂಕದ ಆಟಗಾರ ನೊವಾಕ್ ಜೊಕೊವಿಚ್ ಅವರ ಗೆಲುವಿನ ನಾಗಾಲೋಟ ಮುಂದುವರಿದಿದೆ. ಮತ್ತೊಂದು ಅಮೋಘ ಪ್ರದರ್ಶನದ ಮೂಲಕ ಮಿಂಚು ಹರಿಸಿದ ಸರ್ಬಿಯಾದ ಈ ಆಟಗಾರ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಸೆಂಟರ್ ಕೋರ್ಟ್‌ನಲ್ಲಿ ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜೊಕೊವಿಚ್ 7-6, 6-4, 6-3ರಲ್ಲಿ ಜೆಕ್ ಗಣರಾಜ್ಯದ ಥಾಮಸ್ ಬರ್ಡಿಕ್ ಅವರನ್ನು ಪರಾಭವಗೊಳಿಸಿದರು. ಮೊದಲ ಸೆಟ್ ಹೊರತುಪಡಿಸಿ ಸರ್ಬಿಯಾದ ಆಟಗಾರನಿಗೆ ಯಾವುದೇ ಹಂತದಲ್ಲೂ ಬರ್ಡಿಕ್ ಸವಾಲಾಗಿ ನಿಲ್ಲಲಿಲ್ಲ.

ಆದರೆ ಇದೊಂದು ಕಠಿಣ ಪಂದ್ಯವಾಗಿತ್ತು ಎಂದು ಪಂದ್ಯದ ಬಳಿಕ ನೊವಾಕ್ ನುಡಿದರು. `ಏಳನೇ ಶ್ರೇಯಾಂಕದ ಆಟಗಾರ ಬರ್ಡಿಕ್ ಪ್ರಬಲ ಪೈಪೋಟಿ ನೀಡಿದರು. ಅವರದ್ದು ಶಕ್ತಿಯುತ ಆಟ. ಅದಕ್ಕೆ ಮೊದಲ ಸೆಟ್‌ನಲ್ಲಿ ಮೂಡಿಬಂದ ಪ್ರದರ್ಶನವೇ ಸಾಕ್ಷಿ' ಎಂದು ಅವರು ಹೇಳಿದರು.

ಮೊದಲ ಸೆಟ್‌ನಲ್ಲಿ ಸಮಬಲದ ಪೈಪೋಟಿ ಮೂಡಿಬಂತು. ಈ ಸೆಟ್ ಟೈ ಬ್ರೇಕರ್ ಹಂತ ತಲುಪಿತ್ತು. ಸುದೀರ್ಘ ರ‍್ಯಾಲಿಗಳ ಬಳಿಕ 2011ರ ಚಾಂಪಿಯನ್ ಜೊಕೊವಿಚ್ ಸೆಟ್ ತಮ್ಮದಾಗಿಸಿಕೊಂಡರು.

ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ. ಗಾಯಕ್ಕೆ ಒಳಗಾಗಿದ್ದರೂ ಉತ್ತಮ ಪ್ರದರ್ಶನ ತೋರಿದ ಅವರು 6-2, 6-4, 7-6ರಲ್ಲಿ ಸ್ಪೇನ್‌ನ ಡೇವಿಡ್ ಫೆರೆರ್ ಎದುರು ಗೆಲುವು ಸಾಧಿಸಿದರು.

24 ವರ್ಷ ವಯಸ್ಸಿನ ಪೊಟ್ರೊ ವಿಂಬಲ್ಡನ್‌ನಲ್ಲಿ ಇದೇ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದಾರೆ. ಈ ಪಂದ್ಯದ ನಡುವೆ ಮತ್ತೆ ಎಡಮಂಡಿಗೆ ನೋವು ಮಾಡಿಕೊಂಡರು. ಆ ಹಂತದಲ್ಲಿ ಅವರು ಪಂದ್ಯದಿಂದ ಹಿಂದೆ ಸರಿಯುವ ಯೋಚನೆಯಲ್ಲಿದ್ದರು. ಆದರೆ ಚಿಕಿತ್ಸೆ ಪಡೆದು ಬಂದ ಅಮೆರಿಕಾ ಓಪನ್ ಮಾಜಿ ಚಾಂಪಿಯನ್ ಪೊಟ್ರೊ ಉತ್ತಮ ಪ್ರದರ್ಶನ ತೋರಿದರು.

