ಪರ್ತ್ (ಪಿಟಿಐ): ಚೇತರಿಕೆಯ ಹಾದಿ ಹಿಡಿಯುತ್ತಾರೆ ಎನ್ನುವ ಆಶಯವನ್ನು ಹುಸಿಗೊಳಿಸಿದ ಭಾರತದ ಪುರುಷರು ಇಲ್ಲಿ ನಡೆಯುತ್ತಿರುವ ಲಾನ್ಸೊ ಅಂತರರಾಷ್ಟ್ರೀಯ ಸೂಪರ್ ಸರಣಿ ಹಾಕಿ ಟೂರ್ನಿಯ ಫೈನಲ್ ತಲುಪುವಲ್ಲಿ ವಿಫಲರಾಗಿದ್ದಾರೆ.
ಶನಿವಾರದ ಲೀಗ್ ಪಂದ್ಯದಲ್ಲಿ ಭಾರತ ತಂಡವು 1-4 ಗೋಲುಗಳ ಅಂತರದಿಂದ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತು. ಆದ್ದರಿಂದ ಫೈನಲ್ ಕನಸು ಕೂಡ ನುಚ್ಚುನೂರಾಯಿತು. ಈ ಪಂದ್ಯದಲ್ಲಿ ಪೂರ್ಣ ಪಾಯಿಂಟ್ಸ್ ಗಳಿಸಿದ್ದರೆ ಅಂತಿಮ ಹಣಾಹಣಿಯಲ್ಲಿ ಕಾಣಿಸಿಕೊಳ್ಳುವ ಅವಕಾಶವಿತ್ತು. ಭಾರತದವರು ಈಗ ಮೂರನೇ ಸ್ಥಾನಕ್ಕಾಗಿ ಭಾನುವಾರ ಪಾಕಿಸ್ತಾನ ವಿರುದ್ಧ ಆಡಬೇಕು.
ಲೀಗ್ ಹಂತದಲ್ಲಿ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ಫೈನಲ್ ತಲುಪಿದೆ. ಚಾಂಪಿಯನ್ ಪಟ್ಟಕ್ಕಾಗಿ ಅದು ನ್ಯೂಜಿಲೆಂಡ್ ಎದುರು ಹೋರಾಡಲಿದೆ. ಪಾಕಿಸ್ತಾನ ವಿರುದ್ಧದ ತನ್ನ ಕೊನೆಯ ಪಂದ್ಯವನ್ನು ನ್ಯೂಜಿಲೆಂಡ್ 1-1 ಗೋಲಿನಿಂದ ಡ್ರಾ ಮಾಡಿಕೊಂಡಿತು.
ಫೈನಲ್‌ಗೆ ಭಾರತದ ಮಹಿಳೆಯರು: ಇದೇ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಭಾರತದ ಮಹಿಳೆಯರು ಉತ್ತಮ ಪ್ರದರ್ಶನ ನೀಡುವ ಮೂಲಕ ಫೈನಲ್‌ಗೆ ರಹದಾರಿ ಪಡೆದಿದ್ದಾರೆ.
ಅತ್ಯಂತ ಮಹತ್ವದ್ದಾಗಿದ್ದ ಶನಿವಾರದ ಪಂದ್ಯವನ್ನು ಭಾರತದ ವನಿತೆಯರು 1-1ರಲ್ಲಿ ಮಲೇಷ್ಯಾ ವಿರುದ್ಧ ಡ್ರಾ ಮಾಡಿಕೊಂಡರು. ಮೂರು ತಂಡಗಳ ಹಣಾಹಣಿಯಲ್ಲಿ ಮಲೇಷ್ಯಾ ಎದುರು ನಿರಾಸೆ ಹೊಂದಿದ್ದರೆ ಪ್ರಶಸ್ತಿ ಕಡೆಗೆ ಇನ್ನೊಂದು ಹೆಜ್ಜೆ ಇಡುವ ಅವಕಾಶ ಇಲ್ಲದಾಗುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.