ADVERTISEMENT

ಹಾಕಿ: ಡಿವೈಎಸ್‌ಎಸ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 19:30 IST
Last Updated 12 ಜುಲೈ 2012, 19:30 IST

ಬೆಂಗಳೂರು: ಒಟ್ಟು ಒಂಬತ್ತು ಪಾಯಿಂಟ್ಸ್ ಕಲೆ ಹಾಕಿ ಅಗ್ರಸ್ಥಾನ ಪಡೆದ ಮೈಸೂರಿನ ಡಿವೈಎಸ್‌ಎಸ್ ತಂಡ ಇಲ್ಲಿ ಕೊನೆಗೊಂಡ ಚಂದ್ರಾ ಗ್ರೂಪ್ ಕೆಎಸ್‌ಎಚ್‌ಎ/ಡಿವೈಎಸ್‌ಎಸ್ ಮಹಿಳಾ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.

ಗುರುವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಡಿವೈಎಸ್‌ಎಸ್ 3-1ಗೋಲುಗಳಿಂದ ಮಡಿಕೇರಿಯ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ತಂಡವನ್ನು ಸೋಲಿಸಿತು. ವಿಜಯಿ ತಂಡದ ಬಿ.ಎಂ. ಕೋಮಲಾ 37ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು.

ನಂತರ ಮುತ್ತಮ್ಮ ಹಾಗೂ ಸಂಧ್ಯಾ ಅವರು ಕ್ರಮವಾಗಿ 44 ಮತ್ತು 56ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ಎಸ್‌ಎಐ ತಂಡದ ಏಕೈಕ ಗೋಲನ್ನು ಪೊನ್ನಮ್ಮ ಎಂ.ಎನ್. 55ನೇ ನಿಮಿಷದಲ್ಲಿ ಗಳಿಸಿದರು.
ಚಾಂಪಿಯನ್ ತಂಡ 15,000 ರೂಪಾಯಿ ನಗದು ಬಹುಮಾನ ಪಡೆಯಿತು. ಹುಬ್ಬಳ್ಳಿಯ ವಾಸು ಸ್ಪೋರ್ಟ್ಸ್ ಕ್ಲಬ್ (ಎರಡನೆ ಸ್ಥಾನ 10,000 ರೂ.), ಮಡಿಕೇರಿಯ ಎಸ್‌ಎಐ (ಮೂರನೆ ಸ್ಥಾನ, 7,500 ರೂ) ಹಾಗೂ ಆರ್‌ಡಿಟಿ ಹಾಕಿ ಅಕಾಡೆಮಿ (ನಾಲ್ಕನೆ ಸ್ಥಾನ, 5000 ರೂ.) ಬಹುಮಾನ ಪಡೆದುಕೊಂಡಿತು.

ವೈಯಕ್ತಿಕ ಪ್ರಶಸ್ತಿಗಳು: ಅತ್ಯುತ್ತಮ ಗೋಲ್‌ಕೀಪರ್: ರಂಜಿತಾ (ವಾಸು ಸ್ಪೋರ್ಟ್ಸ್ ಕ್ಲಬ್). ಡಿಫೆಂಡರ್: ಯಶಸ್ವಿನಿ (ವಾಸು ಕ್ಲಬ್), ಹಾಫ್ ಬ್ಯಾಕ್: ಪೊನ್ನಮ್ಮ ಎಂ.ಎನ್. (ಎಸ್‌ಎಐ, ಮಡಿಕೇರಿ), ಫಾರ್ವಡ್: ಮುತ್ತಮ್ಮ ಪಿ.ಜಿ (ಡಿವೈಎಸ್‌ಎಸ್, ಮೈಸೂರು), ಉದಯೋನ್ಮುಖ ಆಟಗಾರ್ತಿ: ರೇಹಾ ಗೋಯಲ್ (ಶಾಂತಿ ನಗರ ಹಾಕಿ ಕ್ಲಬ್), ಟೂರ್ನಿ ಶ್ರೇಷ್ಠ ಆಟಗಾರ್ತಿ: ರಂಜಿತಾ ಎ.ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.