ADVERTISEMENT

ಹಾಕಿ: ತರಬೇತಿ ಕೇಂದ್ರ ಅಗತ್ಯ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 19:30 IST
Last Updated 25 ಸೆಪ್ಟೆಂಬರ್ 2011, 19:30 IST

ಬೆಂಗಳೂರು: `ಭಾರತ ಹಾಕಿ ತಂಡದ ರಾಷ್ಟ್ರೀಯ ಶಿಬಿರ ನಡೆಯುತ್ತಿರುವ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಕಾಯಂ ಹಾಕಿ ತರಬೇತಿ ಕೇಂದ್ರ ಆಗುವುದು ಅಗತ್ಯವಿದೆ. ಈ ಬಗ್ಗೆ ಕೋಚ್ ಮೈಕಲ್ ನಾಬ್ಸ್ ನನ್ನ ಜೊತೆ ಚರ್ಚೆ ನಡೆಸಿದ್ದಾರೆ~ ಎಂದು ಎಸ್‌ಎಐನ ಪ್ರಧಾನ ಕಾರ್ಯದರ್ಶಿ ಡಿ.ದೀಪಕ್ ವರ್ಮಾ ಹೇಳಿದರು.

`ಇಲ್ಲಿನ ಎಸ್‌ಎಐ ಕೇಂದ್ರವನ್ನು ಭವಿಷ್ಯದ ದಿನಗಳಲ್ಲಿ ಸಂಶೋಧನಾ ಹಾಗೂ ಅಭಿವೃದ್ಧಿ ಕೇಂದ್ರವನ್ನಾಗಿಯೂ ಮಾರ್ಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಬೇರೆ ದೇಶದವರು ಇಲ್ಲಿಗೆ ತರಬೇತಿಗೆ ಆಗಮಿಸಿದಾಗ ಇರಬೇಕಾದ ಸೌಲಭ್ಯ ಸೇರಿದಂತೆ ಇತರ ವಿಷಯಗಳ ಬಗ್ಗೆ ಯೋಜನೆ ರೂಪಿಸಲಾಗುವುದು~ ವರ್ಮಾ ವಿವರಿಸಿದರು.

ಓರ್ಡೊಸ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್ ಟ್ರೋಫಿ ಹಾಕಿ ಟೂರ್ನಿಯಲ್ಲಿ `ಚಾಂಪಿಯನ್ಸ್~ ಆದ ಭಾರತ ತಂಡದ ಆಟಗಾರರಿಗೆ ಹಮ್ಮಿಕೊಳ್ಳಲಾಗಿದ್ದ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತ ತಂಡ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದಾಗ ಕೇಂದ್ರ ಕ್ರೀಡಾ ಇಲಾಖೆ ಆಟಗಾರರಿಗೆ ತಲಾ 1.5 ಲಕ್ಷ ರೂ. ಬಹುಮಾನ ನೀಡುವುದಾಗಿ ಹೇಳಿತ್ತು. ಭಾನುವಾರ ಬೆಂಗಳೂರಿನ ಎಸ್‌ಎಐ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ 18 ಆಟಗಾರರಿಗೆ ಈ ಮೊತ್ತ ನೀಡಿತು.

ಈ ಸಮಾರಂಭಕ್ಕೂ ಮುನ್ನ ಎಸ್‌ಎಐ ವಿಭಾಗೀಯ ನಿರ್ದೇಶಕ ಎಸ್.ಎಸ್. ರಾಯ್ ಜೊತೆ ನಡೆಸಿದ ಸಭೆಯಲ್ಲಿ, ಜೂನಿಯರ್ ಹಾಗೂ ಸಬ್ ಜೂನಿಯರ್ ತಂಡಗಳಿಗೂ ವಿದೇಶಿ ಕೋಚ್ ನೇಮಿಸುವ ವಿಚಾರದ ಬಗ್ಗೆ ತೀರ್ಮಾನಿಸಲಾಯಿತು ಎಂದು ವರ್ಮಾ ತಿಳಿಸಿದರು.

ಹಾಕಿ ಕ್ರೀಡೆಗೆ ಉತ್ತೇಜನ ನೀಡಲು ಕಾರ್ಪೊರೇಟ್ ವಲಯದವರು ಆಸಕ್ತಿ ತೋರಿದ್ದಾರೆ. ಇದು ಆಶಾದಾಯಕ ಬೆಳವಣಿಗೆ ಎಂದ ವರ್ಮಾ, ಕೇವಲ ಕ್ರಿಕೆಟ್‌ನತ್ತ   ಒಲವು ತೋರುತ್ತಿದ್ದ ಅವರು ಈಗ ಹಾಕಿ, ಟೆನಿಸ್,      ಬ್ಯಾಸ್ಕೆಟ್‌ಬಾಲ್ ಕ್ರೀಡೆಗಳತ್ತಲೂ ಗಮನ ಹರಿಸುತ್ತಿರುವುದು ಸ್ವಾಗತಾರ್ಹ ಎಂದು ಹರ್ಷ ವ್ಯಕ್ತಪಡಿಸಿದರು.

ಈಗಾಗಲೇ ಕಾರ್ಪೊರೇಟ್ ವಲಯ ಟೆನಿಸ್ ಹಾಗೂ ಬ್ಯಾಸ್ಕೆಟ್‌ಬಾಲ್‌ನತ್ತಲೂ ಆಸಕ್ತಿ ತೋರುತ್ತಿರುವುದು ಸಂತಸದಾಯಕ. ಆದ್ದರಿಂದ ಈ ವಲಯದವರ ಜೊತೆಗೂಡಿ ಹಾಕಿ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದು ಅವರು ವಿವರಿಸಿದರು.

ಈ ಸಂದರ್ಭದಲ್ಲಿ ಕೋಚ್ ಮೈಕಲ್ ನಾಬ್ಸ್, ತಂಡಗಳ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಕಶ್ಯಪ್, ಎಸ್‌ಎಐ ವಿಭಾಗೀಯ ಅಧಿಕಾರಿ ಡಾ.ಎಸ್.ಎಸ್. ರಾಯ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.