ADVERTISEMENT

ಸ್ನೂಕರ್: ಚಿತ್ರಾ ಮಗಿಮೈರಾಜ್‌ಗೆ ಕಂಚು

ಚುಟುಕು ಗುಟುಕು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2013, 19:30 IST
Last Updated 8 ಡಿಸೆಂಬರ್ 2013, 19:30 IST

ಡಗಾವ್‌ಪಿಲ್ಸ್, ಲಾಟ್ವಿಯಾ (ಪಿಟಿಐ/ ಐಎಎನ್‌ಎಸ್‌): ಕರ್ನಾಟಕದ ಚಿತ್ರಾ ಮಗಿಮೈರಾಜ್‌ ಇಲ್ಲಿ ನಡೆ ಯುತ್ತಿರುವ ಐಬಿಎಸ್‌ಎಫ್‌ ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇದು ಚಿತ್ರಾ ಅವರ ಅತ್ಯುತ್ತಮ ಸಾಧನೆ ಕೂಡ.

ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿ ಸೆಮಿಫೈನಲ್‌ ತಲುಪಿದ್ದ ಅವರು ಭಾನುವಾರ 75–29, 60–66, 23–65, 0–74, 33–66ರಲ್ಲಿ  ಬೆಲ್ಜಿಯಂನ ಆಟಗಾರ್ತಿ ವೆಂಡಿ ಜಾನ್ಸ್ ವಿರುದ್ಧ ಸೋಲು ಕಂಡರು. ಹಾಗಾಗಿ ಚಿತ್ರಾ ಕಂಚಿನ ಪದಕಕ್ಕೆ ಸಮಾಧಾನಪಡಬೇಕಾಯಿತು. ಸ್ನೂಕರ್‌ ಚಾಂಪಿಯನ್‌ಷಿಪ್‌ನ ನಾಲ್ಕರ ಘಟ್ಟದಲ್ಲಿ ಸೋಲುಕಂಡರೂ ಪದಕ ಲಭಿಸುತ್ತದೆ.

ಆರಂಭದಲ್ಲಿ ಉತ್ತಮ ಆಟವಾಡಿದ ಚಿತ್ರಾ ಮೊದಲ ಫ್ರೇಮ್‌ನಲ್ಲಿ ಜಯ ದಾಖಲಿಸಿದರು. ಆದರೆ ಮುಂದಿನ ನಾಲ್ಕೂ ಫ್ರೇಮ್‌ಗಳಲ್ಲಿ ಪಾರಮ್ಯ ಮೆರೆದ ಬೆಲ್ಜಿಯಂ ಆಟಗಾರ್ತಿ  ಫೈನಲ್‌ ಪ್ರವೇಶಿಸಿದರು.

ಚಿತ್ರಾ 2003ರಲ್ಲಿ ಮೊದಲ ಬಾರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿದ್ದರು. ಕ್ವಾರ್ಟರ್‌ ಫೈನಲ್‌ ಪ್ರವೇಶ ಅವರ ಇದುವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು.

ಮುಂದಿನ ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ 2014ರ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಜರುಗಲಿದೆ.

ಈಜು: ಜಗದಾಳೆ ಅಧ್ಯಕ್ಷ, ಸಿಂಧಿಯಾ ಕಾರ್ಯದರ್ಶಿ
ಬೆಂಗಳೂರು:
ಕರ್ನಾಟಕ ಈಜು ಸಂಸ್ಥೆಯ (ಕೆಎಸ್‌ಎ) ಅಧ್ಯಕ್ಷರಾಗಿ ನೀಲಕಂಠ ರಾವ್‌ ಆರ್‌.ಜಗದಾಳೆ ಹಾಗೂ ಕಾರ್ಯದರ್ಶಿಯಾಗಿ ಎಸ್‌.ಆರ್‌.ಸಿಂಧಿಯಾ ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳು: ಅಧ್ಯಕ್ಷ: ನೀಲಕಂಠ ರಾವ್‌್ ಆರ್‌.ಜಗದಾಳೆ. ಉಪಾಧ್ಯಕ್ಷರು: ಗೋಪಾಲ್‌ ಬಿ. ಹೊಸೂರ್‌, ಟಿ.ಡಿ.ವಿಜಯರಾಘವನ್‌, ದೀಪಾ ಶ್ರೀಧರ್‌. ಕಾರ್ಯದರ್ಶಿ: ಎಸ್‌.ಆರ್‌.ಸಿಂಧಿಯಾ. ಜಂಟಿ ಕಾರ್ಯದರ್ಶಿ: ರಕ್ಷಿತ್‌ ಎನ್‌.ಜಗದಾಳೆ ಹಾಗೂ ಎಂ.ಸತೀಶ್‌ ಕುಮಾರ್‌.

ಕ್ರಿಕೆಟ್‌: ಬಾಂಗ್ಲಾದಲ್ಲಿ ಆಡಲು ವಿಂಡೀಸ್ ನಕಾರ
ಢಾಕಾ (ಐಎಎನ್‌ಎಸ್):
ಭದ್ರತೆಯ ಕಾರಣವೊಡ್ಡಿ 19 ವರ್ಷದೊಳಗಿನವರ ವೆಸ್ಟ್ ಇಂಡೀಸ್ ತಂಡ ಬಾಂಗ್ಲಾದೇಶದ ವಿರುದ್ಧ ಚಿತ್ತಗಾಂಗ್‌ನಲ್ಲಿ ಆಡಲು  ನಿರಾಕರಿಸಿದೆ.

ವೆಸ್ಟ್ ಇಂಡೀಸ್ ತಂಡ ತಂಗಿದ್ದ ಹೊಟೇಲ್‌ ಸಮೀಪ ಶನಿವಾರ ರಾತ್ರಿ ಬಾಂಬ್‌ ಸ್ಫೋಟಗೊಂಡಿ ರುವುದರಿಂದ  ವಿಂಡೀಸ್ ಈ ನಿರ್ಧಾರ ಕೈಗೊಂಡಿದೆ.
‘ತಂಡದ ಆಟಗಾರರು ಹಾಗೂ ಸಿಬ್ಬಂದಿಯನ್ನು ಗುರಿಯಾಗಿಸಿ ಸ್ಫೋಟ ನಡೆಸಿಲ್ಲ. ಘಟನೆಯಿಂದಾಗಿ ಆಟಗಾರರಿಗೆ ಯಾವುದೇ ಅಪಾಯ      ಎದುರಾಗಿಲ್ಲ’ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.

ವಿಂಡೀಸ್ ಏಳು ಏಕದಿನ ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲು ಈ ತಿಂಗಳ ಆರಂಭದಲ್ಲಿ ಬಾಂಗ್ಲಾಕ್ಕೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.