ADVERTISEMENT

ಸ್ಪರ್ಧಾತ್ಮಕ ವಾತಾವರಣ ಖುಷಿ ನೀಡಿತು

ಪಿಟಿಐ
Published 5 ಜೂನ್ 2017, 19:30 IST
Last Updated 5 ಜೂನ್ 2017, 19:30 IST
ಭಾನುವಾರದ ಪಂದ್ಯದಲ್ಲಿ ಗಾಯಗೊಂಡ ಪಾಕ್ ಬೌಲರ್ ಇಮಾದ್ ಹುಸೇನ್ ಅವರನ್ನು ಸಂತೈಸಿದ ಭಾರತದ ಯುವರಾಜ್ ಸಿಂಗ್.  –ಎಎಫ್‌ಪಿ ಚಿತ್ರ
ಭಾನುವಾರದ ಪಂದ್ಯದಲ್ಲಿ ಗಾಯಗೊಂಡ ಪಾಕ್ ಬೌಲರ್ ಇಮಾದ್ ಹುಸೇನ್ ಅವರನ್ನು ಸಂತೈಸಿದ ಭಾರತದ ಯುವರಾಜ್ ಸಿಂಗ್. –ಎಎಫ್‌ಪಿ ಚಿತ್ರ   

ಬರ್ಮಿಂಗ್‌ಹ್ಯಾಮ್: ‘ಪಾಕಿಸ್ತಾನ ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ. ನಾನೊಬ್ಬ ಆಟಗಾರ ನಾಗಿ  ಪಂದ್ಯದ ಸಂದರ್ಭದಲ್ಲಿದ್ದ ಸ್ಪರ್ಧಾತ್ಮಕ ಮತ್ತು ಉತ್ಸಾಹದ ವಾತಾವರಣದಿಂದಾಗಿ ಅತೀವ ಖುಷಿ ಪಟ್ಟಿದ್ದೇನೆ’

–ಭಾನುವಾರ ರಾತ್ರಿ ಎಜ್‌ ಬಾಸ್ಟನ್‌ನಲ್ಲಿ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಎದುರು ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಮಾತುಗಳಿವು. 

ಪಾಕ್ ವಿರುದ್ಧ 124 ರನ್‌ಗಳ ಅಂತರದಿಂದ ಗೆದ್ದ ನಂತರ ಸುದ್ದಿಗಾರರು ಭಾರತ ಮತ್ತು ಪಾಕ್ ತಂಡಗಳ ನಡುವಣ ಜಿದ್ದಾಜಿದ್ದಿಯ ಕುರಿತ ಪ್ರಶ್ನೆಗೆ ಕೊಹ್ಲಿ ಉತ್ತರಿಸಿದ್ದು ಹೀಗೆ.

ಎರಡೂ ದೇಶಗಳ ಕ್ರಿಕೆಟ್ ಸಂಬಂಧ ಸುಧಾರಣೆ ಕುರಿತು ಪ್ರತಿಕ್ರಿಯಿಸಿದ ಅವರು, ‘ನಾವು ಇಲ್ಲಿ ಕ್ರೀಡೆಯಲ್ಲಿ ಸ್ಪರ್ಧಿಸಲು ಬಂದಿದ್ದೇವೆ. ಎರಡೂ ದೇಶಗಳ ಸಂಬಂಧದ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದರ ಬಗ್ಗೆ ನನ್ನ ಆಭಿಪ್ರಾಯ ಮುಖ್ಯವೂ ಅಲ್ಲ, ಸೂಕ್ತವೂ ಅಲ್ಲ’ ಎಂದರು. ಪಂದ್ಯಶ್ರೇಷ್ಠ ಗೌರವ ಗಳಿಸಿದ ಯುವರಾಜ್ ಸಿಂಗ್‌ ಆಟವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

ADVERTISEMENT

‘ಯುವರಾಜ್‌ ಅವರ ಅದ್ಭುತ ಬ್ಯಾಟಿಂಗ್ ನೋಡುತ್ತಿದ್ದಾಗ ನನ್ನ ಆಟ ಏನೇನೂ ಅಲ್ಲ.  ನಾನಿನ್ನೂ ಕ್ಲಬ್‌ ಮಟ್ಟದಲ್ಲಿ  ಆಡುವ ಬ್ಯಾಟ್ಸ್‌ಮನ್ ಎಂಬ ಭಾವನೆ ಉಂಟಾಗಿತ್ತು. ಯುವರಾಜ್‌  ಮಿಂಚಿನ ವೇಗದ ಅರ್ಧಶತಕದಿಂದಲೇ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಯಿತು. ಅದರಿಂದಾಗಿ ಪಾಕ್ ತಂಡವು ಒತ್ತಡ ಅನುಭವಿಸಿತು. ಟಾಸ್ ಗೆದ್ದು ಫೀಲ್ಡಿಂಗ್ ಮಾಡಿದ ಪಾಕ್ ತಂಡದ ಯೋಜನೆ ತಲೆಕೆಳಗಾಯಿತು’ ಎಂದು ಕೊಹ್ಲಿ  ಹೇಳಿದರು.

‘ನಾನು ಅರ್ಧಶತಕ ಪೂರೈಸಿದ ಮೇಲೂ ಬ್ಯಾಟ್ ಬೀಸಲು ಕಷ್ಟಪಡುತ್ತಿದ್ದೆ. ಆದರೆ ಕ್ರೀಸ್‌ಗೆ ಬಂದ ಕೂಡಲೇ ಯುವರಾಜ್‌  ಎಸೆತಗಳನ್ನು ಬೌಂಡರಿಗೆ ಕಳಿಸಿದರು. ಒತ್ತಡ ಕಡಿಮೆ ಮಾಡಿದರು. ಕೆಳಮಟ್ಟದ ಫುಲ್‌ಟಾಸ್ ಎಸೆತಗಳನ್ನೂ ಸಿಕ್ಸರ್‌ಗೆ ಬಾರಿಸಿದ ಅವರ ಆಟ ಅಮೋಘವಾದದ್ದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪಂದ್ಯದಲ್ಲಿ ಕೊಹ್ಲಿ ಅಜೇಯ 81 (68 ಎಸೆತಗಳು) ರನ್‌ ಗಳಿಸಿದರು.

‘ತಂಡದ ಆಟಗಾರರ ಬ್ಯಾಟಿಂಗ್ ಮತ್ತು ಬೌಲಿಂಗ್ ಉತ್ತಮವಾಗಿತ್ತು. ಆದರೆ ಕ್ಷೇತ್ರರಕ್ಷಣೆಯಲ್ಲಿ ಇನ್ನೂ ಸುಧಾರಣೆಗೊಳ್ಳುವ ಅವಶ್ಯಕತೆ ಇದೆ’ ಎಂದರು.

‘ಆರಂಭಿಕ ಜೋಡಿ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಚೆನ್ನಾಗಿ ಆಡಿದರು. ರೋಹಿತ್ ಕ್ರೀಸ್‌ನಲ್ಲಿ ಕಾಲೂರಲು ಸ್ವಲ್ಪ ಸಮಯ ತೆಗೆದುಕೊಂಡರು. ಆದರೆ ನಂತರ ಅವರ ಆಟ ಕಳೆಗಟ್ಟಿತ್ತು. ಮೊದಲ ವಿಕೆಟ್‌ ಜೊತೆಯಾಟದಲ್ಲಿ ಉತ್ತಮ ಮೊತ್ತ ಪೇರಿಸಿದ್ದು ತಂಡಕ್ಕೆ ಬಲ ತುಂಬಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.