ADVERTISEMENT

ಸೆಮಿಫೈನಲ್‌ಗೆ ಪೋರ್ಚುಗಲ್

​ಪ್ರಜಾವಾಣಿ ವಾರ್ತೆ
Published 22 ಜೂನ್ 2012, 19:30 IST
Last Updated 22 ಜೂನ್ 2012, 19:30 IST
ಸೆಮಿಫೈನಲ್‌ಗೆ ಪೋರ್ಚುಗಲ್
ಸೆಮಿಫೈನಲ್‌ಗೆ ಪೋರ್ಚುಗಲ್   

ವಾರ್ಸಾ (ಐಎಎನ್‌ಎಸ್): ಕ್ರಿಸ್ಟಿಯಾನೊ ರೊನಾಲ್ಡೊ ಗಳಿಸಿದ್ದು ಅದ್ಭುತ ಗೋಲ್. ಅದರ ನೆರವಿನಿಂದಲೇ ಪೋರ್ಚುಗಲ್ ತಂಡವು ಯೂರೊ-2012 ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ತಲುಪಿದೆ.

ಪ್ರೇಕ್ಷಕರ ಭಾರಿ ಅಬ್ಬರದ ನಡುವೆ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಪೋರ್ಚುಗಲ್ 1-0 ಗೋಲಿನಿಂದ ಜೆಕ್ ಗಣರಾಜ್ಯ ವಿರುದ್ಧ ವಿಜಯ ಸಾಧಿಸಿತು. ಆಗ ಪೋರ್ಚುಗಲ್ ಧ್ವಜ ಕ್ರೀಡಾಂಗಣದ ಒಳಗೆ ಹಾಗೂ ಹೊರಗೆ ಹರಡಿಕೊಂಡವು. ಜೊತೆಗೆ ರೊನಾಲ್ಡೊ... ರೊನಾಲ್ಡೊ... ಎನ್ನುವ ಕೂಗು ಎಲ್ಲೆಡೆ ಮೊಳಗಿತು.

ಜೆಕ್ ಗಣರಾಜ್ಯಕ್ಕೆ ಇದು ಸಹಿಸಲಾಗದ ಆಘಾತ. ದಾಳಿಯಲ್ಲಿ ಬಲವಿದ್ದರೂ ಚೆಂಡನ್ನು ಗುರಿ ಮುಟ್ಟಿಸುವಲ್ಲಿ ಮಾತ್ರ ಈ ತಂಡದವರು ವಿಫಲರಾದರು. ಪೋರ್ಚುಗಲ್‌ಗೆ ಕೂಡ ಗೋಲು ಸುಲಭವಾಗಿಯೇನು ದಕ್ಕಲಿಲ್ಲ. ಅದು ಪಂದ್ಯದ 79ನೇ ನಿಮಿಷದವರೆಗೆ ಕಾಯಬೇಕಾಯಿತು.

ಗೆಲುವಿನ ಈ ಗೋಲು ಗಳಿಸಿದ ರೊನಾಲ್ಡೊ ಪಂದ್ಯದುದ್ದಕ್ಕೂ ಅಂಗಳದಲ್ಲಿ ತೋರಿದ ಮಿಂಚಿನ ಓಟ ಮೆಚ್ಚುವಂಥದು. ಅವರು ಚೆಂಡನ್ನು ಹೆಡ್ ಮಾಡಿ ಗುರಿ ಮುಟ್ಟಿಸಲು ಸಹಕಾರಿ ಆಗಿದ್ದು ಜೊಯಾವೊ ಮೌಟಿನೊ ಅವರ ಆಕರ್ಷಕ ಕ್ರಾಸ್. ಗಾಳಿಯಲ್ಲಿ ತೂರಿ ಬಂದ ಚೆಂಡಿಗೆ ಚುರುಕಾಗಿ ಗೋಲು ಪೆಟ್ಟಿಗೆ ದಾರಿ ತೋರಿಸಿದ್ದು ಮಾತ್ರ ರೊನಾಲ್ಡೊ. ಆಗ ಜೆಕ್ ಗಣರಾಜ್ಯದ ಗೋಲ್ ಕೀಪರ್ ಪೀಟರ್ ಸೆಚ್ ಚೆಂಡನ್ನು ತಡೆಯಲು ಅವಕಾಶವೇ ಇರಲಿಲ್ಲ.

ಈ ಪಂದ್ಯದಲ್ಲಿ ಜೆಕ್ ತಂಡದವರ ಆರಂಭದ ಆರ್ಭಟವನ್ನು ನೋಡಿದಾಗ ಪೋರ್ಚುಗಲ್ ಸಂಕಷ್ಟದ ಸುಳಿಗೆ ಸಿಲುಕುತ್ತದೆ ಎನಿಸಿತ್ತು. ಆದರೆ ಅಂಥ ಅಪಾಯವೇನು ಎದುರಾಗಲಿಲ್ಲ. ವಿಜಯಿ ತಂಡವು ಗಳಿಸಿದ ಆ ಒಂದು ಗೋಲಿನ ಹೊರತಾಗಿ ಮತ್ತೊಮ್ಮೆ ಚೆಂಡು ಗುರಿ ಸೇರುವುದನ್ನು ನೋಡುವ ಅವಕಾಶ ಇಲ್ಲದಾಯಿತು.

ಜೆಕ್ ಗಣರಾಜ್ಯ ವಿರುದ್ಧ ಜಯಿಸಿರುವ ಪೋರ್ಚುಗಲ್ ತಂಡವು ನಾಲ್ಕರ ಘಟ್ಟದಲ್ಲಿ ಯಾರ ವಿರುದ್ಧ ಆಡಲಿದೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಫ್ರಾನ್ಸ್ ಹಾಗೂ ಸ್ಪೇನ್ ನಡುವಣ ಶನಿವಾರ ನಡೆಯುವ ಪಂದ್ಯದ ನಂತರ ಮುಖಾಮುಖಿ ಯಾರೊಂದಿಗೆ ಎನ್ನುವುದು ಖಚಿತವಾಗಲಿದೆ.

ಇಂದಿನ ಪಂದ್ಯ

ಸ್ಪೇನ್-ಫ್ರಾನ್ಸ್

ಭಾರತೀಯ ಕಾಲಮಾನ

ಮಧ್ಯರಾತ್ರಿ 12.15

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.