ಹೈಕೊ, ಚೀನಾ (ಐಎಎನ್‌ಎಸ್): ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಪಂಕಜ್ ಅಡ್ವಾಣಿ ಅವರು ಹೈನಾನ್ ದ್ವೀಪದ ರಾಜಧಾನಿ ಹೈಕೊದಲ್ಲಿ ನಡೆಯುತ್ತಿರುವ ‘ಹೈಕೊ ವಿಶ್ವ ಓಪನ್ ಸ್ನೂಕರ್ ಟೂರ್ನಿ’ಯಲ್ಲಿ ನಿರಾಸೆ ಕಂಡರು.
ಎಂಟು ಬಾರಿಯ ವಿಶ್ವ ಚಾಂಪಿಯನ್ ಪಂಕಜ್ ಬುಧವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 62-76, 87-15, 00-123, 62-53, 86-01, 75 -17, 39-94, 00-136, 17-86ರಲ್ಲಿ ಆತಿಥೇಯ ತಂಡದ ಡಿಂಗ್ ಜುನಾಹುಯಿ ಎದುರು ಸೋತರು.
ಒತ್ತಡದ ನಡುವೆಯೂ ಶ್ರೇಷ್ಠ ಪ್ರದರ್ಶನ ತೋರಿದ ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನ ಹೊಂದಿರುವ ಡಿಂಗ್ ಒಂಬತ್ತು ಫ್ರೇಮ್‌ಗಳ ಬಳಿಕ ಗೆಲುವು ತಮ್ಮದಾಗಿಸಿಕೊಂಡರು. ಮೊದಲ ಆರು ಫ್ರೇಮ್‌ಗಳಲ್ಲಿ ಪಂಕಜ್ 4–2ರಲ್ಲಿ ಮುನ್ನಡೆ ಹೊಂದಿದ್ದರು. ಆದರೆ, ಮರು ಹೋರಾಟ ತೋರಿದ ಚೀನಾದ ಆಟಗಾರ 4–4ರಲ್ಲಿ ಸಮಬಲ ಸಾಧಿಸಿದರು.
ಆದ್ದರಿಂದ ಒಂಬತ್ತನೇ ಸುತ್ತಿನ ಫ್ರೇಮ್ ಮಹತ್ವ ಪಡೆದುಕೊಂಡಿತ್ತು. ನಿರ್ಣಾಯಕ ಸುತ್ತಿನಲ್ಲಿ ಡಿಂಗ್ 86 ಪಾಯಿಂಟ್‌ಗಳನ್ನು ಕಲೆ ಹಾಕಿ ಗೆಲುವಿನ ನಗೆ ಚೆಲ್ಲಿದರು. ಬೆಂಗಳೂರಿನ ಪಂಕಜ್ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಕ್ಸಿಯಾವೊ ಗುವೊಡಾಂಗ್ ಎದುರು ಗೆಲುವು ಸಾಧಿಸಿದ್ದರು.
‘ನಾವಿಬ್ಬರೂ ಚೆನ್ನಾಗಿ ಆಡಿದೆವು. ಪಂಕಜ್ ಕಠಿಣ ಎದುರಾಳಿ. ಅವರು ಮೊದಲ ಫ್ರೇಮ್‌ನಲ್ಲಿ ಹೇಗೆ ಆಡಿದರು ಎನ್ನುವುದನ್ನು ತುಂಬಾ ಗಮನವಿಟ್ಟು ನೋಡಿದೆ. ಈ ಗೆಲುವು ಸಾಕಷ್ಟು ಆತ್ಮವಿಶ್ವಾಸ ಕೊಟ್ಟಿದೆ’ ಎಂದು ಡಿಂಗ್ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.