ADVERTISEMENT

ಹಾಕಿ: ಏರ್ ಇಂಡಿಯಾಗೆ ಮಣಿದ ಐಎಎಫ್ ತಂಡ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

ಬೆಂಗಳೂರು: ದೇವಿಂದರ್ ವಾಲ್ಮೀಕಿ ತಂದಿತ್ತ ಮೂರು ಗೋಲುಗಳ ನೆರವಿನಿಂದ ಏರ್ ಇಂಡಿಯಾ ತಂಡದವರು ಇಲ್ಲಿ ನಡೆಯುತ್ತಿರುವ ಕೆಎಸ್‌ಎಚ್‌ಎ ಆಶ್ರಯದ `ಓಜೋನ್ ಗ್ರೂಪ್ ರಾಷ್ಟ್ರೀಯ ಹಾಕಿ ಲೀಗ್ ಚಾಂಪಿಯನ್‌ಷಿಪ್~ನ ಪಂದ್ಯದಲ್ಲಿ ಸುಲಭ ಭರ್ಜರಿ ಜಯ ಪಡೆದರು.

ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಏರ್ ಇಂಡಿಯಾ 5-1 ಗೋಲುಗಳಿಂದ ಐಎಎಫ್ ತಂಡವನ್ನು ಮಣಿಸಿತು.

ದೇವಿಂದರ್ ಅವರು ಪಂದ್ಯದ 15, 41 ಮತ್ತು 47ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು. ತಂಡದ ಇತರ ಎರಡು ಗೋಲುಗಳನ್ನು ಅರ್ಜುನ್ ಹಾಲಪ್ಪ (22 ಮತ್ತು 43) ಗಳಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಒಎನ್‌ಜಿಸಿ 5-1 ಗೋಲುಗಳಿಂದ ಫೋರ್ಟಿಸ್ ವಿರುದ್ಧ ಜಯ ಸಾಧಿಸಿತು. ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ವಿರಾಮದ ವೇಳೆಗೆ ವಿಜೇತ ತಂಡ 2-0 ಗೋಲುಗಳಿಂದ ಮುನ್ನಡೆಯಲ್ಲಿತ್ತು. ಗಗನ್‌ದೀಪ್ ಸಿಂಗ್ (12 ಮತ್ತು 60ನೇ ನಿ.) ಎರಡು ಗೋಲುಗಳನ್ನು ಗಳಿಸಿದರೆ, ರಮಣ್‌ದೀಪ್ ಸಿಂಗ್ (16), ಇಜುಪ್ ಎಕ್ಕಾ (63) ಹಾಗೂ ನವ್‌ದೀಪ್ (67) ತಲಾ ಒಂದು ಗೋಲು ತಂದಿತ್ತರು.
ಬಿಪಿಸಿಎಲ್ ಮತ್ತು ಪಿಎನ್‌ಬಿ ತಂಡಗಳ ನಡುವಿನ ಪಂದ್ಯ 2-2 ಗೋಲುಗಳ ಡ್ರಾದಲ್ಲಿ ಅಂತ್ಯ ಕಂಡಿತು. ರವಿಪಾಲ್ ಸಿಂಗ್ (25) ಮತ್ತು ಅಮೀರ್ ಖಾನ್ (69) ಅವರು ಬಿಪಿಸಿಎಲ್‌ಗೆ ಗೋಲು ತಂದಿತ್ತರೆ, ಪಿಎನ್‌ಬಿ ತಂಡದ ಎರಡೂ ಗೋಲುಗಳನ್ನು ಅಜಿತೇಶ್ ರಾಯ್ (49 ಮತ್ತು 66) ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.