ADVERTISEMENT

ಸೋಮದೇವ್ ದೇವವರ್ಮನ್‌ಗೆ ನಿರಾಸೆ

ಟೆನಿಸ್: ಕ್ವಾರ್ಟರ್‌ಫೈನಲ್‌ಗೆ ಬೋಪಣ್ಣ ಜೋಡಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 19:59 IST
Last Updated 2 ಆಗಸ್ಟ್ 2013, 19:59 IST

ವಾಷಿಂಗ್ಟನ್ (ಪಿಟಿಐ/ ಐಎಎನ್‌ಎಸ್): ಭಾರತದ ಸೋಮದೇವ್ ದೇವವರ್ಮನ್ ಇಲ್ಲಿ ನಡೆಯುತ್ತಿರುವ ಸಿಟಿ ಓಪನ್ ಟೆನಿಸ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಅನುಭವಿಸಿದರು.

ಗುರುವಾರ ನಡೆದ ಪಂದ್ಯದಲ್ಲಿ ಸೋಮದೇವ್ 5-7, 5-7 ರಲ್ಲಿ ಎಂಟನೇ ಶ್ರೇಯಾಂಕದ ಆಟಗಾರ ಅಮೆರಿಕದ ಜಾನ್ ಇಸ್ನೆರ್ ಕೈಯಲ್ಲಿ ಪರಾಭವಗೊಂಡರು.
ಸೋಮದೇವ್ ಆರು ವರ್ಷಗಳ ಹಿಂದೆ ಅಮೆರಿಕದ ಕಾಲೇಜುಮಟ್ಟದ ಟೂರ್ನಿ ಎನ್‌ಸಿಎಎ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಇಸ್ನರ್ ಅವರನ್ನು ಮಣಿಸಿ ಪ್ರಶಸ್ತಿ ಜಯಿಸಿದ್ದರು. ಆ ಪಂದ್ಯದ ಬಳಿಕ ಇವರಿಬ್ಬರು ಪೈಪೋಟಿ ನಡೆಸಿದ್ದು ಇದೇ ಮೊದಲು.

ಇಸ್ನೆರ್ ಪಂದ್ಯದ ಬಳಿಕ ಭಾರತದ ಆಟಗಾರನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. `ಈ ಪಂದ್ಯ ಕಠಿಣವಾಗಿರಲಿದೆ ಎಂಬುದು ನನಗೆ ತಿಳಿದಿತ್ತು. ಸೋಮದೇವ್ ಒಬ್ಬ ಪ್ರಬಲ ಎದುರಾಳಿ. ನನಗಂತೂ ಅವರು ಎಲ್ಲ ಸಂದರ್ಭಗಳಲ್ಲೂ ಕಠಿಣ ಎದುರಾಳಿಯಾಗಿರುವರು' ಎಂದು ಹೇಳಿದ್ದಾರೆ.

`ಈಗ ನಾನು ಎಟಿಪಿ ಟೂರ್ನಿಗಳಲ್ಲಿ ಸೋಮದೇವ್ ಅವರಿಗಿಂತ ಹೆಚ್ಚಿನ ಸಾಧನೆ ಮಾಡಿರುವುದು ನಿಜ. ಆದರೆ ಎನ್‌ಸಿಎಎ ಸಿಂಗಲ್ಸ್ ಪ್ರಶಸ್ತಿ ಗೆಲ್ಲುವಲ್ಲಿ ನಾನು ವಿಫಲನಾಗಿದ್ದೆ. ಸೋಮದೇವ್‌ಗೆ ಆ ಪ್ರಶಸ್ತಿ ಒಲಿದಿದೆ' ಎಂದು ತಿಳಿಸಿದ್ದಾರೆ.

`ಎನ್‌ಸಿಎಎ ಟೂರ್ನಿಯ ಫೈನಲ್ (2007) ಬಳಿಕ ನಾವು ಮೊದಲ ಬಾರಿಗೆ ಎದುರಾಗಿದ್ದೇವೆ. ಇದು ನಿಜಕ್ಕೂ ಅಚ್ಚರಿ ಉಂಟುಮಾಡಿದೆ. ಅಂದಿನ ಟೂರ್ನಿಯಲ್ಲಿ ನಮ್ಮಂದಿಗೆ ಆಡಿದ್ದ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ಜೊತೆ ಆ ಬಳಿಕ ನಾನು ಒಂಬತ್ತು ಸಲ ಪೈಪೋಟಿ ನಡೆಸಿದ್ದೇನೆ' ಎಂದು ಇಸ್ನರ್ ಇದೇ ವೇಳೆ ನುಡಿದಿದ್ದಾರೆ.
ಭಾರತದ ಆಟಗಾರ ಪ್ರಸಕ್ತ ಎಟಿಪಿ ವಿಶ್ವ ರ‌್ಯಾಂಕಿಂಗ್‌ನಲ್ಲಿ 129ನೇ ಸ್ಥಾನದಲ್ಲಿದ್ದರೆ, ಇಸ್ನೆರ್ 20ನೇ ಸ್ಥಾನ ಹೊಂದಿದ್ದಾರೆ.

ಬೋಪಣ್ಣ ಜೋಡಿಗೆ ಜಯ:
ಜರ್ಮನಿಯ ಆ್ಯಂಡ್ರೆ ಬೆಗೆಮನ್ ಜೊತೆಗೂಡಿ ಆಡುತ್ತಿರುವ ಭಾರತದ ರೋಹನ್ ಬೋಪಣ್ಣ ಅಚ್ಚರಿಯ ಫಲಿತಾಂಶದ ಮೂಲಕ ಇದೇ ಟೂರ್ನಿಯ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಭಾರತ- ಜರ್ಮನಿ ಜೋಡಿ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 6-2, 6-7, 10-5 ರಲ್ಲಿ ಅಗ್ರಶ್ರೇಯಾಂಕದ ಆಟಗಾರರಾದ ಅಲೆಕ್ಸಾಂಡರ್ ಪೆಯಾ ಮತ್ತು ಬ್ರೂನೊ ಸೊರೇಸ್ ವಿರುದ್ಧ ಜಯ ಸಾಧಿಸಿತು.

ಬೋಪಣ್ಣ ಮತ್ತು ಬೆಗೆಮನ್ ಎಂಟರಘಟ್ಟದ ಪಂದ್ಯದಲ್ಲಿ ಫಿಲಿಪ್ಪಿನ್ಸ್‌ನ ಟ್ರೀಟ್ ಹ್ಯೂ ಮತ್ತು ಬ್ರಿಟನ್‌ನ ಡೊಮಿನಿಕ್ ಇಂಗ್ಲೊಟ್ ಅವರ ಸವಾಲನ್ನು ಎದುರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.