ನಾಲ್ಕನೇ ಶ್ರೇಯಾಂಕದ ಆಟಗಾರ ಫೆರರ್ ಮೂರನೇ ಸೆಟ್‌ನಲ್ಲಿ ಮಾತ್ರ ಪೊಟ್ರೊಗೆ ಪ್ರಬಲ ಪೈಪೋಟಿಯೊಡ್ಡಿದರು. ಆದರೆ ಟೈ ಬ್ರೇಕರ್ ತಲುಪಿದ ಈ ಸೆಟ್‌ನಲ್ಲಿ ಎಂಟನೇ ಶ್ರೇಯಾಂಕದ ಆಟಗಾರ ಹಿಡಿತ ಸಾಧಿಸಿದರು.

ನಾಲ್ಕರ ಘಟ್ಟಕ್ಕೆ ಫ್ಲಿಪ್‌ಕೆನ್ಸ್: ಇದೇ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದಲ್ಲಿ ಬೆಲ್ಜಿಯಂನ ಕರ್ಸ್ಟನ್ ಫ್ಲಿಪ್‌ಕೆನ್ಸ್ ಹಾಗೂ ಫ್ರಾನ್ಸ್‌ನ ಮರಿಯೋನ್ ಬಾರ್ತೋಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಸೆಂಟ್ರಲ್ ಕೋರ್ಟ್‌ನಲ್ಲಿ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ  ಫ್ಲಿಪ್‌ಕೆನ್ಸ್ 4-6, 6-3, 6-4ರಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೊವಾ ಎದುರು ಗೆದ್ದರು. ಮತ್ತೊಂದು ಪಂದ್ಯದಲ್ಲಿ ಬಾರ್ತೋಲಿ 6-4, 7-5ರಲ್ಲಿ ಅಮೆರಿಕದ ಸ್ಲೊಯಾನೆ ಸ್ಟೀಫನ್ಸ್ ಅವರನ್ನು ಮಣಿಸಿದರು.

ಭಾರತದ ಆಟಗಾರರ ಮುನ್ನಡೆ: ಮಿಶ್ರ ಡಬ ಲ್ಸ್‌ನಲ್ಲಿ ಚೀನಾದ ಜೀ ಜೆಂಗ್ ಜೊತೆಗೂಡಿ ಆಡುತ್ತಿರುವ ರೋಹನ್ ಬೋಪಣ್ಣ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಬೋಪಣ್ಣ ಹಾಗೂ ಜೆಂಗ್ 7-6, 3-6, 6-1ರಲ್ಲಿ ಸ್ವೀಡನ್‌ನ ಜೋಹಾನ್ ಬ್ರನ್ಸ್‌ಟ್ರೋಮ್ ಹಾಗೂ ಹಂಗರಿಯ ಕ್ಯಾಟಲಿನ್ ಮರೋಸಿ ಅವರನ್ನು ಪರಾಭವಗೊಳಿಸಿದರು.

ಸಾನಿಯಾ ಮಿರ್ಜಾ ಹಾಗೂ ರುಮೇನಿಯದ ಹೋರಿಯಾ ಟೆಕೌ ಮಿಶ್ರ ಡಬಲ್ಸ್‌ನ ಮತ್ತೊಂದು ಪಂದ್ಯದಲ್ಲಿ 6-1, 7-5ರಲ್ಲಿ ಅಮೆರಿಕದ ಎರಿಕ್ ಬುಟೊರಕ್ ಹಾಗೂ ಫ್ರಾನ್ಸ್‌ನ ಅಲಿಜ್ ಕಾರ್ನೆಟ್ ಎದುರು ಗೆದ್ದು ಎಂಟರ ಘಟ್ಟ ತಲುಪಿದರು.

ಆದರೆ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ  ಮಹೇಶ್ ಭೂಪತಿ ಹಾಗೂ ಜೂಲಿಯ ನೋಲ್ ಪರಾಭವಗೊಂಡಿದ್ದಾರೆ. ಅವರು 6-7, 6-7, 6-7ರಲ್ಲಿ ಅಮೆರಿಕದ ಸಹೋದರರಾದ ಮೈಕ್ ಹಾಗೂ ಬಾಬ್ ಬ್ರಯಾನ್ ಎದುರು ಸೋಲು ಕಂಡರು. ಮೂರೂ ಸೆಟ್‌ಗಳು ಟೈ ಬ್ರೇಕರ್ ತಲುಪಿದ್ದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.