ADVERTISEMENT

ಸ್ವೀಡನ್‌ ತಂಡದ ಕೈ ಹಿಡಿದ ವಿಎಆರ್‌

ಪೈಪೋಟಿ ನೀಡಿದ ಕೊರಿಯಾ ಆಟಗಾರರು; ಆ್ಯಂಡ್ರೆಸ್ ಮಿಂಚಿನ ಆಟ

ಏಜೆನ್ಸೀಸ್
Published 18 ಜೂನ್ 2018, 17:44 IST
Last Updated 18 ಜೂನ್ 2018, 17:44 IST
ಸ್ವೀಡನ್‌ನ ಮಾರ್ಕಸ್ ಬರ್ಜ್‌ ಅವರಿಂದ ಚೆಂಡು ಕಸಿದುಕೊಳ್ಳಲು ಕೊರಿಯಾದ ಕಿಮ್ ಯಾಂಗ್ ಗೋನ್‌ ಜಿಗಿದ ಕ್ಷಣ -ರಾಯಿಟರ್ಸ್ ಚಿತ್ರ
ಸ್ವೀಡನ್‌ನ ಮಾರ್ಕಸ್ ಬರ್ಜ್‌ ಅವರಿಂದ ಚೆಂಡು ಕಸಿದುಕೊಳ್ಳಲು ಕೊರಿಯಾದ ಕಿಮ್ ಯಾಂಗ್ ಗೋನ್‌ ಜಿಗಿದ ಕ್ಷಣ -ರಾಯಿಟರ್ಸ್ ಚಿತ್ರ   

ನಿಜ್ನಿ ನೊವ್‌ಗರೊಡ್: ಬಲಿಷ್ಠ ರಕ್ಷಣಾ ಕೋಟೆ ನಿರ್ಮಿಸಿದ ಕೊರಿಯಾ ತಂಡ ಸ್ವೀಡನ್‌ ಓಟಕ್ಕೆ ನಿರಂ ತರ ಅಡ್ಡಿಪಡಿಸಿತು. ಆದರೆ 65ನೇ ನಿಮಿಷದಲ್ಲಿ ವಿಎಆರ್‌ (ವಿಡಿಯೊ ಅಸಿ ಸ್ಟಂಟ್ ರೆಫರಿ) ಪದ್ಧತಿ ಸ್ವೀಡನ್‌ನ ಕೈ ಹಿಡಿಯಿತು.

ವಿಶ್ವಕಪ್ ಟೂರ್ನಿಯ ಸೋಮವಾರದ ಮೊದಲ ಪಂದ್ಯದಲ್ಲಿ ಆ್ಯಂಡ್ರೆಸ್ ಗ್ಯಾಂಕ್ವಿಸ್ಟ್ ಗಳಿಸಿದ ಗೋಲಿನ ನೆರವಿನಿಂದ ಈ ತಂಡ 1–0 ಗೋಲಿನ ಅಂತರದಲ್ಲಿ ಜಯ ಗಳಿಸಿತು.

ಪಂದ್ಯದಲ್ಲಿ ಸ್ವೀಡನ್‌ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಈ ತಂಡಗಳು ಹಿಂದೆ ಏಳು ಬಾರಿ ಮುಖಾಮುಖಿಯಾಗಿದ್ದಾಗ ಎರಡು ಗೋಲುಗಳು ಮಾತ್ರ ದಾಖಲಾಗಿದ್ದವು. ಸೋಮವಾರದ ಪಂದ್ಯದಲ್ಲೂ ಉಭಯ ತಂಡಗಳಿಗೆ ಗೋಲು ಬರ ಕಾಡಿತು.

ADVERTISEMENT

ಸ್ವೀಡನ್ ನಿರಂತರವಾಗಿ ಪ್ರಬಲ ಆಕ್ರಮಣ ನಡೆಸಿತು. ಆದರೆ ಕೊರಿ ಯಾದ ರಕ್ಷಣಾ ವಿಭಾಗದವರು ಅಷ್ಟೇ ಚಾಣಾಕ್ಷತನ ತೋರಿಸಿದರು. ಆದರೆ 65ನೇ ನಿಮಿಷದಲ್ಲಿ ಕೊರಿಯಾದ ಬದಲಿ ಆಟಗಾರ ಕಿಮ್‌ ಮಿನ್‌ ವೂ ಎಸಗಿದ ತಪ್ಪಿನಿಂದಾಗಿ ಸ್ವೀಡನ್‌ ಖಾತೆ ತೆರೆಯಿತು.

ವಿಕ್ಟರ್ ಕ್ಲಾಸೆನ್ ಅವರನ್ನು ಕಿಮ್ ಮಿನ್‌ ನೆಲಕ್ಕೆ ಕೆಡವಿದರು. ಪೆನಾಲ್ಟಿಗೆ ಸ್ವೀಡನ್‌ ಆಟಗಾರರು ಕೋರಿಕೆ ಸಲ್ಲಿಸಿದರು. ಆದರೆ ರೆಫರಿ ಅದನ್ನು ಮಾನ್ಯ ಮಾಡಲಿಲ್ಲ. ಹೀಗಾಗಿ ವಿಎಆರ್ ಮೊರೆ ಹೋಗಲಾಯಿತು. ಆ್ಯಂಡ್ರೆಸ್ ಗ್ಯಾಂಕ್ವಿಸ್ಟ್ ಗೋಲು ಗಳಿಸಿ ಮಿಂಚಿದರು. ವಿಶ್ವಕಪ್‌ನಲ್ಲಿ ಈ ಪದ್ಧತಿ ಬಳಸಿ ಗಳಿಸಿದ ಮೂರನೇ ಗೋಲಾಗಿದೆ ಇದೆ.

90ನೇ ನಿಮಿಷದಲ್ಲಿ ಸಮಬಲ ಸಾಧಿಸಲು ಕೊರಿಯಾಗೆ ಅವಕಾಶ ಇತ್ತು. ಹ್ವಾಂಗ್ ಹೀ ಚಾನ್‌ ಅವರು ತಮಗೆ ಲಭಿಸಿದ ಅವಕಾಶದಲ್ಲಿ ಹೆಡರ್ ಮಾಡಿ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸಲು ಪ್ರಯತ್ನಿಸಿದರು. ಆದರೆ ಚೆಂಡು ಗುರಿ ಮುಟ್ಟಲಿಲ್ಲ.

ಈ ಜಯದೊಂದಿಗೆ ಸ್ವೀಡನ್‌ ತಂಡ ಮೆಕ್ಸಿಕೊ ಜೊತೆ ‘ಎಫ್‌’ ಗುಂಪಿನಲ್ಲಿ ಅಗ್ರ ಸ್ಥಾನವನ್ನು ಹಂಚಿಕೊಂಡಿತು. ಮುಂದಿನ ಪಂದ್ಯದಲ್ಲಿ ಈ ತಂಡ ಜರ್ಮನಿಯನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.